ಎಸೆಕ್ಸ್ ವಿರುದ್ಧ ಭಾರತ ನೀರಸ ಬೌಲಿಂಗ್

ಚೆಮ್ಸ್​ಫೋರ್ಡ್: ಮಧ್ಯಮ ಕ್ರಮಾಂಕದಲ್ಲಿ ಲಯ ಕಂಡ ಎಸೆಕ್ಸ್ ತಂಡ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬೌಲರ್​ಗಳಿಗೆ ಸವಾಲಾಯಿತು. ಪೌಲ್ ವಾಲ್ಟರ್(75ರನ್, 123ಎಸೆತ, 13ಬೌಂಡರಿ, 1ಸಿಕ್ಸರ್) ದಾಖಲಿಸಿದ ಆಸರೆಯ ಅರ್ಧಶತಕದ ನೆರವಿನಿಂದ ಎಸೆಕ್ಸ್ ತಂಡ ಭಾರತದ ಮೊದಲ ಇನಿಂಗ್ಸ್ ಮೊತ್ತದ ಸನಿಹ ತಲುಪಿ ಡಿಕ್ಲೇರ್ ಘೋಷಿಸಿಕೊಂಡಿತು. ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಭಾರತ ದ್ವಿತೀಯ ಇನಿಂಗ್ಸ್ ಆರಂಭಿಸಿದರೂ, ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ಡ್ರಾ ಎಂದು ಪ್ರಕಟಿಸಲಾಯಿತು.

5 ವಿಕೆಟ್​ಗೆ 237 ರನ್​ಗಳೊಂದಿಗೆ ಶುಕ್ರವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಎಸೆಕ್ಸ್ 8 ವಿಕೆಟ್​ಗೆ 359 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು. ಇದರಿಂದ ಭಾರತಕ್ಕೆ ಮೊದಲ ಇನಿಂಗ್ಸ್​ನಲ್ಲಿ 36 ರನ್​ಗಳ ಮುನ್ನಡೆ ಸಿಕ್ಕಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 21.2 ಓವರ್​ಗಳಲ್ಲಿ 2 ವಿಕೆಟ್​ಗೆ 89 ರನ್ ಪೇರಿಸಿ ಒಟ್ಟಾರೆ 125 ರನ್​ಗಳ ಮುನ್ನಡೆಯಲ್ಲಿದ್ದ ವೇಳೆ ಮಳೆ ಅಡ್ಡಿಪಡಿಸಿತು. ಇದರ ಬೆನ್ನಲ್ಲಿಯೇ ಪಂದ್ಯವನ್ನು ಮುಕ್ತಾಯಗೊಳಿಸಲಾಯಿತು.

ಪೌಲ್ ವಾಲ್ಟರ್ ಪ್ರತಿರೋಧ: 22ರನ್​ಗಳೊಂದಿಗೆ ಆಟ ಮುಂದುವರಿಸಿದ ಪೌಲ್ ವಾಲ್ಟರ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜತೆ ಜೇಮ್್ಸ ಫೋಸ್ಟರ್(47) ಜತೆ 6ನೇ ವಿಕೆಟ್​ಗೆ 91 ರನ್ ಜತೆಯಾಟವಾಡಿ ಭಾರತೀಯ ಬೌಲರ್​ಗಳಿಗೆ ಸವಾಲಾದರು. ಇವರನ್ನು ಬೇರ್ಪಡಿಸಿದ್ದು, ವೇಗಿ ಉಮೇಶ್ ಯಾದವ್. ಫೋಸ್ಟರ್, ಉಮೇಶ್ ಓವರ್​ನಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ನಂತರ ಮ್ಯಾಟ್ ಕೋಲ್ಸ್ ಶೂನ್ಯಕ್ಕೆ ವೇಗಿ ಇಶಾಂತ್​ಗೆ ವಿಕೆಟ್ ಒಪ್ಪಿಸಿದರೆ, ವಾಲ್ಟರ್​ರನ್ನು ಉಮೇಶ್ ಯಾದವ್ ಪೆವಿಲಿಯನ್ ಅಟ್ಟಿದರು. ಬಾಲಂಗೋಚಿಗಳಾದ ಆರನ್ ನಿಜ್ಜರ್(29*) ಮತ್ತು ಫಿರೋಜ್ ಖುಷಿ(14) ತಂಡಕ್ಕೆ ಚೇತರಿಕೆ ನೀಡುವುದರೊಂದಿಗೆ ಭಾರತದ ಬೌಲರ್​ಗಳಿಗೆ ಸವಾಲಾದರು. ಭಾರತ ತಂಡ ಪೇರಿಸಿದ ಮೊತ್ತದ ಸನಿಹ ಬಂದಂತೆ ಎಸೆಕ್ಸ್ ಡಿಕ್ಲೇರ್ ನಿರ್ಧಾರ ಮಾಡಿತು. ಅಂತಿಮ ದಿನ ಕೂಡ ಉಮೇಶ್-ಇಶಾಂತ್ ಬಿಟ್ಟು ಬೇರಾವ ಬೌಲರ್​ಗಳಿಂದಲೂ ಪರಿಣಾಮಕಾರಿ ನಿರ್ವಹಣೆ ಬರಲಿಲ್ಲ.

ಪೂಜಾರ-ಧವನ್ ವೈಫಲ್ಯ: ಇಂಗ್ಲೆಂಡ್ ಪ್ರವಾಸದ ನಿಗದಿತ ಓವರ್​ಗಳ ಸರಣಿಯಲ್ಲೂ ವೈಫಲ್ಯ ಕಂಡಿದ್ದ ಶಿಖರ್ ಧವನ್ ಇಲ್ಲಿನ ವೇಗದ ಪಿಚ್​ನಲ್ಲಿ 2ನೇ ಇನಿಂಗ್ಸ್​ನಲ್ಲೂ ಶೂನ್ಯಕ್ಕೆ ಔಟಾದರು. 3 ಎಸೆತಗಳನ್ನು ಎದುರಿಸಿ ವೇಗಿ ಮ್ಯಾಥ್ಯೂ ಕ್ವಿನ್ ಓವರ್​ನಲ್ಲಿ ಬೌಲ್ಡಾದರು. ಮೊದಲ ಇನಿಂಗ್ಸ್​ನಲ್ಲಿ ಧವನ್ ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದ್ದರು. ನಂತರ ಕನ್ನಡಿಗ ಕೆಎಲ್ ರಾಹುಲ್(36*ರನ್, 64ಎಸೆತ, 7ಬೌಂಡರಿ) ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ(23ರನ್, 35ಎಸೆತ, 5ಬೌಂಡರಿ) 2ನೇ ವಿಕೆಟ್​ಗೆ 36 ರನ್ ಜತೆಯಾಟವಾಡಿ ಚೇತರಿಕೆ ನೀಡಿದರೂ, ವಾಲ್ಟರ್ ಓವರ್​ನಲ್ಲಿ ಔಟಾದರು. ಅಜಿಂಕ್ಯ ರಹಾನೆ(19*ರನ್, 27 ಎಸೆತ, 3 ಬೌಂಡರಿ) ಹಾಗೂ ರಾಹುಲ್ 3ನೇ ವಿಕೆಟ್​ಗೆ 50 ಎಸೆತಗಳಲ್ಲಿ 49 ರನ್ ಜತೆಯಾಟವಾಡಿದರು.

ಅಶ್ವಿನ್​ಗೆ ಗಾಯದ ಭೀತಿ

ಸ್ಪಿನ್ ವಿಭಾಗದ ಪ್ರಮುಖ ಅನುಭವಿ ಬಲವಾಗಿರುವ ಆರ್ ಅಶ್ವಿನ್ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಗುರುವಾರ ಬಲ ಕೈಗೆ ಅಶ್ವಿನ್ ಏಟು ಮಾಡಿಕೊಂಡಿದ್ದು, ಗಾಯ ಗಂಭೀರವೋ ಅನ್ನುವುದು ಇನ್ನೂ ಖಚಿತವಾಗಿಲ್ಲ. ಇದಾದ ಬಳಿಕ ಗುರುವಾರ ಆಶ್ವಿನ್ ಬೌಲಿಂಗ್ ಮಾಡಲಿಲ್ಲ. ಆದರೆ ಅಂತಿಮ ದಿನ ಅವರು ಒಂದೆರಡು ಓವರ್ ಮಾಡಿರುವುದರಿಂದ ಅಲಭ್ಯತೆಯ ಭೀತಿಯನ್ನು ದೂರ ಮಾಡಿದೆ.

ಭಾರತ: ಮೊದಲ ಇನಿಂಗ್ಸ್ 395 ಮತ್ತು 16 ಓವರ್​ಗಳಲ್ಲಿ 2 ವಿಕೆಟ್​ಗೆ 53 (ರಾಹುಲ್ 19*, ರಹಾನೆ 4*, ಧವನ್ 0, ಚೇತೇಶ್ವರ ಪೂಜಾರ 23, ಕ್ವಿನ್ 5ಕ್ಕೆ 1, ವಾಲ್ಟರ್ 29ಕ್ಕೆ 1). ಎಸೆಕ್ಸ್: 94 ಓವರ್​ಗಳಲ್ಲಿ 8 ವಿಕೆಟ್​ಗೆ 359 (ಫೋಸ್ಟರ್ 42, ವಾಲ್ಟರ್ 75, ಮ್ಯಾಟ್ ಕೋಲ್ಸ್ 0, ಆರನ್ ನಿಜ್ಜರ್ 29*, ಫೆರೋಜ್ ಖುಷಿ 14*, ಉಮೇಶ್ ಯಾದವ್ 35ಕ್ಕೆ 4, ಇಶಾಂತ್ 59ಕ್ಕೆ 3, ಶಾರ್ದೂಲ್ 58ಕ್ಕೆ 1, ಅಶ್ವಿನ್ 21ಕ್ಕೆ 0, ಶಮಿ 68ಕ್ಕೆ 0).

ಆಂಡರ್​ಸನ್​ ಬೌಲಿಂಗ್​ ಸವಾಲು

ಚೆನ್ನೈ: ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಜೇಮ್್ಸ ಆಂಡರ್​ಸನ್​ರ ಬೌಲಿಂಗ್​ಅನ್ನು ಯಾವ ರೀತಿಯಲ್ಲಿ ಎದುರಿಸುತ್ತದೆ ಎನ್ನುವ ಆಧಾರದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ ಎಂದು ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್​ಗ್ರಾಥ್ ಅಭಿಪ್ರಾಯಪಟ್ಟಿದ್ದಾರೆ.

ಎಂಆರ್​ಎಫ್ ಪೇಸ್ ಫೌಂಡೇಷನ್​ನ ನಿರ್ದೇಶಕರಾಗಿರುವ ಮೆಕ್​ಗ್ರಾಥ್, ‘ಇಂಗ್ಲೆಂಡ್​ನ ವಾತಾವರಣದಲ್ಲಿ ಆಂಡರ್​ಸನ್​ರ ಸ್ವಿಂಗ್ ಎಸೆತಗಳನ್ನು ಎದುರಿಸುವುದೇ ದೊಡ್ಡ ಸವಾಲು. ಹಾಗಾಗಿ ಸರಣಿಯಲ್ಲಿ ಆಂಡರ್​ಸನ್ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ’ ಎಂದು ಹೇಳಿದರು.

ಗಿಲ್ಕ್ರಿಸ್ಟ್ ಪ್ರಧಾನಿ ಆಗಬಹುದು

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ದೇಶದ ಪ್ರಧಾನಿ ಪಟ್ಟವೇರುತ್ತಿದ್ದಾರೆ. ಇದೇ ರೀತಿಯ ಪ್ರಶ್ನೆ ಮೆಕ್​ಗ್ರಾಥ್​ಗೂ ಎದುರಾಯಿತು. ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಇಂಥ ವ್ಯಕ್ತಿ ಯಾರಿದ್ದಾರೆ ಎನ್ನುವ ಪ್ರಶ್ನೆಗೆ ಮೆಕ್​ಗ್ರಾಥ್, ‘ಆಡಂ ಗಿಲ್ಕ್ರಿಸ್ಟ್​ಗೆ ಈ ಅವಕಾಶವಿದೆ. ಅವರು ಸಂಧಾನ ಚತುರ ವ್ಯಕ್ತಿ’ ಎಂದಿದ್ದಾರೆ.