ಎಸಿಸಿ ಸಿಮೆಂಟ್ ಉತ್ಪಾದನೆ ಸ್ಥಗಿತ

ಗೌರಿಬಿದನೂರು: ಸ್ಥಳೀಯ ಲಾರಿ ಮಾಲೀಕರೊಂದಿಗಿನ ಸಂಘರ್ಷದಿಂದಾಗಿ ತೊಂಡೇಬಾವಿ ಎಸಿಸಿ ಸಿಮೆಂಟ್ ಕಾರ್ಖಾನೆ ತಾತ್ಕಾಲಿಕವಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ.

ಕಂಪನಿ ಅಧಿಕಾರಿಗಳು ನಮ್ಮೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಸಿಮೆಂಟ್ ಲೋಡಿಂಗ್​ಗೆ ಅವಕಾಶ ಕಲ್ಪಿಸದೆ ಹೊರ ರಾಜ್ಯ ಮತ್ತು ಜಿಲ್ಲೆಯವರಿಗೆ ಆದ್ಯತೆ ನೀಡುತ್ತಾರೆ. ನಾವು ಈ ಕಾರ್ಖಾನೆಯನ್ನೇ ನಂಬಿ ಸಾಲ ಮಾಡಿ ಲಾರಿಗಳನ್ನು ತಂದಿದ್ದೇವೆ. ಈಗ ಸಾಲದ ಕಂತಿನ ಹಣವನ್ನೂ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಥಳೀಯ ಲಾರಿ ಮಾಲೀಕರ ಆರೋಪ.

ಈ ಮಧ್ಯೆ ಕಳೆದ ಶುಕ್ರವಾರ ಎಸಿಸಿ ಸಿಮೆಂಟ್ ಕಂಪನಿ ಅಧೀನದಲ್ಲಿರುವ ಡಿಎಂಸಿ ಟ್ರಾನ್ಸ್ ಪೋರ್ಟ್ ಕಚೇರಿಗೆ ಸ್ಥಳೀಯ ಲಾರಿ ಮಾಲೀಕರು, ಚಾಲಕರು ನುಗ್ಗಿ, ಪೀಠೋಪಕರಣಗಳನ್ನು ಧ್ವಂಸ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಂಪನಿ ಅಧಿಕಾರಿಗಳು ಮಂಚೇನಹಳ್ಳಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ಕಂಪನಿ ಹಾಗೂ ಲಾರಿ ಮಾಲೀಕರ ನಡುವಿನ ಸಂಘರ್ಷ ತಾರಕಕ್ಕೇರಿದೆ.

ಸ್ಥಳೀಯರಿಗೆ ಆದ್ಯತೆ ನೀಡಲಿ: ಕಾರ್ಖಾನೆಯಿಂದ ಸ್ಥಳೀಯರಿಗೆ ಲಾಭಕ್ಕಿಂತ ನಷ್ಟ ಹೆಚ್ಚಾಗುತ್ತಿದೆ. ಕಾರ್ಖಾನೆ ಧೂಳಿನಿಂದಾಗಿ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಅಧಿಕ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಲ್ಲ. ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಕಾರ್ಖಾನೆ ಕಾರ್ಯನಿರ್ವಹಿಸಬೇಕು. ಸ್ಥಳೀಯರಿಗೆ ಆದ್ಯತೆ ನೀಡದಿದ್ದಲ್ಲಿ ಕಾರ್ಖಾನೆ ಮುಚ್ಚಬೇಕು ಎಂಬ ಕೂಗು ಕೇಳಿ ಬಂದಿದೆ.

ಸಚಿವರ ಸಂಧಾನ ವಿಫಲ: ಕಂಪನಿ ಹಾಗೂ ಲಾರಿ ಮಾಲೀಕರ ನಡುವೆ ಸಚಿವ ಶಿವಶಂಕರರೆಡ್ಡಿ ಫೋನ್​ನಲ್ಲಿ ಸಂಧಾನ ಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಸದ್ಯ ಸಚಿವರು ರಾಜ್ಯ ಪ್ರವಾಸದಲ್ಲಿದ್ದು, ಶನಿವಾರ ಆಗಮಿಸಿ ಮತ್ತೆ ಸಂಧಾನ ನಡೆಸಲಿದ್ದಾರೆ. ಈ ಮಧ್ಯೆ ಕಾರ್ಖಾನೆ ತನ್ನ ಉತ್ಪಾದನೆ ಸ್ಥಗಿತಗೊಳಿಸಿ, ಕಾರ್ಖಾನೆ ಒಳಗೆ ದುರಸ್ತಿ ನಡೆಸುತ್ತಿದೆ.

 

Leave a Reply

Your email address will not be published. Required fields are marked *