ಎಸಿಬಿ ಬಲೆಗೆ ಗ್ರಾಮಲೆಕ್ಕಾಧಿಕಾರಿ

ಶಿರಹಟ್ಟಿ: ರೈತನಿಂದ 6 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಶುಕ್ರವಾರ ಗದಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಾಚೇನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಗುಡಿಸಲಮನಿ ಬಂಧಿತ ಆರೋಪಿ. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ಖಾತೆ ಎಂಟ್ರಿ ಮಾಡಿಕೊಡಲು ರೈತ ಆನಂದ ನರ್ತಿ ಅವರಿಂದ ಗ್ರಾಮ ಲೆಕಾಧಿಕಾರಿ 10 ಸಾವಿರ ರೂ.ಲಂಚ ಕೇಳಿದ್ದರು. ತಿಂಗಳ ಪರ್ಯಂತ ಕಚೇರಿಗೆ ಅಲೆದಾಡಿಸಿ ಕೊನೆಗೆ 6 ಸಾವಿರ ರೂ. ಕೊಟ್ಟರೆ ಮಾತ್ರ ಖಾತೆ ಎಂಟ್ರಿ ಮಾಡಿಸಿಕೊಡುವುದಾಗಿ ತಿಳಿಸಿದ್ದರು. ಈ ಕುರಿತು ಆನಂದ ನರ್ತಿ ಗದಗ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಶುಕ್ರವಾರ ಆನಂದ ನರ್ತಿ ಅವರು ಶಿರಹಟ್ಟಿ ಅಟಲ್​ಜಿ ಜನಸ್ನೇಹಿ ಕೇಂದ್ರಕ್ಕೆ ಆಗಮಿಸಿ ಗ್ರಾಮ ಲೆಕ್ಕಾಧಿಕಾರಿಗೆ ಹಣ ನೀಡಲು ಮುಂದಾದರು. ಆದರೆ, ಆತ ಗ್ರಾಮ ಸಹಾಯಕ ಗಂಗಾಧರ ನಾಯಕನಿಗೆ ನೀಡಲು ತಿಳಿಸಿದ್ದನು. ಆತ ಹೇಳಿದಂತೆ 6 ಸಾವಿರ ರೂ. ಲಂಚ ನೀಡುವಾಗ ಎಸಿಬಿ ತಂಡ ದಾಳಿ ನಡೆಸಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕನನ್ನು ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಗುಡಿಸಲಮನಿ ತಪ್ಪೊಪ್ಪಿಕೊಂಡಿದ್ದಾನೆ. ಲಂಚ ಪಡೆದ ಆರೋಪ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಬಿ ಡಿಎಸ್​ಪಿ ವಾಸುದೇವ ಆರ್.ಎನ್. ಮಾಹಿತಿ ನೀಡಿದರು.

ಎಸಿಬಿ ಇನ್ಸ್​ಪೆಕ್ಟರ್ ತಾಸಪ್ಪಗೋಳ ಹಾಗೂ ಸಿಬ್ಬಂದಿ ಎಂ.ಎಂ. ಅಯ್ಯನಗೌಡ್ರ, ಎ.ಬಿ. ಜಕ್ಕಣ್ಣವರ, ಮಂಜುನಾಥ, ವೀರೇಶ, ಹೆಬಸೂರ, ಅಣ್ಣಿಗೇರಿ ತಾಯಣ್ಣವರ ಇದ್ದರು.