ಎಳೆಯರ ಬೆನ್ನಿಗೆ ಮಣಭಾರ ನ್ಯಾಯವೇ?

ಜಗದೀಶ ಹೊಂಬಳಿ ಹುಬ್ಬಳ್ಳಿ

ಸರ್ಕಾರ ಹೊಸ ನಿಯಮಾವಳಿ ರೂಪಿಸಿ ಮಕ್ಕಳ ಶಾಲಾ ಬ್ಯಾಗ್ ಹೊರೆ ತಗ್ಗಿಸುವಂತೆ ಕಟ್ಟಪ್ಪಣೆ ಮಾಡಿದರೂ ಶಾಲೆಗಳು ಪಾಲಿಸುತ್ತಿಲ್ಲ. ಇದರಿಂದ ಮಕ್ಕಳು ಭಾರವಾದ ಬ್ಯಾಗ್ ಹೊತ್ತು ನಿಟ್ಟುಸಿರು ಬಿಡುತ್ತ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಮುಂದುವರಿದಿದೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸುವಂತೆ ಸುಪ್ರೀಂಕೋರ್ಟ್, ಸರ್ಕಾರಕ್ಕೆ ಆದೇಶಿಸಿತ್ತು. ಇದರನ್ವಯ ಸರ್ಕಾರ 2 ತಿಂಗಳ ಹಿಂದೆಯೇ ತಜ್ಞರ ಸಭೆ ನಡೆಸಿ ಬ್ಯಾಗ್ ಹೊರೆ ತಗ್ಗಿಸುವ ಹೊಸ ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ಆದರೂ ಧಾರವಾಡ ಜಿಲ್ಲೆಯಲ್ಲಿ ನಿಯಮ ಜಾರಿಗೆ ಕಟ್ಟುನಿಟ್ಟಿನ ಕ್ರಮವಾಗುತ್ತಿಲ್ಲ. ಮಕ್ಕಳೇ, ಬಲು ಭಾರ ಹೊರಲು ಬೆನ್ನು ಗಟ್ಟಿ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ಹೇಳುವಂತಿದೆ ಹೆಚ್ಚಿನ ಶಾಲೆಗಳ ಸೂಚನೆ!

ಡಿಡಿಪಿಐ, ಬಿಇಒಗಳು ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಮಾಡಿ ಇಲಾಖೆಯ ಹೊಸ ನಿಯಮಾವಳಿ ತಿಳಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದರೂ ಬಹುತೇಕ ಶಾಲೆಗಳ ಶಿಕ್ಷಕರು ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ಮಕ್ಕಳು ಪುಸ್ತಕ ತುಂಬಿದ ಭಾರವಾದ ಬ್ಯಾಗ್ ಹೊತ್ತು ನಿಟ್ಟುಸಿರು ಬಿಡುತ್ತ ಶಾಲೆಗೆ ಹೋಗಿ ಬರಬೇಕಾಗಿದೆ. ಇನ್ನು ಕೆಲವು ಪಾಲಕರು ಮಕ್ಕಳ ಸ್ಥಿತಿ ಕಂಡು ತಾವೇ ಸ್ಕೂಲ್ ಬ್ಯಾಗ್ ಹೊತ್ತು ಹೋಗುವುದು ಕಂಡುಬರುತ್ತದೆ.

ನಿಯಮಾವಳಿಯಲ್ಲಿ ಏನಿದೆ?: ವಿದ್ಯಾರ್ಥಿ ದೇಹದ ಸರಾಸರಿ ತೂಕದ ಶೇ.10ರಷ್ಟು ಭಾರ ಮೀರದಂತೆ ಶಾಲೆಗೆ ತರುವ ಬ್ಯಾಗಿನ ತೂಕವನ್ನು ನಿಗದಿ ಪಡಿಸಲಾಗಿದೆ. 1ರಿಂದ 2ನೇ ತರಗತಿ ಮಕ್ಕಳಿಗೆ 1.5ರಿಂದ 2 ಕಿ.ಗ್ರಾಂ, 3ರಿಂದ 5ನೇ ತರಗತಿಗೆ 2ರಿಂದ 3 ಕಿ.ಗ್ರಾಂ, 6ರಿಂದ 8ನೇ ತರಗತಿಗೆ 3ರಿಂದ 4 ಕಿ.ಗ್ರಾಂ, 9ರಿಂದ 10ನೇ ತರಗತಿ ಮಕ್ಕಳಿಗೆ 4ರಿಂದ 5 ಕಿ.ಗ್ರಾಂ ತೂಕ ಬ್ಯಾಗ್ ಹೊಂದಿರಬೇಕೆಂಬ ನಿಯಮ ಇದೆ. 1ರಿಂದ 2ನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ ನೀಡದಂತೆ ಕ್ರಮ ವಹಿಸುವುದು. ಅಭ್ಯಾಸ ಚಟುವಟಿಕೆಗಳನ್ನು ಹಾಳೆಗಳಲ್ಲಿ ಮಾಡಿಸಿ ಫೈಲ್ ಮಾಡಿಸುವುದು. ಇವುಗಳನ್ನು ಶಾಲೆಯಲ್ಲಿಯೇ ಸಂಗ್ರಹಿಸಿಡುವುದು. ಅಭ್ಯಾಸ ಪುಸ್ತಕ ಬಳಸಿದಲ್ಲಿ ಇವುಗಳನ್ನೂ ಶಾಲೆಯಲ್ಲೇ ಸಂಗ್ರಹಿಸಿಡುವುದು. 100 ಹಾಳೆಗಳಿಗೆ ಮೀರಿದ ನೋಟ್ ಪುಸ್ತಕಗಳನ್ನು ನಿಗದಿಗೊಳಿಸಬಾರದು. ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ತೆಗೆದುಕೊಂಡು ಹೋಗುವ ಪಠ್ಯಪುಸ್ತಕ, ನೋಟ್​ಬುಕ್ ಲೇಖನ ಸಾಮಗ್ರಿ, ಕಲಿಕಾ ಉಪಕರಣ ಹಾಗೂ ಇನ್ನಿತರ ವಸ್ತುಗಳನ್ನು ತರಗತಿಯೊಳಗೆ ಶೇಖರಿಸಿಡಲು ಅನುಕೂಲತೆ ಕಲ್ಪಿಸುವಂತೆ ಸೂಚಿಸಿದೆ. ಕುಡಿಯುವ ನೀರು ಕೊಂಡೊಯ್ಯುವುದನ್ನು ತಪ್ಪಿಸಲು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ. ತಿಂಗಳ 3ನೇ ಶನಿವಾರ ‘ಬ್ಯಾಗ್ ರಹಿತ ದಿನ’ವಾಗಿ ಆಚರಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ(ಯೋಜನೆ) ಶಿಕ್ಷಣ ಇಲಾಖೆಗಳಿಗೆ ಆದೇಶಿಸಿದ್ದಾರೆ. ಆದರೆ, ಈ ನಿಯಮಗಳು ಅನುಷ್ಠಾನವಾಗುತ್ತಿಲ್ಲ.

ಪಾಲಿಸುತ್ತಿಲ್ಲ ನಿಯಮ: ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳ ಮಕ್ಕಳ ಬ್ಯಾಗ್​ಗಳು ತುಂಬಾ ಹೊರೆಯಾಗಿರುತ್ತವೆ. ಆಡಳಿತ ಮಂಡಳಿ, ಶಾಲಾ ಶಿಕ್ಷಕಿಯರಿಗೆ ಬ್ಯಾಗ್ ಹೊರೆ ತಗ್ಗಿಸುವಂತೆ ಸೂಚಿಸಿದರೂ ಪ್ರಯೋಜನವಾಗಿಲ್ಲ. ಮಕ್ಕಳಿಗಿಂತ ಅವರ ಬ್ಯಾಗ್​ಗಳ ಗಾತ್ರವೇ ಈಗಲೂ ದೊಡ್ಡದಾಗಿ ಕಾಣುತ್ತಿವೆ. ನಿಯಮದ ಪ್ರಕಾರ ಒಂದೂವರೆ ಕೆ.ಜಿ. ಇರಬೇಕಾದ ಶಾಲಾ ಮಕ್ಕಳ ಬ್ಯಾಗ್​ಗಳು 10 ಕೆಜಿ ಭಾರವಾಗಿವೆ.

ತೂಕ ಹೆಚ್ಚಾದರೆ ಬೆನ್ನುಹುರಿಗೆ ಹಾನಿ: ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ತಗ್ಗಿಸಲು ‘ಸೆಂಟರ್ ಫಾರ್ ಚೈಲ್ಡ್ ಆಂಡ್ ಲಾ’ ಸಹಯೋಗದಲ್ಲಿ ತಜ್ಞರ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಇದರನ್ವಯ ಮಾರ್ಗದರ್ಶಿ ನಿಯಮಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳ ದೇಹದ ತೂಕದ ಶೇ. 10ರಿಂದ 15ರಷ್ಟು ತೂಕದ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದು. ಅದಕ್ಕಿಂತ ಹೆಚ್ಚಿನ ಭಾರ ಹೊತ್ತರೆ ಬೆನ್ನುಹುರಿಗೆ ಹಾನಿಯಾಗುತ್ತದೆ ಎಂದು ಮೂಳೆ ತಜ್ಞರು ಶಿಫಾರಸು ಮಾಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸರ್ಕಾರ ಶಿಕ್ಷಣ ಇಲಾಖೆ ಸೂಚಿಸಿದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವುದಕ್ಕೆ ಜಿಲ್ಲೆಯಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಬಿಇಒಗಳಿಗೆ ಸರ್ಕಾರ ಸುತ್ತೋಲೆ, ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಬ್ಲಾಕ್ ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆ ಕರೆದು ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ. ಶಾಲಾ ಭೇಟಿ ಸಂದರ್ಭದಲ್ಲಿ ನಿಯಮ ಪಾಲನೆ ಕಂಡುಬರದಿದ್ದರೆ ಕ್ರಮ ಜರುಗಿಸಲಾಗುವುದು.

| ಗಜಾನನ ಮನ್ನಿಕೇರಿ ಡಿಡಿಪಿಐ ಧಾರವಾಡ

Leave a Reply

Your email address will not be published. Required fields are marked *