ಎಲ್ಲ 26 ನಾಮಪತ್ರಗಳು ಕ್ರಮಬದ್ಧ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು 14 ಅಭ್ಯರ್ಥಿಗಳು ಸಲ್ಲಿಸಿದ್ದ ಎಲ್ಲ 26 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ.

ಬಿಜೆಪಿ, ಜೆಡಿಎಸ್, ಪಿರಮಿಡ್ ಪಾರ್ಟಿ ಆಫ್ ಇಂಡಿಯಾ, ಬಿಎಸ್​ಪಿ, ರಿಪಬ್ಲಿಕನ್ ಸೇನಾ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸ್ಪರ್ಧಿಸಿರುವವರ ಜತೆಗೆ 7 ಮಂದಿ ಪಕ್ಷೇತರರು ಸಲ್ಲಿಸಿರುವ ನಾಮಪತ್ರಗಳೂ ಕ್ರಮಬದ್ಧವಾಗಿವೆ. ನಾಮಪತ್ರ ಹಿಂಪಡೆಯಲು ಏ.8ರವರೆಗೆ ಕಾಲಾವಕಾಶವಿದೆ.

ಮಧು ನಾಮಪತ್ರಕ್ಕೆ ಬಿಜೆಪಿ ಆಕ್ಷೇಪ:ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ನಾಮಪತ್ರಗಳಲ್ಲಿ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ತಿರಸ್ಕರಿಸಬೇಕು ಎಂದು ಬಿಜೆಪಿ ಪ್ರಮುಖರು ಜಿಲ್ಲಾ ಚುನಾವಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಕುರಿತು ಲಿಖಿತವಾಗಿ ಯಾವುದೇ ದೂರು ದಾಖಲಿಸಿಲ್ಲ. ಆದರೆ ತಮ್ಮ ಆಕ್ಷೇಪಣೆಗಳನ್ನು ದಾಖಲು ಮಾಡುವಂತೆ ಒತ್ತಾಯಿಸಿದ್ದಾರೆ.

ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಮೂದು ಮಾಡಿರುವ ಬಂಗಾರ ಹಾಗೂ ಬೆಳ್ಳಿ ಸಾಮಗ್ರಿಗಳ ಬಗ್ಗೆ ನಿಖರವಾದ ಮೌಲ್ಯ ತಿಳಿಸಿಲ್ಲ. ಜಮೀನಿನ ವಿಸ್ತೀರ್ಣವನ್ನೂ ನಿಖರವಾಗಿ ನಮೂದು ಮಾಡಿಲ್ಲ ಎಂಬುದು ಬಿಜೆಪಿ ಆಕ್ಷೇಪಣೆ.