ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡಿ

ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ತಾಲೂಕು ಕಚೇರಿ ಮುಂಭಾಗ ಧರಣಿ ಕುಳಿತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥ್​ರೆಡ್ಡಿ ಮಾತನಾಡಿ, 2018ನೇ ಸಾಲಿನ ಬಜೆಟ್​ನಲ್ಲಿ ರಾಜ್ಯ ಸರ್ಕಾರವು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡುವುದಾಗಿ ಘೊಷಿಸಿತ್ತು. ಆದರೆ, ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬರದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ರೈತರು, ಕೂಲಿಕಾರ್ವಿುಕರು ಸೇರಿ ಹಲವರು ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದಾರೆ. ಕುಟುಂಬ ನಿರ್ವಹಣೆ ನಡುವೆ ಮಕ್ಕಳನ್ನು ಓದಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಶಾಲಾ ಕಾಲೇಜುಗಳು ಡೊನೇಷನ್ ಹಾವಳಿ ಪೀಡಿಸುತ್ತಿದೆ. ಇದರ ನಡುವೆ ಸೂಕ್ತ ಸವಲತ್ತು ಒದಗಿಸಿ ಪ್ರೋತ್ಸಾಹಿಸಬೇಕಾದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಹಿಂದೆ ಹಣದ ಸಮಸ್ಯೆ ನೆಪದಲ್ಲಿ ಘೊಷಣೆ ಅನುಷ್ಠಾನಗೊಳಿಸಲಿಲ್ಲ. ಈಗಲಾದರೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಚಿತ ಬಸ್​ಪಾಸ್ ಒದಗಿಸಬೇಕೆಂದು ಒತ್ತಾಯಿಸಿದರು. ಗ್ರೇಡ್-2 ತಹಸೀಲ್ದಾರ್ ತುಳಸಿಗೆ ಮನವಿ ಸಲ್ಲಿಸಲಾಯಿತು.

ಎಬಿವಿಪಿ ಜಿಲ್ಲಾ ಸಂಚಾಲಕ ವಿ.ಮಲ್ಲಿಕಾರ್ಜುನ್, ಸಹ ಸಂಚಾಲಕ ಜಿ.ವಿಜಯ್ಕುಮಾರ್, ತಾಲೂಕು ಸಂಚಾಲಕ ಅಖಿಲ್, ನಗರ ಕಾರ್ಯದರ್ಶಿ ಅಮಿತ್ ರೆಡ್ಡಿ, ವಿದ್ಯಾರ್ಥಿ ಮುಖಂಡರಾದ ಸುಮಯಾ ಭಾನು, ನಿವೇದಿತಾ, ಶ್ವೇತಾ, ನಯನ, ಲಕ್ಷ್ಮೀ ಮತ್ತಿತರರಿದ್ದರು.

Leave a Reply

Your email address will not be published. Required fields are marked *