ಎಲ್ಲ ರೈತರಿಗೂ ಶೀಘ್ರ ವಿಮೆ ಹಣ

ಮುಂಡರಗಿ: ರೈತರ ಫಸಲ್ ಬಿಮಾ ಯೋಜನೆಯ ಹಣ ವಿತರಿಸುವಲ್ಲಿ ಕೆಲವು ತಾಂತ್ರಿಕ ತೊಂದರೆ ಉಂಟಾಗಿವೆ. ಸಮಸ್ಯೆ ಪರಿಹರಿಸಿ ಎಲ್ಲ ರೈತರಿಗೂ ಹಣ ದೊರೆಯುವಂತೆ ಮಾಡಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ತಾಲೂಕಿನ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ರೈತರಿಗೆ ಶಾಶ್ವತವಾಗಿ ಆರ್ಥಿಕ ನೆರವು ನೀಡಬೇಕು ಎನ್ನುವ ಕಾರಣದಿಂದ ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ ದೊರೆಯಲಿದೆ ಎಂದು ತಿಳಿಸಿದರು.
ದೇಶಾದ್ಯಂತ ನಿತ್ಯ ಸರಾಸರಿ 29 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ವಿುಸಲಾಗುತ್ತಿದೆ. ರಾಜ್ಯದಲ್ಲಿ 5 ಸಾವಿರ ಕಿ.ಮೀ.ಗಿಂತಲೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ನಿರ್ವಿುಸಲಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 850 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ವಿುಸಿದ್ದೇವೆ. ಹಾವೇರಿ ಕ್ಷೇತ್ರಕ್ಕೆ 260 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಿಂದ ಅನುದಾನ ನೀಡಲಾಗಿದೆ. ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಹಲವಾರು ರಸ್ತೆ ಹಾಗೂ ರೈಲು ಸಂಚಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ದೇಶದಲ್ಲಿ 32 ಕೋಟಿ ಬಡವರು ಜನ್​ಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಸುಮಾರು 90 ಸಾವಿರ ಕೋಟಿ ರೂ. ಬಡವರ ಬ್ಯಾಂಕ್ ಖಾತೆಯಲ್ಲಿ ಹಣ ಜಮೆ ಆಗಿದೆ. ಆಧಾರ್ ಲಿಂಕ್​ನಿಂದಾಗಿ ದೇಶದಲ್ಲಿ 97 ಲಕ್ಷ ಅಕ್ರಮ ಬೋಗಸ್ ಪಡಿತರ ಚೀಟಿ ರದ್ದು ಮಾಡಲಾಗಿದೆ. ಇದರಿಂದ ವಾರ್ಷಿಕ ಅಂದಾಜು 12 ಸಾವಿರ ಕೋಟಿ ರೂ. ಲೂಟಿ ತಪ್ಪಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ ರಾಜ್ಯ ಹಾಗೂ ದೇಶದಲ್ಲಿ ಅಕ್ರಮ ಹಣಕಾಸಿನ ವ್ಯವಹಾರ ಸ್ಥಗಿತಗೊಂಡಿದೆ. ಸರ್ಕಾರ ಜಾರಿಗೆ ತರುತ್ತಿರುವ ಎಲ್ಲ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುತ್ತಿವೆ. ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿದ್ದು, ಬಡ ಜನರು ನಿರಾಳವಾಗಿದ್ದಾರೆ ಎಂದರು.

ಶಾಸಕ ರಾಮಣ್ಣ ಲಮಾಣಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಬಸವರಾಜ ಬಿಳಿಮಗ್ಗದ, ಕುಮಾರಸ್ವಾಮಿ ಹಿರೇಮಠ, ಕೊಟ್ರೇಶ ಬಳ್ಳೊಳ್ಳಿ, ಅಂದಪ್ಪ ಉಳ್ಳಾಗಡ್ಡಿ, ವೆಂಕನಗೌಡ ಪಾಟೀಲ, ಎಸ್.ವಿ. ಪಾಟೀಲ, ಗುರುಪಾದಪ್ಪ ಹಾವಿನಾಳ, ಮಹಾಂತೇಶ ಕೊರಡಕೇರಿ, ಇದ್ದರು.