ಎಲ್ಲ ಭಾಷೆಗಳಿಗೂ ಸಿದ್ಧಾಂತ ಶಿಖಾಮಣಿ ಅನುವಾದ

ಚಿಕ್ಕಮಗಳೂರು: ವೀರಶೈವ ಧರ್ಮದ ಪ್ರಮುಖ ಗ್ರಂಥ ಸಿದ್ಧಾಂತ ಶಿಖಾಮಣಿಯನ್ನು ವರ್ಷದೊಳಗೆ ಎಲ್ಲ ವಿದೇಶಿ ಭಾಷೆಗಳಿಗೂ ಅನುವಾದ ಮಾಡಲಾಗುವುದು ಎಂದು ಕಾಶಿ ಜಂಗಮವಾಡಿ ಮಠಾಧೀಶ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಹೇಳಿದರು.

ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಸಹಯೋಗದಲ್ಲಿ ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಧರ್ಮ ಸಮ್ಮೇಳನದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಕೆಲವರು ಮನುಷ್ಯರಾಗಿದ್ದರೂ ಆಹಾರ, ವಿಹಾರಗಳಲ್ಲಿ ಇಂದು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆ. ಹಿಂದೆ ಊಟ ಮಾಡುವವರು ಕುಳಿತು, ಊಟ ಬಡಿಸುವವರು ಓಡಾಡುತ್ತಿದ್ದರು. ಇಂದು ಅದು ಅದಲುಬದಲಾಗಿ ಬಡಿಸುವವರು ಕುಳಿತಿರುತ್ತಾರೆ. ಊಟ ಮಾಡುವವರು ಓಡಾಡುತ್ತ ಊಟ ಮಾಡುತ್ತಾರೆ ಎಂದು ಹೇಳಿದರು.

ಅನ್ನದಾನ ಶ್ರೇಷ್ಠವಾದ ದಾನ, ಮನುಷ್ಯನಿಗೆ ಮೊದಲು ಬೇಕಾಗಿರುವುದು ಅನ್ನ. ಸಕಲ ಜೀವಿಗಳೂ ಅನ್ನಕ್ಕಾಗಿಯೇ ಬದುಕುತ್ತವೆ. ಹಾಗಾಗಿ ಹಸಿದವರಿಗೆ ಅನ್ನ ನೀಡುವುದು ಶ್ರೇಷ್ಠ. ವಿದ್ಯಾದಾನ ಅನ್ನದಾನಕ್ಕಿಂತಲೂ ಅತ್ಯಂತ ಶ್ರೇಷ್ಠ. ಅನ್ನದಿಂದ ಕ್ಷಣಿಕ ತೃಪ್ತಿ ದೊರೆಯುತ್ತದೆ. ಆದರೆ ಮನುಷ್ಯ ಗಳಿಸಿದ ಜ್ಞಾನ ಆತನ ಜೀವನದುದ್ದಕ್ಕೂ ಉಪಯೋಗಕ್ಕೆ ಬರುತ್ತದೆ ಎಂದರು.

ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತಣಾಡಿ, ವೀರಶೈವ ಧರ್ಮದ ಬಗ್ಗೆ ಅತ್ಯಂತ ನಿಖರವಾಗಿ ಹೇಳಬಲ್ಲವರಲ್ಲಿ ಕಾಶಿ ಮಠಾಧೀಶರು ಪ್ರಮುಖರು ಎಂದು ಹೇಳಿದರು. ಯಡಿಯೂರು ಮಠಾಧೀಶ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ಮಠಾಧೀಶರು ಶಾಲಾ ಕಾಲೇಜು ಮತ್ತು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವುದಕ್ಕೆ ಮೂಲ ಪ್ರೇರಣೆ ಕಾಶಿ ಜಂಗಮವಾಡಿ ಮಠ ಎಂದು ಸ್ಮರಿಸಿದರು.

ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ ಅವರು ಧರ್ಮ ಸಮ್ಮೇಳನ ಮತ್ತು ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿದರು. ಪಂಚಾಚಾರ್ಯ ಸೇವಾ ಸಮಿತಿ ಪದಾಧಿಕಾರಿಗಳು, ದಾನಿಗಳು ಮತ್ತು ಗಣ್ಯರಿಗೆ ಕಾಶಿ ಮಠಾಧೀಶರು ಗುರುರಕ್ಷೆ ನೀಡಿದರು.

ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ಕಟ್ಟಿಗೇಹಳ್ಳಿ ಮಠದ ಮಂಜುನಾಥಯ್ಯ ಅಧ್ಯಕ್ಷತೆ ವಹಿಸಿದ್ದರು. ನಂದಿಪುರ ಹಿರೇಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ತೆಂಡೇಕೆರೆ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಮಾಜಿ ಅಧ್ಯಕ್ಷ ಸಿ.ಬಿ.ಮಲ್ಲೇಗೌಡ, ರೇಣುಕಾಚಾರ್ಯ ಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ.ಪರಮೇಶ್ವರಪ್ಪ ಇದ್ದರು.

ಸಿದ್ಧಾಂತ ಶಿಖಾಮಣಿ ಆಪ್: ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಈಗಾಗಲೇ ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಇಂಗ್ಲಿಷ್ ಸೇರಿ 18 ಭಾಷೆಗಳಿಗೆ ಅನುವಾದಿಸಲಾಗಿದೆ. ವರ್ಷದೊಳಗೆ ಇತರೆ ವಿದೇಶಿ ಭಾಷೆಗಳಿಗೂ ಅನುವಾದಿಸುವ ಜತೆಗೆ ಸಿದ್ಧಾಂತ ಶಿಖಾಮಣಿ ಆಪ್ ಮತ್ತು ಅದರ ಪಾರಾಯಣದ ಧ್ವನಿಮುದ್ರಿಕೆ ಹೊರತಂದು ವೆಬ್​ಸೈಟ್​ನಲ್ಲಿ ಅಫ್​ಲೋಡ್ ಮಾಡಲಾಗುವುದು. ವೆಬ್​ಸೈಟ್​ಗೆ ಪ್ರಧಾನ ಮಂತ್ರಿ ಚಾಲನೆ ನೀಡುವರು ಎಂದು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಭಕ್ತರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಉಚಿತವಾಗಿ ತಮ್ಮ ಮೊಬೈಲ್​ನಲ್ಲೇ ಸಿದ್ಧಾಂತ ಶಿಖಾಮಣಿ ಓದಬಹುದು ಅಥವಾ ಕೇಳಬಹುದು ಎಂದರು.

Leave a Reply

Your email address will not be published. Required fields are marked *