ಶಿವಮೊಗ್ಗ: ಜಿಲ್ಲೆಯ ಎಲ್ಲ 271 ಗ್ರಾಪಂ ವ್ಯಾಪ್ತಿಯ ಕೆರೆಗಳ ಸುತ್ತ ಕನಿಷ್ಠ 3 ಲಕ್ಷ ಸಸಿ ನೆಡುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ವೀರಣ್ಣನಬೆನವಳ್ಳಿ ಕೆರೆ ದಂಡೆಯಲ್ಲಿ ಶನಿವಾರ 2 ಲಕ್ಷ ಸಸಿ ನೆಡುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳ ಸುತ್ತ 1 ಸಾವಿರ ಸಸಿಗಳನ್ನು ನೆಡುವ ಕಾರ್ಯ ಆರಂಭಿಸಲಾಗಿದೆ. ಇದರಿಂದ ಕೆರೆಗಳಿಗೆ ಗಡಿಗಳನ್ನು ಗುರುತಿಸಿ ಒತ್ತುವರಿ ತಡೆಯಲು ಸಾಧ್ಯ ಎಂದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಂತರ್ಜಲ ಚೇತನ ಯೋಜನೆಯಡಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ನಗರ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ತೆರವುಗೊಳಿಸಲಾಗುವ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಡಲು ಈಗಾಗಲೇ ಸೂಚಿಸಿದ್ದು, ಸಸಿಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು.
ರೈತರ ಜಮೀನಲ್ಲಿ 3.69 ಲಕ್ಷ ಸಸಿ: ಸಾಮಾಜಿಕ ಅರಣ್ಯ ವಿಭಾಗದಿಂದ 77 ಹೆಕ್ಟೇರ್ ಬ್ಲಾಕ್ ನೆಡುತೋಪಿನಲ್ಲಿ 84,700 ಗಿಡ, 55 ಕಿ.ಮೀ. ರಸ್ತೆ ಬದಿ ನೆಡುತೋಪಿನಲ್ಲಿ 15 ಸಾವಿರ ಸಸಿ ಮತ್ತು ಕೃಷಿ ಅರಣ್ಯ ಕಾರ್ಯಕ್ರಮದಡಿ ರೈತರ ಜಮೀನಿನಲ್ಲಿ 466 ಹೆಕ್ಟೇರ್ ವಿಸ್ತೀರ್ಣದಲ್ಲಿ 3.69 ಲಕ್ಷ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ದೇಸಾಯಿ ಹೇಳಿದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರ ಸಸಿ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 1 ಸಾವಿರ ಸಸಿಗಳನ್ನು ನೆಡಲು ಈಗಾಗಲೇ ಸೂಚಿಸಲಾಗಿದೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯೀಕರಣ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನೆಡಲಾಗಿರುವ ಸಸಿಗಳನ್ನು ಸರಿಯಾಗಿ ನಿರ್ವಹಿಸುವುದು ಸಹ ಗ್ರಾಪಂ ಜವಾಬ್ದಾರಿ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಹೇಳಿದರು.