ಗುತ್ತಲ: ಪಟ್ಟಣದಲ್ಲಿ ನಡೆಯುವ ಸೋಮವಾರ ಸಂತೆ ದಿನ ವ್ಯಾಪಾರಸ್ಥರು ರಾಣೆಬೆನ್ನೂರ ರಸ್ತೆ ಆಕ್ರಮಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಪ್ರತಿ ಸೋಮವಾರದ ಸಂತೆ ಪ.ಪಂ. ಹತ್ತಿರದ ಆಂಜನೇಯ ದೇವಸ್ಥಾನದಿಂದ ಆರಂಭವಾಗಿ ಪೇಟೆ ಬಸವೇಶ್ವರ ದೇವಸ್ಥಾನದವರೆಗೂ ಹಾಗೂ ಮಸೀದಿವರೆಗೂ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಸಂತೆ ಎಲ್ಲೆಂದರಲ್ಲಿ ನಡೆಯುತ್ತಿದ್ದು, ಜನರಿಗೆ ತೀವ್ರ ತೊಂದರೆಯಾಗಿದೆ. ವಾಹನ ಸವಾರರಿಗಂತೂ ಇಲ್ಲಿ ಸಂಚರಿಸುವುದು ಫಜೀತಿ ತಂದಿದೆ.
ಸಂತೆ ದಾರಿ ತಪ್ಪಿರುವ ಕಾರಣ ರಾಣೆಬೆನ್ನೂರ ರಸ್ತೆಯ ಬಲಭಾಗದಲ್ಲಿನ ಪಾದಚಾರಿ ಮಾರ್ಗದಲ್ಲಿ ಜನರು ವಾಹನಗಳನ್ನು ನಿಲ್ಲಿಸುತ್ತಿದ್ದು, ಎಡಭಾಗದಲ್ಲಿ ತರಕಾರಿ ಸೇರಿ ವಿವಿಧ ವ್ಯಾಪಾರಿಗಳು ಅಂಗಡಿ ಹಾಕುತ್ತಿದ್ದಾರೆ.
ಇನ್ನು ಕನ್ನಡ ಹೆಣ್ಣು ಮಕ್ಕಳ ಶಾಲೆಯ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಆರಂಭಿಸಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಮೊದಲಿನ ಜಾಗ ಬಿಟ್ಟು ಹೊಸ ಜಾಗದಲ್ಲಿನ ಸಂತೆಯಿಂದ ಪ್ರತಿ ಸೋಮವಾರದ ಸಂತೆ ನಂಬಿಕೊಂಡ ಈ ಹಿಂದಿನಿಂದ ವ್ಯಾಪಾರ-ವಹಿವಾಟು ಮಾಡುತ್ತಿದ್ದ ಜನರಿಗೆ ಅನ್ಯಾಯವಾಗುತ್ತಿದೆ. ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಸಂತೆಯ ಸ್ಥಾನ ಬದಲಾಗುವುದಿಲ್ಲ ಎಂಬ ಕಾನೂನು ಇದೆ. ಆದರೆ, ಇಲ್ಲಿ ಯಾರ ಗಮನಕ್ಕಿಲ್ಲದೆ ಸಂತೆ ಸ್ಥಳ ಬದಲಾಗಿದೆ. ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.
ಪಟ್ಟಣದ ಸೋಮವಾರ ಸಂತೆಗೆ ಗುತ್ತಲ ಸುತ್ತಮುತ್ತಲಿನ 10ಕ್ಕೂ ಅಧಿಕ ಗ್ರಾಮಗಳ ಸಾವಿರಾರು ಜನರು ಆಗಮಿಸುತ್ತಾರೆ. ಹೊಸ ಸ್ಥಳ, ರಸ್ತೆ ಆಕ್ರಮಿಸಿ ವ್ಯಾಪಾರ ಮಾಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸಂತೆಗೆ ಬರುವ ಸಾರ್ವಜನಿಕರ ಒತ್ತಾಯವಾಗಿದೆ.
ಸಂತೆ ಸ್ಥಳದ ಬಗ್ಗೆ ಪ.ಪಂ. ಸದಸ್ಯರು ನನ್ನ ಗಮನಕ್ಕೆ ತಂದಿದ್ದಾರೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪಿಎಸ್ಐ, ವ್ಯಾಪಾರಸ್ಥರು, ರೈತರು ಹಾಗೂ ಪ.ಪಂ. ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
| ಏಸು ಬೆಂಗಳೂರ ಮುಖ್ಯಾಧಿಕಾರಿ, ಪ.ಪಂ. ಗುತ್ತಲ