ಎಲ್ಲರಿಗೂ ನನ್ನ ಅಂತಿಮ ನಮನ!

ರಿಯಾಗಿ 155 ವರ್ಷಗಳ ಹಿಂದೆ ಬ್ರಿಟಿಷರ ಆಡಳಿತದಲ್ಲಿ ನಿರ್ವಣವಾದ ಜಿಲ್ಲಾಡಳಿತ ಸಂಕೀರ್ಣ ಎಂಬ ನಾನಿನ್ನು ಇತಿಹಾಸ…!!

ಹೊಸ ಚಿಗುರು ಬಂದಂತೆ ಹಣ್ಣೆಲೆ ಉದುರಲೇಬೇಕು ತಾನೆ. ಅದೇ ಕಾಲಚಕ್ರದ ಸುರುಳಿಗೆ ಸಿಲುಕಿ ನಾನು ಮರೆಯಾಗುತ್ತಿದ್ದೇನೆ. ನಾನು ನಿಂತ ಇದೇ ಜಾಗದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತದ ನೂತನ ಸಂಕೀರ್ಣ ತಲೆಯೆತ್ತಲಿದೆ ಎಂದು ಕೇಳಿದ್ದೇನೆ.

ಎರಡು ವರ್ಷಗಳ ಹಿಂದೆಯೇ ನನ್ನೊಡಲಲ್ಲಿದ್ದ ಕಚೇರಿಗಳನ್ನೆಲ್ಲ ತೆರವು ಮಾಡಿಸಿ, ನನ್ನನ್ನು ನೆಲಸಮಗೊಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿತ್ತು. ಆದರೆ, ಅದೇನೋ ತೊಂದರೆಯಾಗಿ ಹಾಗೆಯೇ ಬಿಟ್ಟಿದ್ದರು. ಅಬ್ಬೇಪಾರಿಗಳು ಅಕ್ರಮ ಚಟುವಟಿಕೆ ಶುರು ಮಾಡಿಬಿಟ್ಟಿದ್ದರು. ಅದೆಷ್ಟೋ ವರ್ಷದ ಭವ್ಯ ಆಡಳಿತದ ಅನುಭವವಿದ್ದ ನಾನು ಪಾಳು ಕೊಂಪೆಯಾಗಿ ಪೇಪರ್​ಗಳಲ್ಲಿ ಸುದ್ದಿಯಾಗ ಬೇಕಾಯಿತು. ಇಂದು ನನಗೆ ಮುಕ್ತಿಯ ಭಾಗ್ಯ ದೊರೆಯುತ್ತಿದೆ. ಹೆಂಚುಗಳನ್ನು ತೆಗೆಯುತ್ತಿದ್ದಾರೆ. ಗಾರೆ ಒಡೆಯುತ್ತಿದ್ದಾರೆ. ಕಲ್ಲು ಬೀಳಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಳೆದೊಂದು ಶತಮಾನದ ಹಲವು ಪ್ರಮುಖ ಘಟನೆಗಳಿಗೆ ನನ್ನೆದೆಯ ಕಲ್ಲು, ಕಲ್ಲುಗಳೇ ಸಾಕ್ಷಿ. ಇಲ್ಲಿಂದಲೇ ಅದೆಷ್ಟೋ ಆದೇಶಗಳು ಹೊರಬಿದ್ದಿವೆ. ಜನರ ನೋವಿಗೆ ಕಿವಿಯಾಗಿದ್ದೇನೆ. ಅಧಿಕಾರಿಗಳ ದರ್ಪಕ್ಕೆ ಮರುಗಿದ್ದೇನೆ. 40ರಷ್ಟು ಜಿಲ್ಲಾಧಿಕಾರಿಗಳು ನನ್ನೊಡಲಲ್ಲೇ ಕಾರ್ಯನಿರ್ವಹಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರಂತಹ ಮುತ್ಸದ್ದಿ ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಹೋಗಿದ್ದರು. ಕೆನರಾ ಜಿಲ್ಲೆಯ ಚಿತ್ರಣ ಬದಲಾಯಿಸಿದ ಅದೆಷ್ಟೋ ಸಭೆಗಳು ಇಲ್ಲಿಯೇ ನಡೆದಿದ್ದವು. ಸೀಬರ್ಡ್ ನೌಕಾ ಯೋಜನೆ, ಸೂಪಾ, ಕದ್ರಾ, ಕೊಡಸಳ್ಳಿ ಅಣೆಕಟ್ಟೆ ನಿರ್ವಣದ ಆದೇಶ ಗಳು ನನ್ನಲ್ಲೇ ಸಿದ್ಧವಾಗಿದ್ದವು. ಅಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಜಿಲ್ಲಾಧಿಕಾರಿಗಳು ಇಲ್ಲೇ ಕುಳಿತು ಯೋಜನೆ ರೂಪಿಸಿದ್ದರು. ಒಟ್ಟಿನಲ್ಲಿ ಜಿಲ್ಲೆಯ ಆಡಳಿತಾತ್ಮಕ ಎಲ್ಲ ಪ್ರಮುಖ ಬೆಳವಣಿಗೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. 1988ರಲ್ಲಿ ನೂತನ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿತು. 1992ರಲ್ಲಿ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರವಾಯಿತು. ನಂತರ ಕೆಲ ವರ್ಷ ಎಸ್​ಪಿ ಕಚೇರಿ ಇಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತು. ಹಲವು ಗಲಾಟೆಗಳ ಮಾಹಿತಿ ಬಂದ ವೈರ್​ಲೆಸ್ ಸಂದೇಶ ಇನ್ನೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಅದರ ಸ್ಥಳಾಂತರದ ನಂತರವೂ ಖಜಾನೆ ಸೇರಿ 12 ಕಚೇರಿಗಳು 2017 ಜೂನ್​ವರೆಗೂ ನನ್ನಲ್ಲೇ ನಡೆದಿದ್ದವು.

ಇತಿಹಾಸದ ನೆನಪು: ಅದು ಬ್ರಿಟಿಷರ ಆಡಳಿತದ ಉಚ್ಛ್ರಾಯ ಕಾಲ. ಕೆನರಾ ಭಾಗದ ಕಾಳುಮೆಣಸು, ಬಯಲು ನಾಡಿನ ಹತ್ತಿಯನ್ನು ಇಂಗ್ಲೆಂಡ್​ಗೆ ಸಾಗಿಸಲು ಬೈತಖೋಲ್ ಬಂದರು ಸೂಕ್ತ ಎಂದು ಯೋಜಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇಲ್ಲಿನ ಪಟ್ಟಣ ಅಭಿವೃದ್ಧಿಗೆ ಮನಸ್ಸು ಮಾಡಿತು. ಮದ್ರಾಸ್ ಪ್ರಾಂತ್ಯದಲ್ಲಿದ್ದ ಕೆನರಾ (ಈಗಿನ ಉತ್ತರ ಕನ್ನಡ)ವನ್ನು 1862ರ ಏಪ್ರಿಲ್ 16ರಂದು ಮುಂಬೈ ಪ್ರಾಂತ್ಯಕ್ಕೆ ವರ್ಗಾಯಿಸಿತ್ತು. ಆಗ ಕೆನರಾ ಜಿಲ್ಲೆಯ ಕೇಂದ್ರ ಹೊನ್ನಾವರ. ಆಡಳಿತಾತ್ಮಕ ಅನುಕೂಲಕ್ಕಾಗಿ ಅದನ್ನು 1862ರ ಅಕ್ಟೋಬರ್ 27ರಂದು ಸದಾಶಿವಗಡಕ್ಕೆ ವರ್ಗಾಯಿಸಲಾಯಿತು. ನಂತರ ಕೋಣೆ ಎಂದು ಕರೆಯುವ ಗ್ರಾಮದಲ್ಲಿ ಶಹರ ನಿರ್ವಣಕ್ಕೆ ಯೋಜನೆ ಸಿದ್ಧಗೊಂಡಿತ್ತು. ಆಗಿನ ಕಲೆಕ್ಟರ್ ಡಬ್ಲ್ಯು.ಎ.ಗೋಲ್ಡ್ ಪಿಂಚ್ ಎಂಬುವವರ ನೇತೃತ್ವದಲ್ಲಿ 1862ರ ನವೆಂಬರ್ 27 ರಂದು ಕಾರವಾರ ಶಹರ ಹಾಗೂ ಜಿಲ್ಲಾ ಕಲೆಕ್ಟರ್ ಕಚೇರಿ ನಿರ್ವಣಕ್ಕಾಗಿ ಮೊದಲ ಸಭೆ ನಡೆದು ಸಮಿತಿ ರಚಿಸಲಾಯಿತು. 1863 ಅಕ್ಟೋಬರ್ 26 ರಂದು ಕೋಣೆ ಗ್ರಾಮಕ್ಕೆ ‘ಕಾರವಾರ’ ಎಂದು ನಾಮಕರಣವೂ ಆಯಿತು. ಅಷ್ಟರಲ್ಲಾಗಲೇ ಕಲೆಕ್ಟರ್ ಕಚೇರಿ ನಿರ್ವಣಕ್ಕೆ ಯೋಜನೆ ಸಿದ್ಧಗೊಂಡಿತ್ತು. ಕಡಲ ತೀರದ ಪಕ್ಕದಲ್ಲೇ ಒಂದೂವರೆ ಎಕರೆ ಜಾಗ ಗುರುತಿಸಲಾಗಿತ್ತು. ಎಲ್ಲಿಂದಲೋ ಕಲ್ಲು ಬಂತು. ಇನ್ನೆಲ್ಲಿಂದಲೋ ಮರ ಬಂತು. ಹಡಗಿನಲ್ಲಿ ಉಕ್ಕು ಬಂತು. ಒಂದೂವರೆ ವರ್ಷದಲ್ಲಿ ನಾನು ಕೇವಲ 74,705 ರೂ.ಗಳ ಖರ್ಚಿನಲ್ಲಿ ಭವ್ಯ ಬಂಗಲೆಯಾಗಿ ಸಿದ್ಧಗೊಂಡೆ. ಇದೇ ಅವಧಿಯಲ್ಲಿ ಪಕ್ಕದಲ್ಲೇ ಕಾರವಾರ ಮುನ್ಸಿಪಾಲಿಟಿ ಕಟ್ಟಡ ನಿರ್ವಣವಾಯಿತು. ನನ್ನ ಇಕ್ಕೆಲದಲ್ಲಿ ಕೋರ್ಟ್, ಗ್ರಂಥಾಲಯ, ಎದುರಿನಲ್ಲಿ ಪ್ರಾಂತ ಕಚೇರಿ, ಇನ್ನೊಂದೆಡೆ ಇಂಜಿನಿಯರ್ ಕಚೇರಿ,ಅಂಚೆ ಕಚೇರಿ, ಗುಡ್ಡದ ಮೇಲೆ ಪ್ರವಾಸಿ ಬಂಗ್ಲೊ, ಕಲೆಕ್ಟರ್​ರ ಮನೆ ಹೀಗೆ 15 ವರ್ಷದಲ್ಲಿ ಹತ್ತಾರು ಕಟ್ಟಡಗಳು ತಲೆಎತ್ತಿದವು.ಈಗ ಅಂಚೆ ಕಚೇರಿಯನ್ನು ಹೆದ್ದಾರಿಗಾಗಿ ತೆಗೆದಿದ್ದಾರಂತೆ. ಮುನ್ಸಿಪಾಲ್ಟಿ ಕಚೇರಿಯೂ ಖಾಲಿಯಾದಾಗ ನನಗೂ ಹೆಚ್ಚು ದಿನ ಉಳಿಗಾಲವಿಲ್ಲ ಎಂದು ಅರಿವಾಗಿತ್ತು. ನನ್ನ ಜೊತೆ ಎದ್ದು ನಿಂತ ಇನ್ನೂ ಕೆಲ ಕಟ್ಟಡಗಳು ಕಾರವಾರದಲ್ಲಿ ಉಳಿದಿವೆ. ಆದರೆ, ತೀರ ಇತ್ತೀಚೆಗೆ ನಿರ್ವಣವಾದ ಕಟ್ಟಡಗಳೇ ಉದುರಿ ಬಿದ್ದಿದ್ದನ್ನು ನಾನು ನೋಡಿದ್ದೇನೆ.

ಏನೇ ಇರಲಿ ಕಾಲ ಬದಲಾದಂತೆ ಬದಲಾವಣೆಗೆ ಇವೆಲ್ಲ ಅನಿವಾರ್ಯ ಎನ್ನುತ್ತಾರೆ. ಉತ್ತರ ಕನ್ನಡದ ಇತಿಹಾಸದ ನೆನಪುಗಳನ್ನು ಹೊತ್ತು ನಾನು ಹೊರಡುತ್ತಿದ್ದೇನೆ. ಎಲ್ಲರಿಗೂ ಶುಭವಾಗಲಿ. ಧನ್ಯವಾದ..

ನಿರೂಪಣೆ: ಸುಭಾಸ ಧೂಪದಹೊಂಡ

Leave a Reply

Your email address will not be published. Required fields are marked *