ಅರಕಲಗೂಡು: ಮನೆ ಮನೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ಎರಡೂವರೆ ತಿಂಗಳಲ್ಲಿ ಸಮರ್ಪಕವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಎ.ಮಂಜು ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಲ ಜೀವನ್ ಮಿಷನ್ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ 36 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಮಗಾರಿಯ ಪ್ರಗತಿ ಕುರಿತು ಪಿಡಿಒ ಹಾಗೂ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, 691 ಕೋಟಿ ರೂ.ವೆಚ್ಚದ ಯೋಜನೆಯಲ್ಲಿ ಹಳ್ಳಿಗಳಿಗೂ ಪಟ್ಟಣಗಳಂತೆಯೇ ಶುದ್ಧ ಕುಡಿಯುವ ನೀರು ನೀಡಲು ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ಪೂರ್ಣ ಪ್ರಮಾಣದಲ್ಲಿ ಕೆಲಸ ಮುಗಿಸದಿದ್ದರೆ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬಿಲ್ ಕೊಡಕೂಡದು ಎಂದು ಇಂಜಿನಿಯರ್‌ಗಳಿಗೆ ಖಡಕ್ ಸೂಚನೆ ನೀಡಿದರು.
ಪ್ರತಿ ಹಳ್ಳಿಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಕುರಿತು ಪಿಡಿಒಗಳು ತುರ್ತು ಗಮನ ಹರಿಸಿ ಅಗತ್ಯ ನಿಗಾವಹಿಸಬೇಕು. ಟ್ಯಾಂಕ್‌ಗಳ ನಿರ್ಮಾಣಕ್ಕೆ ವಿವಾದ ಇರುವ ಕಡೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಸೂಕ್ತ ಜಾಗ ಗುರುತಿಸಿಕೊಡಬೇಕು. ಶಾಲಾ ಕಾಲೇಜುಗಳು ಹಾಸ್ಟೆಲ್‌ಗಳು, ಅಂಗನವಾಡಿಗಳು, ಆಸ್ಪತ್ರೆಗಳಿಗೆ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು ಕಡ್ಡಾಯ. ಊರ ಹೊರಗೆ ನೂರು ಮೀಟರ್ ಅಂತರದಲ್ಲಿ ಮನೆ ಕಟ್ಟಿಕೊಂಡಿದ್ದರೂ ನಲ್ಲಿ ಸಂಪರ್ಕ ಕಲ್ಪಿಸಬೇಕು. ಯೋಜನೆ ಕುಂಠಿತವಾದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿದರು.
ಹಲವು ಹಳ್ಳಿಗಳಿಗೆ ಇಂದಿಗೂ ಸರಿಯಾಗಿ ಪೈಪ್ ಲೈನ್, ಇಂಟರ್ ಲಾಕ್, ವಾಲ್‌ಗಳನ್ನು ಹಾಕಿಲ್ಲ. ಕೆಲವು ಕಡೆ ಹೊಸದಾಗಿ ನಿರ್ಮಿಸಿರುವ ನೀರಿನ ಟ್ಯಾಂಕ್‌ಗಳು ಸೋರುತ್ತಿವೆ. ಕಾಮಗಾರಿ ಅವ್ಯವಸ್ಥೆ ಕುರಿತು ಗುತ್ತಿಗೆದಾರರ ಗಮನಕ್ಕೆ ತಂದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕೆಲವು ಪಿಡಿಒಗಳು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು. ಈ ಅವ್ಯವಸ್ಥೆ ಸರಿಪಡಿಸುವಂತೆ ಇಂಜಿನಿಯರ್‌ಗಳು ಗುತ್ತಿಗೆದಾರರಿಗೆ ಖಡಕ್ಕಾಗಿ ಸೂಚಿಸಬೇಕು ಎಂದು ಶಾಸಕರು ತಾಕೀತು ಮಾಡಿದರು.
ಕಾಮಗಾರಿ ಕುಂಠಿತಗೊಂಡಿರುವ ಸಂತೆಮರೂರು, ವಿಜಾಪುರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಮಾಹಿತಿ ಪಡೆದ ಶಾಸಕರು ಸಮಸ್ಯೆ ಇರುವ ಕಡೆ ತುರ್ತಾಗಿ ಗಮನ ಹರಿಸಬೇಕು ಎಂದು ಪಿಡಿಒ ರಾಜೇಗೌಡ ವಿರುದ್ಧ ಗರಂ ಆದರು. ಸಂತೆಮರೂರಿನಲ್ಲಿ ಜೆಸಿಬಿಯಲ್ಲಿ ಪೈಲ್‌ಲೈನ್ ಅಳವಡಿಕೆಗೆ ಸ್ಥಳೀಯರು ಅಡ್ಡಿಪಡಿಸುತ್ತಿದ್ದಾರೆ ಎಂದು ಗುತ್ತಿಗೆದಾರರು ಸಭೆಯ ಗಮನಕ್ಕೆ ತಂದರು. ಸ್ಥಳೀಯ ಸಮಸ್ಯೆಗಳ ಕುರಿತು ಸೌಹಾರ್ದಯುತವಾಗಿ ಬಗೆಹರಿಸುವಂತೆ ಪಿಡಿಒಗೆ ಸೂಚಿಸಿದರು. ರಾಮನಾಥಪುರದಲ್ಲಿ ರಾಜಕಾಲುವೆ ಮುಚ್ಚಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುಂತೆ ಪಿಡಿಒ ಕುಮಾರಸ್ವಾಮಿ ಅವರಿಗೆ ತಾಕೀತು ಮಾಡಿದರು.
ಗಂಗೂರು ಗ್ರಾಪಂ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಸರಿಯಿಲ್ಲ. ಕುಡಿಯುವ ನೀರಿಗೆ ತೊಂದರೆ ಇದ್ದು ಖಾಸಗಿ ಬೋರ್‌ವೆಲ್‌ನಿಂದ ನೀರು ಖರೀದಿಸಲಾಗುತ್ತಿದೆ. ಗಂಗೂರಿನಲ್ಲಿ ನಲ್ಲಿಗಳಿಗೆ ನೀರು ಹತ್ತುತ್ತಿಲ್ಲ ಎಂದು ಕೆಲ ಗ್ರಾಮಸ್ಥರು ವಾಲ್‌ಗಳನ್ನು ಒಡೆದು ಹಾಕುತ್ತಿದ್ದಾರೆ ಎಂದು ಪಿಡಿಒ ಹೇಮಲತಾ ಸಭೆಯ ಗಮನಕ್ಕೆ ತಂದರು. ಕೇರಳಾಪುರ ಪಿಡಿಒ ಲೋಕೇಶ್ ಮಾತನಾಡಿ, ಕೆಲ ಗ್ರಾಮಸ್ಥರು ನಲ್ಲಿಗಳಿಗೆ ಅಳವಡಿಸಿರುವ ಕ್ಯಾಪ್‌ಗಳನ್ನು ಬಿಚ್ಚಿಕೊಳ್ಳುತ್ತಿದ್ದಾರೆ ಎಂದರು. ಇಂತವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಶಾಸಕರು ಪಿಡಿಒಗೆ ಸೂಚಿಸಿದರು. ನೀರು ಗಂಟಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದರು.
ತಾಲೂಕಿನಲ್ಲಿ ಎರಡೂವರೆ ತಿಂಗಳಲ್ಲಿ ಕಾಮಗಾರಿ ಮುಗಿಸಲು ತುರ್ತು ಕ್ರಮ ವಹಿಸುವಂತೆ ಇಂಜಿನಿಯರ್ ರಾಹುಲ್, ಮಹೇಶ್, ಶರತ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ತಾಪಂ ಇಒ ಪ್ರಕಾಶ್, ಜಲ ಜೀವನ್ ಮಿಷನ್ ಯೋಜನೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನವೀನ್ ಇದ್ದರು.