ಎರಡು ದವಾಖಾನೆಗಳು ಬಂದ್

ಹಳಿಯಾಳ: ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ನಿಯಂತ್ರಿಸಲು ಮುಂದಾಗಿರುವ ತಾಲೂಕಾಡಳಿತ ಸೋಮವಾರ ಪಟ್ಟಣದಲ್ಲಿ ದಿಢೀರ್ ದಾಳಿ ನಡೆಸಿ ಎರಡು ಅನಧಿಕೃತ ಆಸ್ಪತ್ರೆಗಳನ್ನು ಮುಚ್ಚಿಸಿದೆ.

ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ ನೇತೃತ್ವದ ತಂಡವು ಯಲ್ಲಾಪುರ ಮಾರ್ಗದಲ್ಲಿರುವ ಕೆನರಾ ಲಾಜ್ ಎದುರಿನ ವಿಜಯಾ ದವಾಖಾನೆಯ ಮೇಲೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿನ ವೈದ್ಯರಾದ ಡಾ.ದೀಪಕ ಕಲ್ಮಠ ಪಡೆದ ವೈದ್ಯಕೀಯ ತರಬೇತಿ ಹೊರತು ಪಡಿಸಿ ಆಲೋಪಥಿ ವಿಧಾನದಲ್ಲಿ ಚಿಕಿತ್ಸೆ ನೀಡುತ್ತಿರುವುದನ್ನು ಕಂಡು ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಕೆಪಿಎಂಎ (ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ)ಯಡಿ ನೋಂದಣಿ ಮಾಡದಿರುವುದು ಕಂಡು ಬಂದಿದ್ದರಿಂದ, ಅಧಿಕೃತವಾಗಿ ನೋಂದಣಿ ಮಾಡಿ ಪರವಾನಗಿ ಪಡೆಯುವವರೆಗೂ ಆಸ್ಪತ್ರೆ ಮುಚ್ಚಬೇಕೆಂದು ಸೂಚಿಸಿದರು. ನಂತರ ತಂಡ ಫಿಶ್ ಮಾರ್ಕೆಟ್ ಬಳಿಯಿರುವ

ಶ್ರೀದೇವಿ ಕ್ಲಿನಿಕ್​ಗೆ ದಾಳಿ ನಡೆಸಿತು. ಪಡೆದ ವೈದ್ಯಕೀಯ ಪ್ರಮಾಣ ಪತ್ರದ ಬದಲು ಆಲೋಪಥಿ ವಿಧಾನದಲ್ಲಿ ಚಿಕಿತ್ಸೆ ನೀಡುತ್ತಿರುವ ಡಾ.ವಾಡಕರ ಅವರಿಗೆ ಅಧಿಕೃತವಾಗಿ ನೋಂದಣಿ ಮಾಡಿ ಪರವಾನಗಿ ಪಡೆಯುವರೆಗೂ ಆಸ್ಪತ್ರೆ ತೆರೆಯಬಾರದೆಂದು ಸೂಚಿಸಿದರು.