ಎರಡು ತಿಂಗಳಿಂದ ಮೀನುಗಾರಿಕೆಗೆ ಅನಿಯಮಿತ ರಜೆ

ಕಾರವಾರ: ಮೀನಿನ ಇಳುವರಿಯಲ್ಲಿ ಭಾರಿ ಇಳಿತ ಉಂಟಾಗಿರುವ ಪರಿಣಾಮ ಕಳೆದ 2 ತಿಂಗಳಿಂದ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಅನಿಯಮಿತ ರಜೆ ಬಿದ್ದಿದೆ. ಬಂದರುಗಳು ಬಿಕೋ ಎನ್ನುತ್ತಿವೆ.

ಸಮುದ್ರಕ್ಕೆ ಹೋದ ದೋಣಿಗಳು ಕೆಜಿ ಲೆಕ್ಕದಲ್ಲಿ ಮೀನು ಹಿಡಿದುಕೊಂಡು ಬರುವ ಸ್ಥಿತಿ ಎದುರಾಗಿದೆ. ಇದರಿಂದ ಟ್ರಾಲರ್ ಬೋಟ್​ಗಳು ಸಮುದ್ರಕ್ಕೆ ಇಳಿಯುವುದೇ ಅಪರೂಪವಾಗಿದೆ. ಪರ್ಸೀನ್ ಬೋಟ್​ಗಳು ದೂರ, ದೂರ ಹೋಗಿ ಖಾಲಿ ಕೈಯಲ್ಲಿ ಮರಳುತ್ತಿವೆ.

ಕಾರಣವೇನು?: ಹವಾಮಾನ ವೈಪರೀತ್ಯ, ಮತ್ಸ್ಯ ಸಂಕುಲದ ನಾಶ, ಅವೈಜ್ಞಾನಿಕ ಮೀನುಗಾರಿಕೆ, ದೋಣಿಗಳ ಸಂಖ್ಯೆ ಹೆಚ್ಚಳ ಹೀಗೆ ವಿವಿಧ ಕಾರಣಗಳಿಂದ ಮೀನುಗಳ ಇಳುವರಿ ಕಡಿಮೆಯಾಗಿದೆ ಎಂಬುದು ಅನುಭವಿ ಮೀನುಗಾರರ ಅಭಿಪ್ರಾಯ. ಒಂದು ಬಾರಿ ಮೀನುಗಾರಿಕೆಗೆ ಇಳಿದಲ್ಲಿ ಕಾರ್ವಿುಕರ ಖರ್ಚು, ಇಂಧನ ಸೇರಿ ಸುಮಾರು 1 ಲಕ್ಷ ಬೇಕಾಗುತ್ತದೆ. ಆದರೆ, ಅಷ್ಟೂ ಆದಾಯ ಬಾರದ ಕಾರಣ ಈ ಬಾರಿ ಮಾರ್ಚ್​ನಲ್ಲೇ ಮೀನುಗಾರಿಕೆ ಬಂದ್ ಮಾಡಿದ್ದೇವೆ ಎನ್ನುತ್ತಾರೆ ಯಾಂತ್ರೀಕೃತ ದೋಣಿಗಳ ಮೀನುಗಾರರು. ಕಳೆದ ವರ್ಷವೂ ‘ಸೀಸನ್’ ಮುಗಿಯುವ ಮೊದಲೇ ಮೀನುಗಾರಿಕೆ ಬಂದ್ ಮಾಡಿದ್ದರು.

ತಾರತಮ್ಯ ಆರೋಪ: ಕರ್ನಾಟಕದಲ್ಲಿ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಅನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಲ್ಲಿನ ಮೀನುಗಾರರು ಅದನ್ನು ಬಂದ್ ಮಾಡಿದ್ದಾರೆ. ಆದರೆ, ಗೋವಾ, ತಮಿಳುನಾಡು ಮೀನುಗಾರರು ಉತ್ತರ ಕನ್ನಡ ಸೇರಿ ಕರ್ನಾಟಕ ಕಡಲ ತೀರದ ವ್ಯಾಪ್ತಿಗೆ ಬಂದು ನಿಷೇಧಿತ ಮೀನುಗಾರಿಕೆ ನಡೆಸುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಅವರ ವಿರುದ್ಧ ಕ್ರಮ ವಹಿಸುವುದಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋವಾ ಭಾಗದ ಪರ್ಸೀನ್ ಬೋಟ್​ಗಳು ಹೊನ್ನಾವರದವರೆಗೂ ಬಂದು ಲೈಟ್ ಫಿಶಿಂಗ್ ಮಾಡಿಕೊಂಡು ಹೋಗುತ್ತಿವೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತಾಳಿದ್ದಾರೆ. ಜಿಲ್ಲೆಯಲ್ಲಿ ಸೀಸನ್ ಮುಗಿಯುವ 4 ತಿಂಗಳು ಮುಂಚೇ ಬೋಟ್ ಲಂಗರು ಹಾಕಬೇಕಾಗಿದೆ. | ವಿನಾಯಕ ಹರಿಕಂತ್ರ ಮೀನುಗಾರರ ಮುಖಂಡ, ಕಾರವಾರ