
ದೇವದುರ್ಗ: ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಎರಡು ಟೋಲ್‌ಗೇಟ್‌ಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಜಾಲಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಬಸವೇಶ್ವರ ಸರ್ಕಲ್ ಮೂಲಕ ಅಂಬೇಡ್ಕರ್ ವೃತ್ತದವರೆಗೆ ನೂರಾರು ಪ್ರತಿಭಟನಾಕಾರರು ರ‌್ಯಾಲಿ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಾಲಹಳ್ಳಿ ಮತ್ತು ಕಾಕರಗಲ್‌ನಲ್ಲಿ ಅವೈಜ್ಞಾನಿಕವಾಗಿ ಟೋಲ್‌ಗೇಟ್ ನಿರ್ಮಿಸಿದ್ದು ಬಡವರ ಹೊಟ್ಟೆಮೇಲೆ ಬರೆ ಎಳೆಯಲಾಗುತ್ತಿದೆ. ಟೋಲ್‌ಗೇಟ್‌ಗೆ ಹಣ ಪಾವತಿಸುವ ವಾಹನ ಮಾಲೀಕರು ಹಾಗೂ ಸರ್ಕಾರಿ ಬಸ್‌ಗಳು ಜನರಿಂದ ವಸೂಲಿ ಮಾಡಿ ಶೋಷಣೆ ಮಾಡುತ್ತಿವೆ. ತಾಲೂಕಿನಲ್ಲಿ ಯಾವುದೇ ಕೈಗಾರಿಕೆಗಳು, ಉದ್ದಿಮೆಗಳು ಇಲ್ಲ. ವಾಣಿಜ್ಯ ವಾಹನಗಳ ಓಡಾಟವೂ ಕಡಿಮೆಯಿದೆ. ಗ್ರಾಮೀಣ ಪ್ರದೇಶದ ಸ್ಥಳೀಯ ವಾಹನಗಳು ಮಾತ್ರ ಸಂಚರಿಸುತ್ತಿವೆ. 73 ಕಿಮೀ ವ್ಯಾಪ್ತಿಯಲ್ಲಿ ಎರಡು ಟೋಲ್‌ಗೇಟ್ ನಿರ್ಮಿಸಿ ಶೋಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಶಾಸಕರು, ಸಂಸದರು, ಸಚಿವರು ಧ್ವನಿ ಎತ್ತದೇ ಇರುವುದು ಖಂಡನೀಯ. ಕೂಡಲೇ ಟೋಲ್‌ಗೇಟ್‌ಗಳನ್ನು ರದ್ದು ಪಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ರಂಗಣ್ಣ ಕೋಲ್ಕರ್, ನರಸಣ್ಣ ನಾಯಕ, ಸಾಬಣ್ಣ ಕಮಲದಿನ್ನಿ, ಶಿವನಗೌಡ ನಾಯಕ ವಂದಲಿ, ನಂದಪ್ಪ ಪಿ.ಮಡ್ಡಿ, ಮೌನೇಶ್ ಗಾಣದಾಳ, ರಮೇಶ್ ಬಾವಿಮನಿ, ಶಬ್ಬೀರ್ ಜಾಲಹಳ್ಳಿ, ಖುರ್ಷಿದ್ ಪಟೇಲ್, ಹನುಮಂತ ಮನ್ನಾಪುರಿ, ವೆಂಕಟೇಶ್, ಮಂಜುನಾಥ, ವೆಂಕನಗೌಡ ವಕೀಲ ಇತರರಿದ್ದರು.