ಎರಡು ಗುಂಪುಗಳ ಮಧ್ಯೆ ಜಗಳ

ಅಂಕೋಲಾ: ಎರಡು ಗುಂಪುಗಳ ಮಧ್ಯೆ ನಡೆದ ಜಗಳ ತಾಲೂಕು ಆಸ್ಪತ್ರೆಲ್ಲೂ ಮುಂದುವರಿದು 8 ಜನರ ವಿರುದ್ಧ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಹೇಂದ್ರ ನಾಯಕ ಪೊಲೀಸರಿಗೆ ದೂರು ನೀಡಿದ ಘಟನೆ ಶನಿವಾರ ನಡೆದಿದೆ.

ಘಟನೆ ವಿವರ: ಪಟ್ಟಣದ ಹೊನ್ನೆಕೇರಿಯ ಸಾರ್ವಜನಿಕ ಸ್ಥಳದಲ್ಲಿ ಅಮರ ನಾಯ್ಕ ಕಾಂಪೌಂಡ್ ನಿರ್ವಿುಸುತ್ತಿರುವ ಕುರಿತು ಅದೇ ಗ್ರಾಮದ ಸುಭಾಶ ಗಂಗಾಧರ ನಾಯ್ಕ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ಸುಭಾಶ ನಾಯ್ಕ ತನ್ನ ತಾಯಿ ರೋಹಿಣಿ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಕೇಣಿ ಸೇತುವೆ ಸಮೀಪ ಅಮರ ನಾಯ್ಕ, ಕಿರಣ ಗೋಪಾಲ ನಾಯ್ಕ, ಧನಂಜಯ ಶಾಂಭಾ ನಾಯ್ಕ, ಪ್ರಶಾಂತ ಶಾಂಭಾ ನಾಯ್ಕ ಅವರು ಅಡ್ಡಿಗಟ್ಟಿ ತಾಯಿ, ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಸುಭಾಶ ನಾಯ್ಕ ಅಮರ ನಾಯ್ಕ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಅಮರ ಮತ್ತು ಸುಭಾಶನನ್ನು ದಾಖಲಿಸಲಾಗಿತ್ತು. ಪೊಲೀಸರು ಆಸ್ಪತ್ರೆಯಿಂದ ಮರಳಿದ ಐದೇ ನಿಮಿಷದಲ್ಲಿ ಅಮರ ನಾಯ್ಕ ಕಡೆಯವರು ಆಸ್ಪತ್ರೆಯಲ್ಲಿನ ಸಲಕರಣೆ ಬಳಸಿ ಸುಭಾಶನ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸುಭಾಶ ಕೂಡ ಹಲ್ಲೆ ನಡೆಸಿದ್ದಾನೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಲಾಠಿ ಪ್ರಹಾರ ನಡೆಸಿ ಅವರನ್ನು ಪೊಲೀಸ್ ಠಾಣೆಗೆ ಕರೆತರಬೇಕಾಯಿತು.

ದೂರು ದಾಖಲು: ಆಸ್ಪತ್ರೆಯ ತುರ್ತು ನಿಗಾ ಘಟಕದೊಳಗೆ ಅಕ್ರಮ ಪ್ರವೇಶ ಮಾಡಿ ಆಸ್ಪತ್ರೆ ಸಲಕರಣೆ ಬಳಸಿ ಹೊಡೆದಾಡಿದ್ದರಿಂದ ಒಟ್ಟು 8 ಜನರ ವಿರುದ್ಧ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಹೇಂದ್ರ ನಾಯಕ ಪೊಲೀಸರಿಗೆ ದೂರು ನೀಡಿದ್ದಾರೆ.

ಹೊನ್ನೆಕೇರಿಯ ಸುನೀಲ ಸುರೇಶ ನಾಯ್ಕ, ಅಮರ ಥಾಕು ನಾಯ್ಕ, ಧನಂಜಯ ಶಾಂಭಾ ನಾಯ್ಕ, ಅನಿಲ ಗಂಗಾಧರ ನಾಯ್ಕ, ಸುಭಾಶ ಗಂಗಾಧರ ನಾಯ್ಕ, ಸುನೀಲ ಸುಬ್ರಹ್ಮಣ್ಯ ನಾಯ್ಕ ಭಾವಿಕೇರಿ, ಅಮರ ಹಮ್ಮಣ್ಣ ನಾಯ್ಕ ಹಟ್ಟಿಕೇರಿ ವಿರುದ್ಧ ಪ್ರಕರಣ ದಾಖಲಾಗಿದೆ. ತೀವ್ರ ಗಾಯಗೊಂಡ ಸುಭಾಶ ಗಂಗಾಧರ ನಾಯ್ಕನನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

Your email address will not be published. Required fields are marked *