ಎರಡು ಅಕ್ರಮ ಕಲ್ಲು ಕ್ವಾರಿ ಬಂದ್

ಬಾಗೇಪಲ್ಲಿ: ಎರಡು ಅಕ್ರಮ ಕಲ್ಲು ಕ್ವಾರಿಗಳ ಮೇಲೆ ಶನಿವಾರ ದಾಳಿ ನಡೆಸಿರುವ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಗೂಳೂರು ಹೋಬಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ದಂಧೆಗೆ ತಾಲೂಕು ಆಡಳಿತ ಪ್ರೋತ್ಸಾಹ ನೀಡುತ್ತಿತ್ತು ಎನ್ನಲಾಗಿದೆ. ಕಲ್ಲು ಗಣಿಗಾರಿಕೆ ದಿಮ್ಮಿಗಳನ್ನು ಸಾಗಿಸುವ ಲಾರಿ ಮಾಲೀಕರಿಗೆ ಲಂಚಕ್ಕೆ ಬೇಡಿಕೆ ಇಟ್ಟು, ಪೀಡಿಸುತ್ತಿದ್ದರು. ಇತ್ತೀಚೆಗೆ ಬಾಗೇಪಲ್ಲಿ ತಹಸೀಲ್ದಾರ್ ವಿ.ನಾಗರಾಜು ಮತ್ತು ಅವರ ಜೀಪ್ ಚಾಲಕ ಜಾರ್ಜ್ ಆಂಟೋನಿ ವಿರುದ್ಧ ಲಾರಿ ಮಾಲೀಕರು ತಿರುಗಿಬಿದ್ದು, ಲಂಚಾವತಾರದ ಬೀದಿ ರಂಪಾಟ ನಡೆದಿತ್ತು. ಆಗ ಪೊಲೀಸರ ಮಧ್ಯಪ್ರವೇಶದಿಂದ ಸಮಸ್ಯೆಗೆ ತಾತ್ಕಾಲಿಕ ತೆರೆ ಬಿದ್ದಿತ್ತು.

ಈ ಕುರಿತು ಏ.11ರಂದು ‘ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳು’ ಶೀರ್ಷಿಕೆಯಲ್ಲಿ ವಿಜಯವಾಣಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿ ಪ್ರಕಟವಾದ ದಿನವೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ರಾಜಸ್ವ ನಿರೀಕ್ಷಕ ರವೀಂದ್ರಬಾಬು ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಅನಿರುಧ್ ಶ್ರವಣ್ ಆದೇಶ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾಧಿಕಾರಿ, ಪಿಚ್ಚಲವಾರಿಪಲ್ಲಿ ಬಳಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಏ.11ರಂದು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಕ್ರಮ ಗಣಿಗಾರಿಕೆ ಎಂದು ಖಚಿತವಾಗುತ್ತಿದ್ದಂತೆ ತಕ್ಷಣವೇ ನಿಲ್ಲಿಸಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರು.

ಎರಡನೇ ಹಂತದ ಕಾರ್ಯಾಚರಣೆ ಭಾಗವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿರಿಯ ಇಂಜಿನಿಯರ್ ಆಶಾ ಹಾಗೂ ಬಾಗೇಪಲ್ಲಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಪಿ.ಎಂ.ನವೀನ್ ನೇತೃತ್ವದಲ್ಲಿ ಐವಾರಪಲ್ಲಿ ಬಳಿಯ ಕ್ವಾರಿಗಳ ಮೇಲೆ ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಗಣಿಗಾರಿಕೆ ಕಂಡು ಬಂದಿದ್ದು, ಅಲ್ಲಿದ್ದ ಬೃಹತ್ ಕ್ರೖೆನ್, ಟ್ರಾ್ಯಕ್ಟರ್ ಕಂಪ್ರೇಷರ್ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡೂ ಕ್ವಾರಿಗಳನ್ನು ಮುಚ್ಚುವಂತೆ ನೋಟಿಸ್ ಜಾರಿ ಮಾಡಿದ್ದು, ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Leave a Reply

Your email address will not be published. Required fields are marked *