ಎರಡನೇ ದಿನ ಪ್ರತಿಭಟನೆಗೆ ಸೀಮಿತ

ಕೋಲಾರ: ಕಾರ್ವಿುಕ ಹಾಗೂ ಎಡ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಎರಡನೇ ದಿನ ಬುಧವಾರ ಪ್ರತಿಭಟನಾ ಮೆರವಣಿಗೆಗಷ್ಟೇ ಸೀಮಿತವಾಗಿತ್ತು.

ಜಿಲ್ಲೆಯಾದ್ಯಂತ ಮೊದಲ ದಿನವೇ ಸಾರ್ವತ್ರಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ್ದರಿಂದ ಎರಡನೇ ದಿನ ಮುಷ್ಕರದ ಯಾವ ಬಿಸಿಯೂ ಜನರಿಗೆ ತಟ್ಟಲಿಲ್ಲ. ಕೆಎಸ್​ಆರ್​ಟಿಸಿ ಹಾಗೂ ಖಾಸಗಿ ಬಸ್​ಗಳು ರಸ್ತೆಗಿಳಿದಿದ್ದವು. ಅಂಗಡಿ ಮುಂಗಟ್ಟು, ಹೋಟೆಲ್, ಚಿತ್ರಮಂದಿರ, ಬ್ಯಾಂಕ್, ಅಂಚೆ ಕಚೇರಿ, ಕೇಂದ್ರ, ರಾಜ್ಯ ಸರ್ಕಾರಿ ಸ್ವಾಮ್ಯದ ಕಚೇರಿಗಳು, ಸರ್ಕಾರಿ ಶಾಲೆಗಳು ತೆರೆದಿದ್ದರೆ, ಕೆಲ ಖಾಸಗಿ ಶಾಲೆಗಳು ಮುಂಚಿತವಾಗಿಯೇ ಎರಡು ದಿನಗಳ ರಜೆ ಘೊಷಿಸಿದ್ದವು. ಕೆಲ ಶಾಲೆಗಳು ಪರಿಸ್ಥಿತಿ ನೋಡಿಕೊಂಡು ರಜೆ ರದ್ದುಪಡಿಸಿದ್ದವು.

ಪ್ರತಿಭಟನೆ: ನಗರದಲ್ಲಿ ಎಡ ಸಂಘಟನೆಗಳು, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ಜೆಎಂಎಸ್ ರಾಜ್ಯಾಧ್ಯಕ್ಷೆ ವಿ. ಗೀತಾ ಮಾತನಾಡಿ, ಬೆಲೆ ಏರಿಕೆ ತಡೆಗಟ್ಟಬೇಕು, ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿದ ರೀತಿ ಪ್ರತಿ ವರ್ಷ ಉದ್ಯೋಗ ನೀಡಬೇಕು, ಅಸಂಘಟಿತ ಕಾರ್ವಿುಕರಿಗೆ ಕನಿಷ್ಠ 18,000 ರೂ. ಕೂಲಿ ನೀಡಬೇಕು, ಬ್ಯಾಂಕ್​ಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು, ಬೆಮೆಲ್ ಸೇರಿ ಸಾರ್ವಜನಿಕ ಉದ್ದಿಮೆ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ. ವೆಂಕಟೇಶ್, ವಿಜಯಕೃಷ್ಣ, ಎಸ್.ಎನ್.ಶ್ರೀರಾಮ್ ಮುನಿಆಂಜಮ್ಮ, ನಾಗರತ್ನ, ದಲಿತ ಮುಖಂಡ ಟಿ. ವಿಜಯಕುಮಾರ್, ಹೂಹಳ್ಳಿ ನಾಗರಾಜ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಸದಸ್ಯೆ ಮಂಜುಳ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.