ಎರಡನೇ ಟೆಸ್ಟ್​: ಸೋಲಿನ ಸುಳಿಯಲ್ಲಿ ಭಾರತ

ಪರ್ತ್​: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಸೋಲಿನ ಸುಳಿಗೆ ಸಿಲುಕಿದ್ದು, ನಾಲ್ಕನೇ ದಿನದಾಟದಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 112 ರನ್​ ಗಳಿಸಿದೆ.

ಆಸ್ಟ್ರೇಲಿಯಾ ನೀಡಿದ 287 ರನ್​ ಗುರಿ ಬೆನ್ನತ್ತಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿದ್ದು, ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡಿದ್ದು, ಗೆಲುವಿಗಾಗಿ ಇನ್ನೂ 175 ರನ್​ ಗಳಿಸಬೇಕಿದೆ.

ಎರಡನೇ ಇನಿಂಗ್ಸ್​ ಆರಂಭಿಸಿದ ಭಾರತ ತಂಡದ ಪರ ಕೆ.ಎಲ್​. ರಾಹುಲ್ ಶೂನ್ಯಕ್ಕೆ ಔಟಾದರು. ನಂತರ ಕಣಕ್ಕಿಳಿದ ಚೇತೇಶ್ವರ್​ ಪೂಜಾರ (4) ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿರಲಿಲ್ಲ. ​ಪೂಜಾರ ಔಟಾದ ಬಳಿಕ ಕ್ರೀಸ್​ಗೆ ಬಂದ ನಾಯಕ ಕೊಹ್ಲಿ (17) ಮತ್ತು ಮುರಳಿ ವಿಜಯ್ (20)​ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಲು ಪ್ರಯತ್ನಿಸಿದರು. ಆದರೆ ಭಾರತ ತಂಡ 55 ರನ್​ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡಿತು.

ಉಪನಾಯಕ ರಹಾನೆ 30 ರನ್​ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು. ಹನುಮ ವಿಹಾರಿ (24*) ಮತ್ತು ರಿಷಭ್​ ಪಂತ್​ (9*) ರನ್​ ಗಳಿಸಿದ್ದು ಐದನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.

ಇದಕ್ಕೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾವನ್ನು ಎರಡನೇ ಇನಿಂಗ್ಸ್​ನಲ್ಲಿ 243 ರನ್​ಗೆ ಆಲೌಟ್​ ಮಾಡಿತ್ತು. ಭಾರತ ತಂಡ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಸರಣಿಯಲ್ಲಿ 1-0 ಇಂದ ಮುನ್ನಡೆ ಗಳಿಸಿದೆ. (ಏಜೆನ್ಸೀಸ್​)

ಭಾರತ-ಆಸ್ಟ್ರೇಲಿಯಾ 2 ನೇ ಟೆಸ್ಟ್​: ಭಾರತದ ಗೆಲುವಿಗೆ 287 ರನ್​ ಗುರಿ ನೀಡಿದ ಆಸಿಸ್​

ಕಿಂಗ್ ಕೊಹ್ಲಿ ದಾಖಲೆ ಶತಕ