ಸಾಗರ: ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ಎರಡು ತಿದ್ದುಪಡಿ ತಂದಿರುವುದು ಬೆಳೆಗಾರರು ಮತ್ತು ಬೆಳೆಗಾರರೇ ಸಹಕಾರ ಸಂಸ್ಥೆ ಮೂಲಕ ಸ್ಥಾಪಿಸಿಕೊಂಡ ಮಾರಾಟ ಸಹಕಾರ ಸಂಘಗಳಿಗೆ ಮಾರಕ ಆಗಿದೆ ಎಂದು ಆಪ್ಸ್ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ ತಿಳಿಸಿದ್ದಾರೆ.
ರೈತರೊಂದಿಗೆ ಮತ್ತು ಸಹಕಾರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆ ಏಕಾಏಕಿ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಲು ಹೊರಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿಯುತ್ತಿರುವುದು ಸ್ಪಷ್ಟವಾಗಿದೆ. ಸಹಕಾರ ಸಂಘಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಕೇವಲ ರೈತರ ಹುಟ್ಟುವಳಿಗಳನ್ನು ಮಾರಾಟ ಮಾಡುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿಲ್ಲ. ಈ ಸಂಸ್ಥೆಗಳು ಬೆಳೆಗಾರರಿಗೆ ಸಮಸ್ಯೆ ಉಂಟಾದಾಗ ಹೋರಾಟ ನಡೆಸುವ ಮೂಲಕ ನ್ಯಾಯ ದೊರಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳೆಗಾರರಿಗೆ ಧಾರಣೆ ಬಂದಾಗ ಮಾರಾಟ ಮಾಡಲು, ಅಲ್ಲಿಯವರೆಗೆ ಬೆಳೆಗಾರರು ಹುಟ್ಟುವಳಿಗಳನ್ನು ಸಹಕಾರ ಸಂಸ್ಥೆಗಳಲ್ಲಿ ದಾಸ್ತಾನು ಮಾಡಿದಾಗ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಹಣಕಾಸು ಸೌಲಭ್ಯ ನೀಡುವುದು, ಕೃಷಿ ಪೂರಕ ಸಾಮಗ್ರಿಗಳನ್ನು ಸಕಾಲದಲ್ಲಿ ಪೂರೈಕೆ ಮಾಡುತ್ತಿದೆ. ಒಂದರ್ಥದಲ್ಲಿ ಸಹಕಾರ ಸಂಘಗಳು, ಎಪಿಎಂಸಿ ಮತ್ತು ಬೆಳೆಗಾರರ ನಡುವೆ ಉತ್ತಮ ಬಾಂಧವ್ಯ ಇದೆ. ರಾಜ್ಯ ಸರ್ಕಾರದ ಕಾಯ್ದೆ ತಿದ್ದುಪಡಿ ಸಹಕಾರಿ ಸಂಸ್ಥೆ ಮತ್ತು ಬೆಳೆಗಾರರ ನಡುವೆ ಕಂದಕ ಸೃಷ್ಟಿಸುವ ಅಪಾಯ ಇದೆ ಎಂದು ಹೇಳಿದ್ದಾರೆ.
ಬಹುರಾಷ್ಟ್ರೀಯ ಕಂಪನಿಗಳು, ವ್ಯಾಪಾರಿಗಳು ಕೃಷಿ ಉತ್ಪನ್ನಗಳನ್ನು ರೈತರ ಹೊಲದಿಂದಲೆ ನೇರವಾಗಿ ಖರೀದಿ ಮಾಡುವಾಗ ಮಾರುಕಟ್ಟೆ ಅನುಭವ ಇರದ ಸಾಮಾನ್ಯ ರೈತರಿಗೆ ತೂಕ, ದರದಲ್ಲಿ ಮೋಸವಾಗುವ ಸಾಧ್ಯತೆ ಇರುತ್ತದೆ. ಹುಟ್ಟುವಳಿ ಮಾರಾಟದ ಮೊಬಲಗು ಸಂದಾಯ ಸಂದರ್ಭದಲ್ಲೂ ಅನ್ಯಾಯ ಆಗಬಹುದು. ಎಲ್ಲ ಪ್ರಕ್ರಿಯೆಗಳಲ್ಲಿ ಹೊಸ ತಿದ್ದುಪಡಿಯಿಂದ ಯಾವುದೇ ನಿಯಂತ್ರಣ ಇಲ್ಲದಂತೆ ಆಗುತ್ತದೆ. ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಎಂಪಿಎಂಸಿ ಕಾಯ್ದೆಗೆ ತಂದ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.