ಎಪಿಎಂಸಿಯಿಂದ ಮಳಿಗೆ ನಿರ್ವಣದ ಯೋಜನೆ

ಕೋಲಾರ: ಕೋಲಾರ ಎಪಿಎಂಸಿಯಿಂದ ಮಾರ್ಕೆಟಿಂಗ್ ಫೆಡರೇಷನ್ ಜಾಗ ಪಡೆದು ನೂತನ ಮಳಿಗೆ ನಿರ್ವಿುಸುವ ಯೋಜನೆಯಿದ್ದು, ಹೆಚ್ಚಿನ ಮಾರುಕಟ್ಟೆ ಶುಲ್ಕ ಪಾವತಿಸಿರುವ ವ್ಯಾಪಾರಸ್ಥರಿಗೆ ಮಳಿಗೆಯಲ್ಲಿ ಅವಕಾಶ ನೀಡಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್ ಹೇಳಿದರು.

ನಗರದ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ ಶನಿವಾರ ನಡೆದ ತರಕಾರಿ ದಲ್ಲಾಳರು ಮತ್ತು ವರ್ತಕರ ಸಭೆಯಲ್ಲಿ ಮಾತನಾಡಿ, 54 ಪರವಾನಗಿದಾರರಲ್ಲಿ 16 ವ್ಯಾಪಾರಸ್ಥರು ಮಾತ್ರ ನಿಗದಿತ ಶುಲ್ಕ ಪಾವತಿಸಿದ್ದಾರೆ. ಉಳಿದವರು 15 ದಿನದಲ್ಲಿ ಬಾಕಿ ಸಮೇತ ಮಾರುಕಟ್ಟೆಗೆ ಹಣ ತುಂಬದಿದ್ದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.

ಕೆಲ ವ್ಯಾಪಾರಿಗಳು ಶುಲ್ಕ ಪಾವತಿಸಿದ್ದರೂ ದಿನಕ್ಕೆ 40ರಿಂದ 60 ರೂ.ನಂತೆ ತಿಂಗಳಿಗೆ 1200 ರೂ.ನಿಂದ 1800 ರೂ. ತುಂಬಿರುವುದು ವಹಿವಾಟಿಗೆ ತಕ್ಕದಾಗಿಲ್ಲ. ಪರವಾನಗಿದಾರರು ತೀರಾ ಕನಿಷ್ಠ ಮೊತ್ತವನ್ನು ಮಾರುಕಟ್ಟೆಗೆ ಪಾವತಿಸುತ್ತಿರುವ ಬಗ್ಗೆ ಕೃಷಿ ಮಾರುಕಟ್ಟೆಯ ಹಿರಿಯ ಅಧಿಕಾರಿಗಳು ಸಾಕಷ್ಟು ಬಾರಿ ಪ್ರಸ್ತಾಪಿಸಿ ನಮ್ಮನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ. ವ್ಯಾಪಾರಕ್ಕೆ ಅನುಸಾರವಾಗಿ ಶುಲ್ಕ ಪಾವತಿ ಮಾಡಬೇಕಿದ್ದು, ತಪ್ಪಿದಲ್ಲಿ ನೀವೇ ಮುಂದೆ ತೊಂದರೆಗೆ ಸಿಲುಕಿಕೊಳ್ಳುತ್ತೀರಿ ಎಂದು ಸ್ಪಷ್ಟಪಡಿಸಿದರು.

ಶಾಸಕ ಶ್ರೀನಿವಾಸಗೌಡರ ಸಹಕಾರದಿಂದ ಫೆಡರೇಷನ್ ಜಾಗ ಪಡೆದು ಮಳಿಗೆ ನಿರ್ವಿುಸುವ ಯೋಜನೆಯಿದೆ. ಆ ಸಂದರ್ಭದಲ್ಲಿ ಗರಿಷ್ಠ ವ್ಯಾಪಾರ ಮಾಡಿ ಹೆಚ್ಚಿನ ಶುಲ್ಕ ತುಂಬಿರುವ ವರ್ತಕರಿಗೆ ಮಾತ್ರ ಸರ್ಕಾರ ಮಳಿಗೆಗಳನ್ನು ಮಂಜೂರು ಮಾಡಲಿದೆ. ತೀರಾ ಕನಿಷ್ಠ ಶುಲ್ಕ ಕಟ್ಟಿರುವ ವ್ಯಾಪಾರಸ್ಥರನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದರು.

ಮಾರುಕಟ್ಟೆ ಸ್ಥಳಾಂತರ ಆಗುವವರೆಗೆ ಹೊಸ ಲೈಸೆನ್ಸ್ ನೀಡದಿರಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದ್ದು ದಲ್ಲಾಳರು ಮತ್ತು ವರ್ತಕರು ಭಯಪಡುವ ಅಗತ್ಯವಿಲ್ಲ. ರೈತರಿಂದ ಕಮಿಷನ್ ಪಡೆಯುವ ರೀತಿಯಲ್ಲೇ ಮಾರುಕಟ್ಟೆ ಶುಲ್ಕವನ್ನು ಪ್ರಾಮಾಣಿಕವಾಗಿ ತುಂಬಬೇಕು. ಮುಂದಿನ ದಿನಗಳಲ್ಲಿ ತಂಡ ರಚಿಸಿ ಮೋಸವೆಸಗುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಕೆಲವು ವರ್ತಕರು 3 ವರ್ಷದಿಂದ ಬಾಕಿ ಉಳಿಸಿಕೊಂಡಿರುವ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಾವು ಉತ್ತರಿಸಬೇಕಿದೆ. ತಕ್ಷಣ ಬಾಕಿ ಹಣ ಪಾವತಿಸಿ ಮಾರುಕಟ್ಟೆ ಘನತೆ ಕಾಪಾಡಿ, ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಂಡು ಹೊಸಬರಿಗೆ ಅವಕಾಶ ಕಲ್ಪಿಸಲು ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಎಪಿಎಂಸಿ ಸದಸ್ಯ ದೇವರಾಜು, ತರಕಾರಿ ದಲ್ಲಾಳರ ಸಂಘದ ಅಧ್ಯಕ್ಷ ಆರ್​ಎಪಿ ನಾರಾಯಣಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಸತೀಶ್, ಎಂಎಪಿ ಪುಟ್ಟರಾಜು ಇದ್ದರು.

Leave a Reply

Your email address will not be published. Required fields are marked *