ಎಪಿಎಂಸಿಯಲ್ಲಿ ಸೌಲಭ್ಯಕ್ಕೆ ಪಟ್ಟು

ಮುಳಬಾಗಿಲು: ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ಹಾಗೂ ಬಿಳಿ ಚೀಟಿಯಲ್ಲಿ ರಸೀದಿ ನೀಡಿ ಕಾನೂನು ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಪಿಎಂಸಿ ಕಚೇರಿ ಎದುರು ರೈತ ಸಂಘ ಬುಧವಾರ ಧರಣಿ ನಡೆಸಿತು.

ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ. ಕೆಲವರು ರಸೀದಿ ನೀಡದೆ ಬಿಳಿ ಚೀಟಿ ನೀಡಿ ಕಾನೂನು ಉಲ್ಲಂಘಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಒಂದು ವಾರದಲ್ಲಿ ಮಾರುಕಟ್ಟೆ ಎಲ್ಲ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಎಚ್ಚರಿಸಿದರು.

ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಅಧಿಕಾರಿಗಳು, ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ಮಾರುಕಟ್ಟೆಯನ್ನು ದಲ್ಲಾಳಿಗಳ ಹಿಡಿತಕ್ಕೆ ಬಿಟ್ಟು ರೈತರನ್ನು ಶೋಷಣೆ ಮಾಡಲಾಗುತ್ತಿದೆ. ತ್ಯಾಜ್ಯ ತೆರವುಗೊಳಿಸದೆ ಗಬ್ಬುನಾರುತ್ತಿದೆ. ಮತ್ತೊಂದೆಡೆ ಸಿಬ್ಬಂದಿಯಿಲ್ಲದೆ ಸರ್ಕಾರಕ್ಕೆ ಬರುವ ಆದಾಯ ಅಧಿಕಾರಿಗಳ ಜೇಬು ಸೇರುತ್ತಿದೆ. ಕೋಟ್ಯಂತರ ರೂ. ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲ ಎಂದು ಆರೋಪಿಸಿಕಾರ್ಯದರ್ಶಿ ವೇಣುಗೋಪಾಲ್​ಗೆ ಮನವಿ ನೀಡಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಫಾರುಕ್ ಪಾಷಾ, ಮಹಿಳಾ ಘಟಕ ಅಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಸಂಚಾಲಕ ಕೆ. ಶ್ರೀನಿವಾಸಗೌಡ, ಮುಖಂಡರಾದ ಯಲುವಳ್ಳಿ ಪ್ರಭಾಕರ್, ಕಾವೇರಿ ಸುರೇಶ್, ಮೇಲಗಾಣಿ ದೇವರಾಜ್, ವಿಜಯಪಾಲ್, ಆನಂದ್​ಸಾಗರ್, ರಂಜಿತ್​ಕುಮಾರ್, ಹೆಬ್ಬಣಿ ಆನಂದರೆಡ್ಡಿ ಇತರರಿದ್ದರು

Leave a Reply

Your email address will not be published. Required fields are marked *