ಎನ್​ಸಿಸಿ ಕೆಡಿಟ್​ಗಳಿಂದ ವನಮಹೋತ್ಸವ

ತುಮಕೂರು: ನಾಲ್ಕನೇ ಬೆಟಾಲಿಯನ್ ಎನ್​ಸಿಸಿ, ಸಿಎಟಿಸಿ ಶಿಬಿರದ ಅಂಗವಾಗಿ ನಗರದ 26ನೇ ವಾರ್ಡ್ ಎಸ್​ಐಟಿ ಬಡಾವಣೆಯ ಸಾರ್ವಜನಿಕ ಸ್ಥಳಗಳಲ್ಲಿ ಮಂಗಳವಾರ ಗಿಡ ನೆಡಲಾಯಿತು. ವನ ಮಹೋತ್ಸವದಲ್ಲಿ ಭಾಗವಹಿಸಿದ್ದ 80 ಎನ್​ಸಿಸಿ ಕೆಡೆಟ್​ಗಳು ಹೊಂಗೆ, ನೇರಳೆ, ಬೇವು ಸೇರಿ ವಿವಿಧ ಜಾತಿಯ ಗಿಡ ನೆಟ್ಟರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ 4ನೇ ಬೆಟಾಲಿಯನ್ ಎನ್​ಸಿಸಿ ಮುಖ್ಯಸ್ಥ ಕರ್ನಲ್ ಶೈಲೇಶ್ ಶರ್ಮ ಮಾತನಾಡಿ, ಮಕ್ಕಳಲ್ಲಿ ಧೈರ್ಯ, ಸಮಯ ಪ್ರಜ್ಞೆ, ಸಾಮಾಜಿಕ ಕಳಕಳಿ, ಶಿಸ್ತು, ದೇಶಪ್ರೇಮ, ಪರಿಸರ ಪ್ರಜ್ಞೆ ಹಾಗೂ ರಕ್ಷಣಾ ವಿಷಯಗಳಿಗೆ ಅಗತ್ಯವಿರುವ ಡ್ರಿಲ್, ಬಂದೂಕು ತರಬೇತಿ ಜತೆ ವನಮಹೋತ್ಸವ ಕೂಡ ನಡೆದಿದೆ ಎಂದು ಬಣ್ಣಿಸಿದರು.

ಎನ್​ಸಿಸಿ ಕೆಡೆಟ್​ಗಳು ಗಿಡ ನೆಡುವ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ, ಸ್ಥಳೀಯರು ಹಾಗೂ ಬ್ಲೂಗಲ್ ಟ್ರಸ್ಟ್ ಸಹಕರಿಸಿದೆ ಎಂದು ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ತಿಳಿಸಿದರು.

ಹವಾಲ್ದಾರ್ ಕುಲದೀಪ್ ಸಿಂಗ್, ಫಸ್ಟ್ ಆಫೀಸರ್ ಅನಿಲ್​ಕುಮಾರ್ ಎಂ.ಜೆ, ಬ್ಲೂಗಲ್ ಟ್ರಸ್ಟ್ ನ ಅಧ್ಯಕ್ಷ ಯಧು, ಪಾಲಿಕೆ ಸೂಪರ್ ವೈಸರ್ ಚಂದ್ರಪ್ಪ, ಎನ್​ಸಿಸಿ ಸಿಬ್ಬಂದಿ ಸೋಮಶೇಖರ್, ದೇವರಾಜಯ್ಯ, ಹೇಮಾನಂದ ಮತ್ತಿತರರು ಇದ್ದರು.

ಯುದ್ಧ ಕವಾಯತು ಅಣಕು ಪ್ರದರ್ಶನ: 4ನೇ ಬೆಟಾಲಿಯನ್ ಎನ್​ಸಿಸಿ ಕೆಡೆಟ್​ಗಳು ಮಂಗಳವಾರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಯುದ್ಧ ಕವಾಯತು ಅಣಕು ಪ್ರದರ್ಶನದಲ್ಲಿ ಯುದ್ಧಭೂಮಿಯ ಅನುಭವ ಪಡೆದುಕೊಂಡರು.

ಜೂ.18ರಿಂದ 27ರವರೆಗೆ ಸಂಯುಕ್ತ ವಾರ್ಷಿಕ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಯುದ್ಧ ಕವಾಯತು ಅಣಕು ಪ್ರದರ್ಶನದಲ್ಲಿ ಮಿಲಿಟರಿ ವಿಷಯಗಳಾದ ಡ್ರಿಲ್, ಮ್ಯಾಪ್ ರೀಡಿಂಗ್, ಬಂದೂಕು ಬಳಕೆ-ಶೂಟಿಂಗ್, ಅಬ್ಸಟಿಕಲ್ ಟ್ರೖೆನಿಂಗ್, ಟೆಂಟ್ ಪಿಚ್ಚಿಂಗ್, ಫೈರ್ ಫಿಟ್ಟಿಂಗ್ ತರಬೇತಿ ನೀಡಲಾಯಿತು. ಲೈಟ್ ಮಿಷನ್ ಗನ್, ಸೆಲ್ಪ್ ಲೋಡಿಂಗ್ ರೈಫಲ್, ರಾಕೆಟ್ ಲಾಂಚರ್, ಗ್ರಾನೈಡ್​ಗಳನ್ನು ಬಳಸಿ ಯುದ್ಧ ಸನ್ನಿವೇಶವನ್ನು ಸೃಷ್ಟಿಸಿ ಎದುರಾಳಿಗಳನ್ನು ಬಗ್ಗುಬಡಿಯುವ ಯುದ್ಧ ಕೌಶಲ ಪ್ರದರ್ಶಿಸಿದರು.

10 ದಿನಗಳ ಶಿಬಿರದಲ್ಲಿ ಜಿಲ್ಲೆಯ ಹಾಗೂ ಬೆಂಗಳೂರು ನಗರದ 650ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, 12 ಎನ್​ಸಿಸಿ ಅಧಿಕಾರಿಗಳು, 21 ಮಿಲಿಟರಿ ಸೈನಿಕರಿಂದ ತರಬೇತಿಯನ್ನು ನೀಡಲಾಗುತ್ತಿದೆ.

Leave a Reply

Your email address will not be published. Required fields are marked *