ಎನ್​ಆರ್​ಎಸ್ ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ಚಿಕ್ಕಮಗಳೂರು: ಕೊಲ್ಕತ್ತದ ಎನ್​ಆರ್​ಎಸ್ ವೈದ್ಯಕೀಯ ಸಂಸ್ಥೆ ಕಿರಿಯ ವೈದ್ಯೆ ಡಾ. ಪರಿಭಾ ಮುಖರ್ಜಿ ಮೇಲೆ ರೋಗಿ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಘಟನೆ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ ತಡೆಗಟ್ಟಲು ರಾಷ್ಟ್ರಮಟ್ಟದಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 10 ವರ್ಷಗಳಿಂದ ವೈದ್ಯರ ಮೇಲೆ ಹಿಂಸೆ ಮತ್ತು ವೈದ್ಯಕೀಯ ಸೌಲಭ್ಯಗಳ ಮೇಲೆ ನಷ್ಟ ನಿಷೇಧ ಕಾಯ್ದೆ ಆಧಾರದಲ್ಲಿ ಹಲ್ಲೆ ನಡೆಸಿದ ದುಷ್ಕರ್ವಿುಗಳಿಗೆ ಶಿಕ್ಷೆ ನೀಡಿದ ನಿದರ್ಶನಗಳಿಲ್ಲ. ಈ ರೀತಿಯ ಘಟನೆಗಳಿಂದ ವೈದ್ಯರು ಹಾಗೂ ರೋಗಿಯ ಪವಿತ್ರ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಚಿಕಿತ್ಸೆ ಕೊಡಲು ತೊಡಕಾಗುತ್ತದೆ. ಆದ್ದರಿಂದ ಈ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿ ದುಷ್ಕರ್ವಿುಗೆ ಜಾಮೀನು ಸಿಗದಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಡಾ. ಡಿ.ಪಿ.ಮೋಹನ್, ಉಪಾಧ್ಯಕ್ಷ ಡಾ. ಎ.ಸಿ.ನಿಯತ್, ಕಾರ್ಯದರ್ಶಿ ಡಾ. ಬಿ.ಎನ್.ಸಂತೋಷ್, ಪದಾಧಿಕಾರಿಗಳಾದ ಡಾ. ಎನ್.ರವಿಪ್ರಕಾಶ್, ಡಾ. ಎಚ್.ಜಿ.ಕುಚೇಂದ್ರ, ಡಾ. ಛಾಯಾ ಮಲ್ಲಿಕಾರ್ಜುನ್, ಡಾ. ಸಿ.ಸುನೀಲ್ ಕುಮಾರ್, ಡಾ. ಕೌಶಿಕ್ ಸಾರಗೋಡು, ಡಾ. ಎಚ್.ಬಿ.ಚಂದ್ರಶೇಖರ್ ಹಾಜರಿದ್ದರು.

Leave a Reply

Your email address will not be published. Required fields are marked *