ಎಡ- ಬಲಗಳ ಧ್ರುವೀಕರಣ ಅನಿವಾರ್ಯ

ಧಾರವಾಡ( ಅಂಬಿಕಾತನದತ್ತ ಪ್ರಧಾನ ವೇದಿಕೆ): ಗುಂಪುಗಾರಿಕೆ, ಯಾರನ್ನೋ ಮೆಚ್ಚಿಸಲು ಬರೆಯುವ ಸಾಹಿತ್ಯದಿಂದಾಗಿ ಇಂದು ಶುದ್ಧ ಬರವಣಿಗೆ ಹೊರಗೆ ಬರುತ್ತಿಲ್ಲ. ಇದೆಲ್ಲದರಿಂದ ಹೊರಬಂದು ಸಮಾಜಕ್ಕೆ ಅಗತ್ಯವಾದ ಸಾಹಿತ್ಯ ನೀಡುವ ಗುರುತರ ಜವಾಬ್ದಾರಿ ಲೇಖಕರು, ಕವಿಗಳ ಮೇಲಿದೆ ಎಂಬುದನ್ನು ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ನಡೆದ ಕವಿಗೋಷ್ಠಿ ಒತ್ತಿ ಹೇಳಿತು.

ಆಶಯ ನುಡಿಗಳನ್ನಾಡಿದ ಪ್ರತಿಭಾ ನಂದಕುಮಾರ, ಕವಿಗಳಲ್ಲಿ ಇಂದು ಎಡ- ಬಲ ಎಂಬ ವಿಭಾಗಗಳಾಗಿವೆ. ಗುಂಪುಗಾರಿಕೆಯಿಂದಾಗಿ ಶುದ್ಧ ಕವನಗಳು ಹೊರಹೊಮ್ಮುತ್ತಿಲ್ಲ. ಯಾವುದಾದರೂ ಒಂದು ಗುಂಪಿಗೆ ಸೇರದೇ ಇದ್ದರೆ ಆ ಕವಿಗೆ ಬದುಕಿಲ್ಲ ಎನ್ನುವ ವಾತಾವರಣ ನಿರ್ವಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಧುನಿಕ ಸಂವಹನ ಬಹಳಷ್ಟು ಬೆಳೆದಿದೆ. ಎಲ್ಲವನ್ನೂ ಮಾರುಕಟ್ಟೆ (ಮಾರ್ಕೆಟ್) ದೃಷ್ಟಿಯಿಂದ ನೋಡಲಾಗುತ್ತಿದೆ. ಹಾಗಾಗಿ ಮೆಚ್ಚಿಸುವ ರೀತಿಯಲ್ಲಿ ಕವಿತೆ ಬರುತ್ತಿವೆ. ಈ ಎಡ- ಬಲಗಳು ಧ್ರುವೀಕರಣ ಆಗುವುದು ಅನಿವಾರ್ಯವಾಗಿದೆ. ಭಾರತೀಯತೆ, ಹಿಂದುತ್ವ ಎಂಬ ಪದವನ್ನು ಹಿಂದೆಂದಿಗಿಂತಲೂ ಹೆಚ್ಚು ತಿರುಚಲಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ, ಅಡೆತಡೆಗಳ ಮಧ್ಯೆಯೂ ಉತ್ತಮ ಕವನ ಬರೆಯಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನವದೆಹಲಿಯ ಡಾ. ಎಚ್.ಎಸ್. ಶಿವಪ್ರಕಾಶ್, ಧಾರವಾಡ ಕನ್ನಡ- ಸಂಸ್ಕೃತಿಯ ಗುಪ್ತಗಾಮಿನಿ ಇದ್ದಂತೆ. ಇಲ್ಲಿ ಎಷ್ಟೊಂದು ಕವಿಗಳು ಇದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಜಾಗತೀಕರಣ ಇಂದು ಎಲ್ಲೆಡೆ ಪ್ರಾಂತೀಯ ಗೋಡೆಗಳನ್ನು ಕಟ್ಟುತ್ತಿದೆ. ವಿಶ್ವ ಮಾರುಕಟ್ಟೆ ಮಾತ್ರ ಒಂದಾಗುತ್ತಿದೆ, ಮನಸುಗಳ ಮಧ್ಯೆ ಗೋಡೆ ನಿಲ್ಲಿಸುತ್ತಿದೆ. ಹಾಗೇ ಕವಿತೆಗಳು ಕೂಡ ಪ್ರಾಂತೀಯವಾಗುತ್ತಿವೆ. ಜಾಗತೀಕತೆ, ಪರಿಸರ ಕಾಳಜಿ ಯಾವುದೂ ಕಂಡುಬರುತ್ತಿಲ್ಲ. ಕನ್ನಡ ಸಾಹಿತ್ಯ ಯಾರನ್ನೋ ಮೆಚ್ಚಿಸಲು ಇರಬಾರದು ಎಂದು ಹೇಳಿದರು.

ಸಂಸ್ಥೆಗಳು ಕವಿಗಳನ್ನು ಗೌರವಿಸಬೇಕೆ ಹೊರತು, ಕವಿಗಳು ಸಂಸ್ಥೆಗಳನ್ನು ಹೊಗಳುವುದಲ್ಲ. ಸಾಮಾಜಿಕ ಸಮಸ್ಯೆ ನೂರೆಂಟು ಇದ್ದು, ಅವುಗಳನ್ನು ಅಭಿವ್ಯಕ್ತಿಸುವ ಕವಿಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಬಿ.ಎಂ. ಹನೀಫ್, ದೇವರಾಣೆಗೂ ಹೇಳುತ್ತೇನೆ ಕವಿಯಲ್ಲ ಸ್ವಾಮಿ ಎಂಬ ಶೀರ್ಷಿಕೆಯ ಕವನ ವಾಚಿಸಿದರು. ಅದರಲ್ಲಿ ಕಲ್ಬುರ್ಗಿ ಹತ್ಯೆ, ಸ್ವಚ್ಛ ಭಾರತ ಪ್ರಸ್ತಾಪಿಸಿ ಗಮನ ಸೆಳೆದರು.

ಡಾ. ಪ್ರಜ್ಞಾ ಮತ್ತಿಹಳ್ಳಿ ಸೌಂದರ್ಯ ಲಹರಿ, ಜಿ.ಎಚ್. ಹನ್ನೆರಡುಮಠರು ಪ್ರಸ್ತುತಪಡಿಸಿದ ‘ಬೆಣ್ಣಿ ರೊಟ್ಟಿ ಕೆಂಪು ಖಾರಾ’ ಜವಾರಿ ಭಾಷೆಯ ಸೊಗಡು ಸಾರಿತು.

ನಂದಿನಿ ಹೆದ್ದುರ್ಗರ ಅವಳು, ಲಿಂಗಣ್ಣ ಗೋನಾಳರ ಜಾತಿಭೂತ, ಪಿ.ಬಿ. ಯಲಿಗಾರರ ಸಮನ್ವಯ, ಶರಣು ಹುಲ್ಲೂರರ ಅಕ್ಕ ಕೇಳವ್ವ, ನಿರ್ಮಲಾ ಯಲಿಗಾರರ ನನ್ನೀ ಧಾರವಾಡ ಮಣ್ಣು, ಪ್ರಕಾಶ ಕಡಮೆ ಅವರ ಹಂಬಲ, ಬಾ.ಹ. ರಮಾಕುಮಾರಿ ಅವರ ಹಾರುವ ಹಕ್ಕಿಯ ರೆಕ್ಕೆ ಕತ್ತರಿಸಿ, ಕವಿತಾ ಕುಸುಗಲ್ಲರ ನಾ ಗಾಂಧಾರಿ, ಸಬಿತಾ ಬನ್ನಾಡಿ ಅವರ ಅಸ್ಪರ್ಷ, ಪ್ರಭು ಚನ್ನಬಸವ ಸ್ವಾಮೀಜಿಯವರ ಬದಲಾಗೋ ತಮ್ಮ…, ಬಸವರಾಜ ಸೂಳಿಬಾವಿ ಅವರ ಗಲಭೆ ಊರಿನಲ್ಲಿ, ಡಾ. ಮಲ್ಲಿಕಾರ್ಜುನ ಗುಮ್ಮಗೋಳರ ಬಡಕಲು ಸತ್ಯ, ಟಿ. ಸತೀಶ ಜವರೇಗೌಡರ ಅನ್ನದಾತನಿಗೊಂದು ಪ್ರಾರ್ಥನೆ ಸೇರಿ ಹಲವರು ಕವನ ವಾಚನ ಮಾಡಿದರು.

ಡಾ. ಚಂದ್ರಶೇಖರ ಕಂಬಾರ ವೇದಿಕೆಯಲ್ಲಿದ್ದರು. ಡಾ. ಸಂತೋಷ ಹಾನಗಲ್ಲ ಸ್ವಾಗತಿಸಿದರು. ಅಮೃತೇಶ ಹೊಸಳ್ಳಿ ನಿರ್ವಹಿಸಿದರು. ಡಿ.ಬಿ. ಶಂಕರಪ್ಪ ನಿರೂಪಿಸಿದರು. ಕೈವಾರ ಶ್ರೀನಿವಾಸ ವಂದಿಸಿದರು.