ಎಡೆಯೂರಲ್ಲಿ ಲಕ್ಷದೀಪೋತ್ಸವ ಸಂಪನ್ನ

ಕುಣಿಗಲ್ : ಪ್ರಸಿದ್ಧ ಪುಣ್ಯಕ್ಷೇತ್ರ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಸನ್ನಿದಿಯಲ್ಲಿ ಶುಕ್ರವಾರ ಸಂಜೆ ಕಾರ್ತಿಕ ಅಮವಾಸ್ಯೆ ಲಕ್ಷ ದೀಪೋತ್ಸವ ಸಂಭ್ರಮದಲ್ಲಿ ಸಹಸ್ರಾರು ಭಕ್ತರು ಮಿಂದೆದ್ದರು.

ಸಿದ್ದಲಿಂಗೇಶ್ವರ ಸ್ವಾಮಿ ಗದ್ದುಗೆಗೆ ಶುಕ್ರವಾರ ಸಂಜೆ 6ಕ್ಕೆ ವಿಶೇಷ ಪೂಜೆಯನ್ನು ಪ್ರಧಾನ ಅಗಮಿಕರು ಹಾಗೂ ಅರ್ಚಕರು ನೇರವೇರಿಸಿದ ಬಳಿಕ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಗದ್ದುಗೆಯ ಮುಂಭಾಗ ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮವನ್ನು ಎಡೆಯೂರು ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಲಕ್ಷದೀಪೋತ್ಸವದ ಬೆಳಗು:  ಲಕ್ಷದೀಪೋತ್ಸವದಲ್ಲಿ ಭಾಗಿಯಾಗಲು ನಾಡಿನೆಲ್ಲಡೆಯಿಂದ ಬಂದಿದ್ದ ಸಾವಿರಾರು ಭಕ್ತರು ದೀಪಕ್ಕೆ ಬತ್ತಿ ಇಟ್ಟು ಎಣ್ಣೆ ಹಾಕಿ ಸಾಲುಸಾಲು ದೀಪಗಳನ್ನು ಹಚ್ಚಿದರು. ದೇವಸ್ಥಾನ ಅವರಣದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ ಭಾವಚಿತ್ರ ಹಾಗೂ ಬಣ್ಣ ಬಣ್ಣದ ವಿವಿಧ ರಂಗೋಲಿ ಬಿಡಿಸಿದರು.

ಎಡೆಯೂರು ವಾಸ ಸಿದ್ದಲಿಂಗೇಶ್ವರ ನಾಟಕ, ಕುರುಕ್ಷೇತ್ರ ಪೌರಾಣಿಕ ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಿದವು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀದೇವಿ ಶೆಟ್ಟರ್, ಸದಸ್ಯರಾದ ಎಸ್.ಆರ್.ಚಿಕ್ಕಣ್ಣ, ವೈ.ವಿ.ಗೋವಿಂದರಾಜು, ಪಟ್ಟಣಶೆಟ್ಟರ್, ಗಾಯತ್ರಿರಾಜು, ದಾಸೋಹ ಸಮಿತಿಯ ನಿರ್ದೇಶಕ ನಿಟ್ಟೂರು ಪ್ರಕಾಶ್, ದೇವಸ್ಥಾನದ ಇಒ ಲಕ್ಷ್ಮೀ, ಕಗ್ಗೆರೆ ದೇಸವ್ಥಾನದ ಹನುಮಂತಯ್ಯ, ಸಾಗರನಹಳ್ಳಿ ನಟರಾಜು ಹಾಜರಿದ್ದರು.

ದಾಸೋಹ ಮಹಾಮನೆ : ಲಕ್ಷದೀಪೋತ್ಸವದಲ್ಲಿದ್ದ ಎಲ್ಲರಿಗೂ ಎಡೆಯೂರಿನ ದಾಸೋಹ ಮಹಾ ಮನೆಯಲ್ಲಿ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೂ ಊಟಬಡಿಸಲಾಯಿತು. ಭಕ್ತ ಸಮೂಹಕ್ಕೆ ಪಾನಕ, ಕೋಸಂಬರಿ ಹಾಗೂ ಮಜ್ಜಿಗೆ ಜತೆಗೆ ಪ್ರಸಾದದ ವ್ಯವಸ್ಥೆಯನ್ನು ಭಕ್ತರೇ ಕಲ್ಪಿಸಿದ್ದರು.

ಜಾತಿ, ಮತದ ಹೆಸರಲ್ಲಿ ಹಣ, ಅಧಿಕಾರಕ್ಕಾಗಿ ಜನ ಒಂದಿಲ್ಲೊಂದು ತಾಪತ್ರಯಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಶರಣರ ತತ್ವ ಚಿಂತನೆಗಳು. ಜ್ಯೋತಿ ಜ್ಞಾನದ ಸಂಕೇತ, ಭಕ್ತಿಯ ಸಂಕೇತ. ಪರಮಾತ್ಮನಲ್ಲಿನ ಭಕ್ತಿ, ನಿಷ್ಠೆಯ ಸಂಕೇತ.

| ಡಾ.ಸಿ.ಸೋಮಶೇಖರ್ ನಿವೃತ್ತ ಐಎಎಸ್ ಅಧಿಕಾರಿ