ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ

ಕೋಲಾರ: ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಬೇಕಿದೆ ಎಂದು ಮಾಸ್ಟರ್ ಟ್ರೈನರ್ ಎಚ್.ಕೆ. ತಿಲಗಾರ್ ಅಧಿಕಾರಿಗಳಿಗೆ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಶುಕ್ರವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮತದಾರನ ಎಡಗೈ ತೋರು ಬೆರಳು ಇಲ್ಲದಿದ್ದರೆ ಪಕ್ಕದ ಬೆರಳು, ಅದೂ ಇಲ್ಲದಿದ್ದರೆ ಅದರ ಪಕ್ಕದ ಬೆರಳಿಗೆ ಶಾಯಿ ಹಾಕಬಹುದು. ಎಡಗೈ ಇಲ್ಲದಿದ್ದರೆ ಬಲಗೈ ತೋರು ಬೆರಳು, ಎರಡೂ ಕೈ ಇಲ್ಲದವರಿಗೆ ಮೊಣಕೈಗೆ ಶಾಹಿ ಹಾಕಬೇಕು ಎಂದರು.

ಜಿಲ್ಲೆಯಲ್ಲಿ ಶೇ.100ರಷ್ಟು ಭಾವಚಿತ್ರ ಸಹಿತ ಮತದಾರರ ಪಟ್ಟಿ ಸಿದ್ಧಪಡಿಸಿ ಇಪಿಕ್ ಕಾರ್ಡ್ ವಿತರಿಸಲಾಗಿದೆ. ಮತದಾನಕ್ಕೆ ಮುಂಚಿತವಾಗಿ ಪ್ರತಿ ಮತದಾರರಿಗೆ ಮತಗಟ್ಟೆ ಅಧಿಕಾರಿಗಳು(ಬಿಎಲ್​ಒ) ಭಾವಚಿತ್ರವಿರುವ ಚೀಟಿ ನೀಡುತ್ತಾರೆ. ಮತದಾರನಿಗೆ ಹಕ್ಕು ಚಲಾಯಿಸಲು ಇದು ದಾಖಲೆಯಲ್ಲ. ಇಪಿಕ್ ಕಾರ್ಡ್ ಕಡ್ಡಾಯ. ಇಲ್ಲದಿದ್ದರೆ ಕೇಂದ್ರ ಚುನಾವಣಾ ಆಯೋಗ ಗುರುತಿಸಿರುವ ಭಾವಚಿತ್ರ ಸಹಿತ ಪರ್ಯಾಯ 11 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಹಕ್ಕು ಚಲಾಯಿಸಬಹುದು ಎಂದರು.

ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ. ಮತಗಟ್ಟೆ ಅಧಿಕಾರಿಗಳು ಬೂತ್​ಗಳಲ್ಲಿ 7 ಗಂಟೆಯೊಳಗೆ ಮತದಾನಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಳಿಸಿರಬೇಕು. ಮತದಾನ ಆರಂಭ ಹಾಗೂ ಮುಕ್ತಾಯ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮೊಬೈಲ್ ಸಂದೇಶ ಕಳುಹಿಸಬೇಕು. ಸಂಜೆ 6 ಗಂಟೆ ವೇಳೆಗೆ ಮತದಾನ ಮುಗಿಯದಿದ್ದಲ್ಲಿ ಸರತಿಯಲ್ಲಿ ನಿಂತಿರುವ ಕೊನೇ ಮತದಾರರಿಂದ ಆರಂಭಿಸಿ ಮೊದಲ ಮತದಾರರವರೆಗೆ ಚೀಟಿ ನೀಡಬೇಕು. ನಂತರ ಬಂದವರಿಗೆ ಮತದಾನಕ್ಕೆ ಅವಕಾಶ ಇಲ್ಲ ಎಂದರು.

ಗಣ್ಯಾತೀತ ಅಭ್ಯರ್ಥಿಗಳೊಂದಿಗೆ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಬೂತ್ ಪ್ರವೇಶಿಸುವಂತಿಲ್ಲ. ಅಂಧ ಮತದಾರರಿದ್ದರೆ ಸಹಾಯಕರು ಘೊಷಣಾ ಪತ್ರದಲ್ಲಿ ಸಹಿ ಮಾಡಿಸಿಕೊಂಡು ಪ್ರತಿಜ್ಞೆ ಸ್ವೀಕರಿಸಿದ ನಂತರ ಹಕ್ಕು ಚಲಾಯಿಸಲು ಸಹಾಯ ಮಾಡಬಹುದು. ಮಾ. 24ರಂದು ಮತ್ತೊಂದು ತರಬೇತಿ ನೀಡಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಸೋಮಶೇಖರ್, ಸಹಾಯಕ ಚುನಾವಣಾಧಿಕಾರಿ ವಿಠಲ್ ಹಾಜರಿದ್ದರು.