ಎಟಿಎಂ ಮೂಲಕ ಖಾತೆಗೆ ಕನ್ನ

blank

ಗದಗ: ನೀವು ಎಟಿಎಂ ಕಾರ್ಡ್ ಬಳಕೆದಾರರಾಗಿದ್ದರೆ ಎಚ್ಚರ, ಎಚ್ಚರ… ನಿಮ್ಮ ಎಟಿಎಂ ಕಾರ್ಡ್ ನಿಮ್ಮ ಬಳಿಯೇ ಇದ್ದರೂ ನಕಲಿ ಕಾರ್ಡ್ ಬಳಸಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುವ ಖದೀಮರು ಹುಟ್ಟಿಕೊಂಡಿದ್ದಾರೆ. ಎಟಿಎಂ ಕಾರ್ಡ್ ಕಳೆದುಕೊಳ್ಳದಿದ್ದರೂ ನಗರದ ನಿವಾಸಿಯೊಬ್ಬರ ಖಾತೆಯಿಂದ 1.18 ಲಕ್ಷ ರೂ. ಮಾಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿವೇಕಾನಂದ ನಗರದ ನಿಸರ್ಗ ಬಡಾವಣೆ ನಿವಾಸಿ, ರೈಲ್ವೆ ಇಲಾಖೆ ನಿವೃತ್ತ ನೌಕರ ಅಕ್ಬರಸಾಬ ಶೇಖ್​ಸನದಿ ಹಣ ಕಳೆದುಕೊಂಡವರು. ಅವರ ಎಟಿಎಂ ಕಾರ್ಡ್ ಅವರ ಬಳಿಯೇ ಇದ್ದರೂ ಖಾತೆಯಿಂದ 1.18 ಲಕ್ಷ ರೂ. ಮಾಯವಾಗಿದೆ. ನಗರದ ಪ್ರಧಾನ ಅಂಚೆ ಇಲಾಖೆ ಬಳಿ ಇರುವ ಅಂಚೆ ಇಲಾಖೆಯ ಎಟಿಎಂನಿಂದ ಹಂತಹಂತವಾಗಿ ಹಣ ಡ್ರಾ ಮಾಡಲಾಗಿದೆ ಎಂದು ಖಾತೆದಾರರು ಆರೋಪಿಸುತ್ತಿದ್ದಾರೆ.

ಎಸ್​ಬಿಐ ಬ್ಯಾಂಕ್ ಖಾತೆದಾರರಾಗಿರುವ ಅಕ್ಬರಸಾಬ ಅವರು ಕಳೆದ ಅನೇಕ ವರ್ಷಗಳಿಂದ ಇದೇ ಬ್ಯಾಂಕ್ ಮೂಲಕ ವ್ಯವಹಾರ ಮಾಡಿದ್ದಾರೆ. ಇವರ ಖಾತೆಯಲ್ಲಿ 1.20 ಲಕ್ಷ ರೂ. ಹಣವಿತ್ತು. ಮೇ 17ರಂದು ಹಾತಲಗೇರಿ ನಾಕಾ ಬಳಿ ಇರುವ ಎಸ್​ಬಿಐ ಎಟಿಎಂನಿಂದ 2 ಸಾವಿರ ರೂ. ಹಣ ತೆಗೆದುಕೊಂಡಿದ್ದಾರೆ. ನಂತರ ಖಾತೆಯಲ್ಲಿ 1.18 ಲಕ್ಷ ರೂ. ಬಾಕಿ ಇರುವುದಾಗಿ ಬ್ಯಾಂಕ್​ನಿಂದ ಮೆಸೇಜ್ ಸಹ ಬಂದಿದೆ. ಮೇ 18ರಿಂದ ಮೇ 20 ರವರೆಗೆ ಈ ಮೂರು ದಿನಗಳ ಅವಧಿಯಲ್ಲಿ 1.18 ಲಕ್ಷ ರೂ. ಹಣವನ್ನು ಖದೀಮರು ಡ್ರಾ ಮಾಡಿಕೊಂಡಿದ್ದಾರೆ. ಮೇ 18 ಮತ್ತು ಮೇ 19ರಂದು ಮೆಸೇಜ್ ಬಂದಿಲ್ಲ. ಆದರೆ, ಮೇ 20ರಂದು ಹಣ ತೆಗೆದುಕೊಂಡಿರುವ ಕುರಿತು ಮೆಸೇಜ್ ಬಂದಿದೆ ಎಂದು ಖಾತೆದಾರ ಅಕ್ಬರಸಾಬ ಹೇಳುತ್ತಾರೆ.

ಹಣ ಡ್ರಾ ಮಾಡಿಕೊಂಡಿರುವುದು ಗೊತ್ತಾದ ಕೂಡಲೇ ಖಾತೆದಾರ ಅಕ್ಬರಸಾಬ ಶೇಖಸನದಿ ಬ್ಯಾಂಕ್​ಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪರಿಶೀಲನೆ ನಡೆಸಿದಾಗ ಮಹಾತ್ಮ ಗಾಂಧಿ ವೃತ್ತದ ಬಳಿಯಿರುವ ಅಂಚೆ ಇಲಾಖೆಯ ಎಟಿಎಂನಿಂದ 1.18 ಲಕ್ಷ ರೂ. ಹಣ ಡ್ರಾ ಆಗಿರುವುದು ಗೊತ್ತಾಗಿದೆ. ಮೇ 18ರಂದು 38,500 ರೂ., ಮೇ 19ರಂದು 40 ಸಾವಿರ ರೂ. ಮತ್ತು ಮೇ 20ರಂದು 40 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಳ್ಳಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಅಕ್ಬರಸಾಬ ಅವರು, ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಟಿಎಂನಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ನೀಡುವಂತೆ ಅಂಚೆ ಕಚೇರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ, ವಿಡಿಯೋ ಕೊಡಲು ನಮಗೆ ಅಧಿಕಾರ ಇಲ್ಲ. ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ಪಡೆಯಬೇಕು ಎಂದು ಅಂಚೆ ಇಲಾಖೆ ಅಧಿಕಾರಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರಿಗೆ 20 ದಿನಗಳ ನಂತರ ವಿಡಿಯೋ ದೊರಕಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿಡಿಯೋ ಚಿತ್ರೀಕರಣ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ತನಿಖೆ ಇನ್ನೂ ಮುಂದುವರಿದಿದೆ.

ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಯಾರೋ ತೆಗೆದುಕೊಂಡಿದ್ದಾರೆ ಎಂಬ ದೂರು ದಾಖಲಾಗಿದೆ. ನಿಸರ್ಗ ಬಡಾವಣೆಯ ನಿವಾಸಿ ಅಕ್ಬರಸಾಬ ದೂರು ದಾಖಲಿಸಿದ್ದು ತನಿಖೆ ಆರಂಭಿಸಲಾಗಿದೆ. ನಗರದ ಅಂಚೆ ಕಚೇರಿ ಬಳಿ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡಿದ್ದು ಗೊತ್ತಾದ ನಂತರ ಸಂಬಂಧಿಸಿದ ಎಟಿಎಂ ಸಿಸಿ ಕ್ಯಾಮರಾ ಫೂಟೇಜ್ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ ಜನರ ಬೆನ್ನು ಮಾತ್ರ ಕಾಣಿಸುತ್ತಿದ್ದು, ಸ್ಪಷ್ಟತೆ ಇಲ್ಲ.

ಯತೀಶ್. ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

ನಮ್ಮ ಎಟಿಎಂನಿಂದ ಹಣ ತೆಗೆದುಕೊಂಡಿದ್ದಾರೆ ಎಂದು ದೂರು ಬಂದಿದೆ. ಇಂತಹ ಮೂರು ಪ್ರಕರಣ ನಡೆದಿದ್ದು, ಈ ಕುರಿತು ಎಟಿಎಂನಲ್ಲಿರುವ ಸಿಸಿ ಕ್ಯಾಮರಾ ಫೂಟೇಜ್ ಅನ್ನು ಪೊಲೀಸರಿಗೆ ನೀಡಲಾಗಿದೆ. ಜನರು ಎಂಥ ಕಾರ್ಡ್​ಗಳನ್ನು ತಂದು ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ ಎಂದು ನಾವು ಹೇಗೆ ಹೇಳಬೇಕು? ಮುಖಕ್ಕೆ ಮಾಸ್ಕ್ ಧರಿಸಿ ಎಟಿಎಂ ಒಳಗೆ ಬಂದು ಹೋದರೆ ಅವರು ಯಾರು ಎಂದು ಹೇಗೆ ಗುರುತಿಸಬೇಕು? ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

| ರಸೀದ್ ಸಾಹೇಬ, ಪೋಸ್ಟ್ ಮಾಸ್ಟರ್, ಪ್ರಧಾನ ಅಂಚೆ ಗದಗ

ಇದೇ ಮೊದಲಲ್ಲ!: ಗದಗ ನಗರದ ಅಂಚೆ ಕಚೇರಿ ಬಳಿ ಇರುವ ಎಟಿಎಂನಿಂದ ಬೇರೆಯವರ ಖಾತೆಯಿಂದ ಹಣ ಲಪಟಾಯಿಸುತ್ತಿರುವುದು ಇದೇ ಮೊದಲ ಸಲವಲ್ಲ. ಈಗಾಗಲೇ ಇಂತಹ ಮೂರು ಘಟನೆಗಳು ನಡೆದಿವೆ. ಆದರೆ, ಯಾರು ಮಾಡುತ್ತಿದ್ದಾರೆ, ಹೇಗೆ ಮಾಡುತ್ತಿದ್ದಾರೆ ಎಂಬ ಸುಳಿವು ಪೊಲೀಸರಿಗೂ ಸಿಕ್ಕಿಲ್ಲ. ಅಂಚೆ ಕಚೇರಿ ಅಧಿಕಾರಿಗಳು ಸಹ ಕೈಚೆಲ್ಲಿ ಕುಳಿತಿದ್ದರಿಂದ ಕಳ್ಳರು ತಮ್ಮ ಕರಾಮತ್ತು ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಾದರೂ ಇದಕ್ಕೆ ಕಡಿವಾಣ ಹಾಕಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…