ಎಟಿಎಂಗಳಲ್ಲಿ ಎನಿ ಟೈಂ ನೋ ಮನಿ!

ಗದಗ: ಕಳೆದ ಕೆಲ ದಿನಗಳಿಂದ ಅವಳಿನಗರದಲ್ಲಿ ಎಸ್​ಬಿಐ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್​ಗಳ ಎಟಿಎಂಗಳು ಬಂದ್ ಆಗಿವೆ. ಎಟಿಎಂಗಳ ಮುಂದೆ ‘ರಿಪೇರಿ ಇದೆ’, ‘ಹಣ ಇಲ್ಲ’ ಎಂಬ ಬೋರ್ಡ್​ಗಳು ನೇತಾಡುತ್ತಿವೆ. ಇದರಿಂದಾಗಿ ಎಟಿಎಂಗಳ ಉದ್ದೇಶವೇ ಈಡೇರದಂತಾಗಿದ್ದು, ಸಾರ್ವಜನಿಕರರು ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ವಣವಾಗಿದೆ.

ಗದಗ-ಬೆಟಗೇರಿ ಅವಳಿನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ ಇದೇ ಪರಿಸ್ಥಿತಿ. ತುರ್ತು ಸಂದರ್ಭದಲ್ಲಿ ಎಟಿಎಂ ಮೂಲಕ ಹಣ ಪಡೆಯಬೇಕೆಂಬ ಮಹದಾಸೆ ಹೊಂದಿದ್ದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ಎಟಿಎಂ ಕಾರ್ಡ್ ಕೈಯಲ್ಲಿ ಹಿಡಿದು ಗದಗ-ಬೆಟಗೇರಿ ಅವಳಿನಗರ ಸುತ್ತಾಡಿದರೂ ಯಾವುದೇ ಎಟಿಎಂ ಕೇಂದ್ರಗಳಲ್ಲಿ ನಯಾ ಪೈಸೆ ಹಣ ದೊರೆಯುತ್ತಿಲ್ಲ. 500, 1000 ಮುಖಬೆಲೆಯ ನೋಟ್​ಗಳನ್ನು ಬ್ಯಾನ್ ಮಾಡಿದ ಸಂದರ್ಭದಲ್ಲಿನ ಪರಿಸ್ಥಿತಿ ಮತ್ತೆ ಎದುರಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಟಗೇರಿಯಲ್ಲಿ ಎರಡು ಕೆನರಾ ಬ್ಯಾಂಕ್​ನ ಎಟಿಎಂ, 1 ಸಿಂಡಿಕೇಟ್, 3 ಎಸ್​ಬಿಐ, 1 ಕೆವಿಜಿ ಬ್ಯಾಂಕಿನ ಎಟಿಎಂ ಇದ್ದರೆ ಗದಗ ನಗರದಲ್ಲಿ 6 ಎಸ್​ಬಿಐ, 3 ಆಕ್ಸಿಸ್, ತಲಾ ಒಂದರಂತೆ ಎಚ್​ಡಿಎಫ್​ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ, ಕೆವಿಜಿ, ದೇನಾ, ಆಂಧ್ರಾ, ಕೆನರಾ, ವಿಜಯ, ಸಿಟಿ, ಇಂಡಿಯನ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹತ್ತು ಹಲವು ಬ್ಯಾಂಕ್​ಗಳ ಎಟಿಎಂಗಳಿವೆ. ಎಲ್ಲ ಎಟಿಎಂಗಳ ಮುಂದೆ ಹಾಕಿರುವ ‘ನೋ ಕ್ಯಾಶ್’ ಎಂಬ ಫಲಕಗಳು ಜನರನ್ನು ರೋಸಿ ಹೋಗುವಂತೆ ಮಾಡಿವೆ.

ಜನಸಾಮಾನ್ಯರ ಸಮಸ್ಯೆ ಒಂದೆಡೆಯಾದರೆ, ಬ್ಯಾಂಕ್ ಅಧಿಕಾರಿಗಳು ಹೇಳುವುದೇ ಬೇರೆ. ಬ್ಯಾಂಕ್ ರಜೆಗಳು ಬಂದಾಗ ಈ ರೀತಿಯ ಸಮಸ್ಯೆ ಸಾಮಾನ್ಯವಾಗಿದೆ. ಬ್ಯಾಂಕ್ ತೆರೆದ ಸಂದರ್ಭದಲ್ಲೂ ಎಟಿಎಂಗಳಲ್ಲಿ ತುಂಬಿಸಿದ 40 ಲಕ್ಷ ಹಣವು ಅರ್ಧ ಇಲ್ಲವೇ ಮುಕ್ಕಾಲು ಗಂಟೆಯಲ್ಲಿ ಹಣ ಖಾಲಿಯಾಗುತ್ತಿದೆ. ಇಷ್ಟೊಂದು ಹಣ ಗಂಟೆಯ ಅವಧಿಯಲ್ಲಿ ಖಾಲಿಯಾದರೆ ಎಟಿಎಂನಲ್ಲಿ ಹಣ ಹೇಗೆ ಉಳಿಯಲು ಸಾಧ್ಯ. ಸಾರ್ವಜನಿಕರು ಒಬ್ಬೊಬ್ಬರು ಮೂವತ್ತರಿಂದ ನಲವತ್ತು ಸಾವಿರ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ ಅಂತಾರೆ ಬ್ಯಾಂಕ್​ಗಳ ವ್ಯವಸ್ಥಾಪಕರು.

ಒಂದು ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಕನಿಷ್ಠ ಒಂದು ಡಿಬಿಟ್ ಇಲ್ಲವೇ ಕ್ರೆಡಿಕ್ ಕಾರ್ಡ್ ಇದ್ದೇ ಇರುತ್ತದೆ. ಜತೆಗೆ ಎಲ್ಲರ ಬಳಿಯೂ ಆಂಡ್ರೖೆಡ್ ಮೊಬೈಲ್ ಹೊಂದಿದ್ದು ಪ್ರತಿಯೊಬ್ಬರೂ ಹಣ ಡ್ರಾ ಮಾಡಿಕೊಳ್ಳುವ ಬದಲು ಆನ್​ಲೈನ್ ಮೂಲಕ ಕ್ಯಾಶ್​ಲೆಸ್ ಬ್ಯಾಂಕಿಂಗ್ ವ್ಯವಹಾರ ನಡೆಸುವುದನ್ನು ರೂಢಿಸಿಕೊಳ್ಳಬೇಕು. ಸದ್ಯ ಮಾರುಕಟ್ಟೆಗಳಲ್ಲಿ ರಸ್ತೆ ಬದಿಯ ಹಣ್ಣು ವ್ಯಾಪಾರಿಯಿಂದ ಹಿಡಿದು ಹೋಲ್​ಸೇಲ್ ವ್ಯಾಪಾರಸ್ಥರು ಸೇರಿದಂತೆ ದೊಡ್ಡ ಮಟ್ಟದ ಅಂಗಡಿಗಳಲ್ಲಿ ಸ್ವೈಪಿಂಗ್ ಮಶೀನ್ ಸೇರಿದಂತೆ ಪೇಟಿಎಂ, ಫೋನ್ ಪೆ ಆಪ್ ಬಳಕೆಯಾಗುತ್ತಿದೆ. ಕ್ಯಾಶ್​ಲೆಸ್ ವ್ಯವಹಾರ ನಡೆಸುವ ಮೂಲಕ ದೇಶದ ಅಭಿವೃದ್ಧಿಗೂ ಸಾರ್ವಜನಿಕರು ಸಹಕರಿಸಬೇಕು ಎನ್ನುತ್ತಾರೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ ಕೆ. ಜಗದೀಶನ್.

ಕಳೆದ ಹನ್ನೊಂದು ದಿನಗಳಿಂದ ರಾಷ್ಟ್ರೀಕೃತ ಬ್ಯಾಂಕ್​ಗಳ ಎಟಿಎಂಗಳಲ್ಲಿ ಹಣ ಇಲ್ಲ. ವಾರದಲ್ಲಿ ಆರು ದಿನ ಕೆಲಸಕ್ಕೆ ಹೋಗುತ್ತೇವೆ. ಕೆಲಸದ ಅವಧಿಯಲ್ಲಿ ಬ್ಯಾಂಕ್​ಗೆ ಹೋಗಲು ಸಾಧ್ಯವಾಗುತ್ತಿಲ್ಲ. ಎಟಿಎಂನಿಂದ ತೆಗೆದುಕೊಳ್ಳೋಣ ಎಂದರೆ ಅಲ್ಲಿಯೂ ಹಣವಿಲ್ಲ. ತಿಂಗಳ ಸಂಬಳ ಬ್ಯಾಂಕ್ ಅಕೌಂಟ್​ಗೆ ಜಮೆಯಾಗಿ 8 ದಿನ ಕಳೆದರೂ ಹಣ ತೆಗೆಯಲು ಸಾಧ್ಯವಾಗುತ್ತಿಲ್ಲ. ಚನ್ನಬಸಪ್ಪ ಮೂಲಿಮನಿ, ಗ್ರಾಹಕ

ಜಿಲ್ಲೆಯಲ್ಲಿನ ಎಟಿಎಂಗಳಲ್ಲಿ ಹಣ ಒದಗಿಸಲಾಗುತ್ತಿದೆ. ಗ್ರಾಹಕರು ನಗದುರಹಿತ ವಹಿವಾಟಿಗೆ ಮುಂದಾದರೆ ಎಟಿಎಂಗಳಲ್ಲಿ ಹಣದ ಕೊರತೆ ನೀಗಿಸಬಹುದು. ಜಿಲ್ಲೆಯ ಪ್ರತಿಯೊಬ್ಬರಿಗೂ ಬ್ಯಾಂಕ್ ಅಕೌಂಟ್ ಹಾಗೂ ರುಪೇ ಕಾರ್ಡ್ ನೀಡಲಾಗಿದ್ದು, ಹಣ ಡ್ರಾ ಮಾಡುವ ಬದಲು ಆನ್​ಲೈನ್ ವ್ಯವಹಾರವನ್ನು ರೂಢಿಸಿಕೊಳ್ಳಬೇಕು. ಕೆ. ಜಗದೀಶನ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ

Leave a Reply

Your email address will not be published. Required fields are marked *