ಎಜ್​ಬಾಸ್ಟನ್​ನಲ್ಲಿ ಇಂದು ಇಂಗ್ಲೆಂಡ್-ಆಸೀಸ್ ಸೆಮೀಸ್ ಕದನ 8ನೇ ಫೈನಲ್ ಕನಸಿನಲ್ಲಿ ಕಾಂಗರೂ, ಆಂಗ್ಲರಿಗೆ ಸೇಡಿನ ತವಕ

ಬರ್ವಿುಂಗ್​ಹ್ಯಾಂ: 27 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿನ ಕನಸಿನಲ್ಲಿರುವ ಆತಿಥೇಯ ಇಂಗ್ಲೆಂಡ್ ತಂಡ ತವರು ನೆಲದಲ್ಲಿ ಟ್ರೋಫಿ ಎತ್ತಿ ಹಿಡಿಯಲು ಇನ್ನು ಎರಡು ಹೆಜ್ಜೆಗಳಷ್ಟೇ ದೂರ ನಿಂತಿದೆ. ಎಜ್​ಬಾಸ್ಟನ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಕದನದಲ್ಲಿ ಮೂರು ಬಾರಿಯ ರನ್ನರ್​ಅಪ್ ಇಂಗ್ಲೆಂಡ್ ಹಾಗೂ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಎದುರಾಗಲಿವೆ.

3 ಬಾರಿ ಫೈನಲ್​ಗೇರಿದರೂ ಪ್ರಶಸ್ತಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ತಂಡ ಈ ಬಾರಿ ತವರು ನೆಲದಲ್ಲೇ ಶತಾಯಗತಾಯ ಟ್ರೋಫಿ ಗೆಲುವಿನ ಛಲದಲ್ಲಿದೆ. ಮತ್ತೊಂದೆಡೆ, 12 ತಿಂಗಳ ಹಿಂದೆಯಷ್ಟೇ ಚೆಂಡು ವಿರೂಪ ಪ್ರಕರಣದಲ್ಲಿ ಡೇವಿಡ್ ವಾರ್ನರ್-ಸ್ಟೀವನ್ ಸ್ಮಿತ್ ಸಿಲುಕಿದ ಪರಿಣಾಮ ಇಡೀ ತಂಡದಲ್ಲೇ ಮಂಕು ಆವರಿಸಿತ್ತು. ಶಿಕ್ಷೆ ಅನುಭವಿಸಿ ತಂಡಕ್ಕೆ ವಾಪಸಾದ ಬಳಿಕ ಡೇವಿಡ್ ವಾರ್ನರ್ ಭರ್ಜರಿ ಫಾಮರ್್​ನಲ್ಲಿರುವುದು ಆಸೀಸ್ ಆತ್ಮವಿಶ್ವಾಸ ಹೆಚ್ಚಿಸಿದೆ. ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಎದುರು ಆಡಿದ ಕಡೇ 12 ಮುಖಾಮುಖಿಯಲ್ಲಿ 10ರಲ್ಲಿ ಜಯ ದಾಖಲಿಸಿದ್ದು, ಗೆಲುವಿನ ನಾಗಾಲೋಟ ಮುಂದುವರಿಸಲು ಇರಾದೆಯಲ್ಲಿದೆ. -ಪಿಟಿಐ/ಏಜೆನ್ಸೀಸ್

ವಾರ್ನರ್​ಗೆ ರೋಹಿತ್ ಹಿಂದಿಕ್ಕುವ ಅವಕಾಶ

ಡೇವಿಡ್ ವಾರ್ನರ್ (638) 11 ರನ್ ಗಳಿಸಿದರೆ ರೋಹಿತ್ ಶರ್ಮರನ್ನು (648) ಹಿಂದಿಕ್ಕಿ ಟೂರ್ನಿಯ ಗರಿಷ್ಠ ರನ್ ಸಾಧಕರೆನಿಸಲಿದ್ದಾರೆ. ಇದಲ್ಲದೆ, 22 ರನ್ ಗಳಿಸಿದರೆ 2007ರಲ್ಲಿ 659 ರನ್ ಗಳಿಸಿದ್ದ ದೇಶಬಾಂಧವ ಮ್ಯಾಥ್ಯೂ ಹೇಡನ್ ಸಾಧನೆ ಹಿಂದಿಕ್ಕಲಿದ್ದಾರೆ. 36 ರನ್ ಗಳಿಸಿದರೆ ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ಸಚಿನ್ ತೆಂಡುಲ್ಕರ್ (673) ದಾಖಲೆ ಮುರಿಯಲಿದ್ದಾರೆ.

ಪಂದ್ಯಕ್ಕೆ ಮಳೆ ಭೀತಿ

ಮೊದಲ ಸೆಮಿಫೈನಲ್​ಗೆ ಕಾಡಿದಂತೆ ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *