More

    ಎಚ್.ಎಸ್.ಆರ್.ಪಿ. ಅಳವಡಿಕೆಗೆ ಅವಧಿ ವಿಸ್ತರಣೆ – ಪೂರ್ವಭಾವಿ ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ

    ದಾವಣಗೆರೆ: ಎಲ್ಲ ವಾಹನಗಳೂ ಎಚ್.ಎಸ್.ಆರ್.ಪಿ. (ಹೆಚ್ಚಿನ ಭದ್ರತೆಯ ನೋಂದಣಿ ಫಲಕ) ಅಳವಡಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಇದುವರೆಗೆ ಇದ್ದ ಅವಧಿಯನ್ನು 2024ರ ಫೆ 17ರವರೆಗೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
    ಎಚ್.ಎಸ್.ಆರ್.ಪಿ. ನೋಂದಣಿ ಫಲಕಗಳ ಅಳವಡಿಕೆ ಕುರಿತು ಎಸ್ಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    2019ರ ಏಪ್ರಿಲ್ ನಂತರ ನೋಂದಣಿಯಾದ ವಾಹನಗಳಿಗೆ ಈಗಾಗಲೇ ಎಚ್.ಎಸ್.ಆರ್.ಪಿ. ಅಳವಡಿಕೆಯಾಗಿದೆ. ಅದಕ್ಕೂ ಮೊದಲು ನೋಂದಣಿಯಾದ ಜಿಲ್ಲೆಯ 6.16 ಲಕ್ಷ ವಾಹನಗಳಿಗೆ ಎಚ್.ಎಸ್.ಆರ್.ಪಿ. ಅಳವಡಿಕೆಯಾಗಬೇಕಿದೆ ಎಂದು ತಿಳಿಸಿದರು.
    ವಾಹನಗಳ ನೋಂದಣಿಗಾಗಿ ಅಗತ್ಯ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. www.siam.in ಹಾಗೂ https://bookmyhsrp.com ವೆಬ್ ತಾಣಗಳಲ್ಲಿ ನೋಂದಣಿ ಫಲಕ ನೋಂದಣಿ ಮಾಡಿಸಿಕೊಳ್ಳಬೇಕು. ವಿಸ್ತರಣೆಯ ಅವಧಿಯಲ್ಲೂ ಫಲಕಗಳನ್ನು ಅಳವಡಿಸಿಕೊಳ್ಳದಿದ್ದರೆ 500 ರೂ.ಗಳ ದಂಡ ವಿಧಿಸಲಾಗುವುದು ಎಂದು ಎಸ್ಪಿ ಎಚ್ಚರಿಸಿದರು.
    ಈಗಿರುವ ಸಾಮಾನ್ಯ ಫಲಕಗಳನ್ನು ನಕಲು ಮಾಡುವುದು ಸುಲಭ. ಹೆಚ್ಚಿನ ಭದ್ರತೆಯ ಫಲಕಗಳನ್ನು ನಕಲು ಮಾಡುವುದು ಕಷ್ಟಸಾಧ್ಯ. ಅಲ್ಲದೇ, ಇದರಲ್ಲಿ ವಾಹನದ ವಿವರಗಳು ಪೊಲೀಸರಿಗೆ ಸುಲಭವಾಗಿ ಲಭ್ಯವಾಗುತ್ತವೆ. ಅಪರಾಧ ಚಟುವಟಿಕೆ ತಡೆಯಲು ನೆರವಾಗುತ್ತದೆ ಎಂದು ಹೇಳಿದರು.

    ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮಥೇಶ್ ಮಾತನಾಡಿ, ಎಚ್.ಎಸ್.ಆರ್.ಪಿ. ಫಲಕಗಳನ್ನು ಅಳವಡಿಸುವಾಗ ದಾಖಲೆಗಳು ಸರಿ ಇರಬೇಕು. ವಾಹನಕ್ಕೆ ಸಂಬಂಧಿತ ಮಾಹಿತಿ ಲೋಪವಾಗಿದ್ದ್ದಲ್ಲಿ ಆರ್.ಟಿ.ಒ. ಕಚೇರಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಶ್ರೀನಿವಾಸಮೂರ್ತಿ ಮಾತನಾಡಿ, 53 ಸರ್ಕಾರಿ ಬಸ್‌ಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ. ಉಳಿದ 323 ಬಸ್‌ಗಳಿಗೂ ಇದನ್ನು ಅನ್ವಯಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
    ಸಭೆಯಲ್ಲಿ ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್, ದಾವಣಗೆರೆ ಸಂಚಾರ ವೃತ್ತದ ಸಿಪಿಐ ಮಂಜುನಾಥ್ ನೆಲವಾಗಲು ಬಸ್, ಆಟೋ, ಖಾಸಗಿ ವಾಣಿಜ್ಯ ವಾಹನಗಳ ಸಂಘಗಳ ಪ್ರತಿನಿಧಿಗಳು, ವಾಹನಗಳ ಶೋ ರೂಂ ಪ್ರತಿನಿಧಿಗಳು ಮತ್ತಿತರರಿದ್ದರು.

    ನಕಲಿ ವೆಬ್‌ಸೈಟ್ ಬಗ್ಗೆ ನಿಗಾ
    ಎಚ್‌ಎಸ್‌ಆರ್‌ಪಿ ಹೆಸರಿನಲ್ಲಿ ಹಣ ಪಡೆಯುವ ನಕಲಿ ವೆಬ್‌ಸೈಟ್‌ಗಳಿವೆ. ಇಂತಹ ಅಂತರ್ಜಾಲ ತಾಣವೊಂದು ಹಣ ಪಡೆದು ವಂಚಿಸಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಸೈಬರ್ ಅಪರಾಧ ದಳ ಕ್ರಮ ತೆಗೆದುಕೊಳ್ಳಲಿದೆ ಎಂದು ಎಸ್ಪಿ ಪ್ರತಿಕ್ರಿಯಸಿದರು.
    ಖಾಸಗಿ ಶೋ ರೂಂ ಒಂದರಲ್ಲಿ ಉದ್ದೇಶಿತ ಫಲಕ ಅಳವಡಿಕೆಗೆ ಹೆಚ್ಚುವರಿಯಾಗಿ 100 ರೂ. ಪಡೆಯಲಾಗುತ್ತಿದೆ ಎಂಬ ದೂರು ಬಂದಾಗ ಎಚ್.ಎಸ್.ಆರ್.ಪಿಗಾಗಿ ಆನ್‌ಲೈನ್‌ನಲ್ಲಿ ಹಣ ಪಾವತಿಸುವಾಗಲೇ ಅಳವಡಿಕೆ ಶುಲ್ಕ ಪಡೆಯಲಾಗಿರುತ್ತದೆ. ಹೆಚ್ಚುವರಿ ಶುಲ್ಕ ಪಡೆಯುವುದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ತಿಳಿಸಿದರು.
    ವಾಣಿಜ್ಯ ವಾಹನಗಳಿಗೆ ಫಲಕ ಅಳವಡಿಸುವ ಘಟಕಗಳು ದಾವಣಗೆರೆಯಲ್ಲಿ ಇಲ್ಲ. ಇದನ್ನು ಆರಂಭಿಸಬೇಕು ಎಂದು ಖಾಸಗಿ ವಾಹನಗಳ ಸಂಘದವರು ಒತ್ತಾಯಿಸಿದರು.
    ಕೆಲವೆಡೆ ಬಸ್‌ಗಳ ಫುಟ್‌ಬೋರ್ಡ್ ಮೇಲೆ ಮಕ್ಕಳು ನಿಲ್ಲುವ ಸ್ಥಿತಿ ಇದೆ ಎಂಬ ದೂರಿಗೆ ಸ್ಪಂದಿಸಿದ ಎಸ್ಪಿ, ಹಾಗೆ ಮಾಡಿದರೆ ದಂಡ ಮಾತ್ರವಲ್ಲ, ಬಸ್‌ಗಳ ಅನುಮತಿಯನ್ನೇ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
    ನಿಯಮ ಮೀರಿ ಇಂಜಿನ್ ಬದಲಾವಣೆಯಾದ ಹಳೆಯ ಸರಕು ಸಾಗಣೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಬುಕಿಂಗ್ ಸಾಧ್ಯವಾಗುತ್ತಿಲ್ಲ ಎಂದು ವಾಣಿಜ್ಯ ವಾಹನಗಳ ಮಾಲೀಕರ ಸಂಘದ ಪ್ರತಿನಿಧಿಯೊಬ್ಬರು ಪ್ರಶ್ನಿಸಿದರು.
    ಆರ್.ಟಿ.ಒ. ಅನುಮತಿ ಪಡೆಯದೇ ಇಂಜಿನ್ ಬದಲಿಸಿದ್ದೇ ತಪ್ಪು. ನಿಯಮಗಳನ್ನು ಮೀರಿ ಮನಸ್ಸಿಗೆ ಬಂದಂತೆ ವಾಹನಗಳನ್ನು ಬದಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts