ಎಚ್​ಎಎಲ್​ನಲ್ಲಿ ಸಂಭವಿಸಿದ್ದ ಮಿರಾಜ್​ ವಿಮಾನ ಪತನಕ್ಕೆ ಸೆನ್ಸರ್​ನಲ್ಲಿನ ದೋಷವೇ ಕಾರಣ

ಬೆಂಗಳೂರು: ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಅವಘಡಕ್ಕೀಡಾದ ಮಿರಾಜ್ 2000 ಯುದ್ಧ ವಿಮಾನದ ಬ್ಲಾ್ಯಕ್​ಬಾಕ್ಸ್​ನ ಪ್ರಾಥಮಿಕ ಮಾಹಿತಿ ಬಹಿರಂಗವಾಗಿದೆ.

ಅವಘಡಕ್ಕೆ ಪೈಲಟ್​ಗಳು ಕಾರಣರಲ್ಲ, ಬದಲಾಗಿ ವಿಮಾನದ ಸೆನ್ಸರ್​ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ಅವಘಡ ಸಂಭವಿಸಿದೆ ಎಂದು ಭಾರತೀಯ ವಾಯುಸೇನೆ ಮೂಲಗಳು ತಿಳಿಸಿವೆ.

ಫೆ.1 ರಂದು ಪರೀಕ್ಷಾರ್ಥ ಹಾರಾಟ ವೇಳೆ ಮಿರಾಜ್ 2000 ಯುದ್ಧ ವಿಮಾನ ಟೇಕ್​ಆಫ್ ಆದ ಮರುಕ್ಷಣದಲ್ಲೇ ಮತ್ತೆ ರನ್​ವೇಗೆ ಅಪ್ಪಳಿಸಿತ್ತು. ದುರ್ಘಟನೆಯಲ್ಲಿ ಪ್ಯಾರಾಚೂಟ್ ಮೂಲಕ ಹೊರಹಾರಿದರೂ ಹೊತ್ತಿ ಉರಿಯುತ್ತಿದ್ದ ವಿಮಾನದ ಅವಶೇಷಗಳ ಮೇಲೆಯೇ ಬಿದ್ದು ಡೆಹ್ರಾಡೂನ್ ಮೂಲದ ವಾಯುಸೇನೆಯ ಸ್ಕಾ್ವಡ್ರನ್ ಲೀಡರ್ ಸಿದ್ಧಾರ್ಥ ನೇಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಬ್ಬ ಪೈಲಟ್ ಸ್ಕಾ್ವಡ್ರನ್ ಲೀಡರ್ ಸಮೀರ್ ಅಬ್ರೋಲ್ ವಿಮಾನದ ಅವಶೇಷದ ಮೇಲೆ ಬೀಳದಿದ್ದರೂ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.

ಫ್ರಾನ್ಸ್​ಗೆ ಬ್ಲಾ್ಯಕ್​ಬಾಕ್ಸ್: ಮಿರಾಜ್ 2000 ಅವಘಡದ ವೇಳೆ ಉಂಟಾದ ಸ್ಪೋಟಕ್ಕೆ ಬ್ಲಾ್ಯಕ್ ಬಾಕ್ಸ್​ಗೆ (ಫ್ಲೈಟ್ ರೆಕಾರ್ಡರ್) ತೀವ್ರ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇದರಲ್ಲಿರುವ ಎಲ್ಲ ಮಾಹಿತಿ ತೆಗೆಯಲು ಮಿರಾಜ್ 2000 ಉತ್ಪಾದಕ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್​ಗೆ ರವಾನಿಸಲಾಗಿತ್ತು. ಇಂಧನ ಪೂರೈಕೆ, ಎತ್ತರ, ವಿಮಾನದ ವೇಗ ಹೀಗೆ ಹಲವು ಫ್ಲೈಟ್ ಡೇಟಾ ಹಾಗೂ ಪೈಲೆಟ್​ಗಳ ಸಂಭಾಷಣೆ ಬ್ಲಾ್ಯಕ್ ಬಾಕ್ಸ್​ನಲ್ಲಿ ದಾಖಲಾಗುತ್ತದೆ. ಈ ಮಾಹಿತಿ ಆಧರಿಸಿ ಅವಘಡಕ್ಕೆ ನಿರ್ದಿಷ್ಟ ಕಾರಣ ಏನು ಎಂಬುವುದನ್ನು ಪತ್ತೆ ಹಚ್ಚಲಾಗುತ್ತದೆ.

ಪ್ರಸ್ತುತ ಘಟನೆ ಬಗ್ಗೆ ಏರ್​ವೈಸ್ ಮಾರ್ಷಲ್ ಎನ್. ತಿವಾರಿ ಸಮ್ಮುಖದಲ್ಲಿ ಭಾರತೀಯ ವಾಯುಸೇನೆ ಹಾಗೂ ಎಚ್​ಎಎಲ್ ಜಂಟಿಯಾಗಿ ತನಿಖೆ ನಡೆಸುತ್ತಿವೆ. ಪೂರ್ಣ ತನಿಖೆ ಬಳಿಕವಷ್ಟೇ ದುರ್ಘಟನೆಗೆ ನಿಖರವಾದ ಕಾರಣ ತಿಳಿಯಲಿದೆ.

ಎಚ್​ಎಎಲ್​ನಲ್ಲಿ ಪರೀಕ್ಷೆ

17 ಸಾವಿರ ಕೋಟಿ ರೂ. ವೆಚ್ಚದಲ್ಲಿ 51 ಮಿರಾಜ್ 2000 ಯುದ್ಧ ವಿಮಾನಗಳನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್​ಎಎಲ್) ಮೇಲ್ದರ್ಜೆಗೇರಿಸುತ್ತಿದೆ. ಮೇಲ್ದರ್ಜೆಗೇರಿಸಿದ ವಿಮಾನವನ್ನು ಎಚ್​ಎಎಲ್ ಟೆಸ್ಟ್ ಪೈಲಟ್​ಗಳು ಪರೀಕ್ಷೆ ನಡೆಸಿ, ಏರ್​ಕ್ರಾಫ್ಟ್ ಆಂಡ್ ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್​ವೆುಂಟ್​ಗೆ ನೀಡಿದ್ದರು. ಫೆ.1ರಂದು ಡ್ರಾಪ್ ಟ್ಯಾಂಕ್ (ವಿಮಾನದ ಕೆಳಭಾಗದಲ್ಲಿ ಅಳವಡಿಸಿರುವ ಪ್ರತ್ಯೇಕ ಇಂಧನ ಟ್ಯಾಂಕ್) ಹಾಗೂ ಶಸ್ತ್ರಾಸ್ತ್ರಸಹಿತ ಮಿರಾಜ್ 2000 ಪರೀಕ್ಷೆಗೆ ಸಜ್ಜಾಗಿತ್ತು.