ಎಕ್ಸ್​ಪ್ರೆಸ್ ಚಾನಲ್​ಗೆ ವಿರೋಧ

ಗುಬ್ಬಿ : ರಾಮನಗರಕ್ಕೆ ಎಕ್ಸ್​ಪ್ರೆಸ್ ಚಾನಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆ ವಿರೋಧಿಸಿ ಮಾಜಿ ಸಂಸದ ಜಿ.ಎಸ್.ಬಸವರಾಜು ಮಂಗಳವಾರ ಬೀದಿಗಿಳಿದು ಹೋರಾಟ ಆರಂಭಿಸಿದರು.

ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವ್ಥಾನದಲ್ಲಿ ಪೂಜೆ ಸಲ್ಲಿಸಿ ಜಿಎಸ್​ಬಿ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಮೆರವಣಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಕೆಲಕಾಲ ರಾಷ್ಟ್ರೀಯ ಹೆದ್ದಾರಿ 206 ಬಂದ್ ಮಾಡಿ ಡಿ.ಕೆ. ಸಹೋದರರ ವಿರುದ್ಧ ಘೊಷಣೆ ಕೂಗಿದರು.

ಮಾಜಿ ಸಂಸದ ಬಸವರಾಜು ಮಾತನಾಡಿ, ರಾಮನಗರ ಪ್ರತಿನಿಧಿಸುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಕನಕಪುರದ ಬೃಹತ್ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಹೆಚ್ಚಿಸದೆ ರಾಮನಗರ, ಮಾಗಡಿಗೆ ನೀರು ಹರಿಸಲು ಮುಂದಾಗಿದ್ದಾರೆ. ಗುಬ್ಬಿ ತಾಲೂಕು ಕಡಬ ಹೋಬಳಿ ಸುಂಕಪುರ ಬಳಿಯಿಂದ ನೇರವಾಗಿ ರಾಮನಗರಕ್ಕೆ ನೀರು ತೆಗೆದುಕೊಂಡು ಹೋದರೆ ತುಮಕೂರು ಜಿಲ್ಲೆಗೆ ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಈ ಉದ್ದೇಶಿತ ಯೋಜನೆ ಕಾಮಗಾರಿಗೆ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಿರುವ ನಾಲೆಯನ್ನೇ ಅಗಲೀಕರಣ ಮಾಡಿ ತುಮಕೂರು, ಕುಣಿಗಲ್ ಮಾರ್ಗವಾಗಿ ನೀರು ತೆಗೆದುಕೊಂಡು ಹೋಗಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಗುಬ್ಬಿ ತಾಲೂಕಿನಿಂದ ನೇರವಾಗಿ ನೀರನ್ನು ತೆಗೆದುಕೊಂಡು ಹೋಗುವುದರಿಂದ ಮುಂದಿನ ದಿನಗಲ್ಲಿ ಈ ಭಾಗದ ಜನರಿಗೆ ತೊಂದರೆಯಾಗುತ್ತದೆ. ಇದರಿಂದ ಎಚ್ಚೆತ್ತುಕೊಂಡು ಈ ಭಾಗದ ಜನಪ್ರತಿನಿಧಿಗಳು ಮತ್ತು ರೈತರು ಹೋರಾಟ ಮಾಡದಿದ್ದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಪಂ ಸದಸ್ಯರಾದ ರಾಮಾಂಜನಪ್ಪ, ಭಾರತಿ, ಡಾ.ನವ್ಯಾ, ಜಗನ್ನಾಥ್, ಸಿದ್ದರಾಮಣ್ಣ, ಅನಸೂಯಮ್ಮ, ಮಮತಾ, ಮುಖಂಡರಾದ ಬಿ.ಎನ್.ಬೆಟ್ಟಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಹಾ.ನ.ಲಿಂಗಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ಎಸ್​ಪಿಎಂ, ವಾಸಣ್ಣ ವಿರುದ್ಧವೂ ವಾಗ್ದಾಳಿ : ಗುಬ್ಬಿ ಕ್ಷೇತ್ರದ ಶಾಸಕ ಮಂತ್ರಿಯಾಗಿದ್ದರೂ ಪ್ರಯೋಜನವಿಲ್ಲ. ನೀರಿನ ಬಗ್ಗೆ ಜ್ಞಾನವಿಲ್ಲದ ಮಂತ್ರಿ ಎಂಬುದನ್ನು ಜನರು ಅರಿಯಬೇಕು. ಸಣ್ಣತನದ ರಾಜಕೀಯ ಮಾಡುವ ಸಚಿವ ಶ್ರೀನಿವಾಸ್​ಗೆ ಹೆದರಿ ಮನೆಯಲ್ಲಿ ಕೂರುವ ವ್ಯಕ್ತಿ ನಾನಲ್ಲ ಎಂದು ಮಾಜಿ ಸಂಸದ ಬಸವರಾಜು ಗುಡುಗಿದರು. ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಎಚ್​ಎಂಟಿ ಜಾಗ ಉಳಿಸಿದೆ. ಎಚ್​ಎಎಲ್ ತಂದೇ.. ಇಸ್ರೋ ತಂದೇ.. ಎಂದು ಬೊಬ್ಬೆ ಹೊಡೆಯುವುದನ್ನು ಬಿಟ್ಟು ಜಿಲ್ಲೆಗೆ ಹೇಮಾವತಿ ನೀರಿನ ವಿಷಯದಲ್ಲಿ ಆಗುತ್ತಿರುವ ಅನ್ಯಾಯ ತಪ್ಪಿಸಲು ಹೋರಾಟ ನಡೆಸಲಿ ಎಂದು ಸಲಹೆ ನೀಡಿದರು.

ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದಕ್ಕೆ ವಿರೋಧವಿಲ್ಲ. ಆದರೆ, ತುಮಕೂರು ಜಿಲ್ಲೆಯ ಜನರಿಗೆ ಮೋಸ ಮಾಡಿ ಅನ್ಯಾಯದಿಂದ ತೆಗೆದುಕೊಂಡು ಹೋದರೆ ಸಹಿಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ನೀಡಿರುವ 10 ಟಿಎಂಸಿ ನೀರಿನಲ್ಲಿ 6.5 ತುಮಕೂರು ಜಿಲ್ಲೆಗೆ, 3.5ಟಿಎಂಸಿ ರಾಮನಗರಕ್ಕೆ ಹೋಗಬೇಕು.

| ಜಿ.ಎಸ್.ಬಸವರಾಜು, ಮಾಜಿ ಸಂಸದ