ಎಕ್ಸಿಟ್ ಹಾದಿಯಲ್ಲೀಗ ಗ್ರೀಸ್!

ಬ್ರೆಕ್ಸಿಟ್ ಆಘಾತದಿಂದ ಐರೋಪ್ಯ ರಾಷ್ಟ್ರಗಳಿನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲಾಗಲೇ ಗ್ರೆಕ್ಸಿಟ್ ಮಾತು ಕೇಳಿ ಬರುತ್ತಿದೆ. ದಿನೇದಿನೆ ಕುಸಿಯುತ್ತಿರುವ ಆರ್ಥಿಕ ಸ್ಥಿತಿ ಗ್ರೀಸ್​ಗೆ ಸಾಲದ ಬಡ್ಡಿಯನ್ನೂ ತೀರಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ವಿುಸಿದೆ. ಗ್ರೀಸ್​ನ ಆರ್ಥಿಕ ಸ್ಥಿತಿ ಹೀಗೇಕಾಯಿತು? ಒಕ್ಕೂಟದಿಂದ ಹೊರನಡೆಯಬೇಕಾದ ಸನ್ನಿವೇಶ ಏಕೆ ನಿರ್ವಣವಾಗುತ್ತಿದೆ? ಮುಂತಾದವುಗಳ ಮಾಹಿತಿ ಇಲ್ಲಿದೆ.

 

ರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆದು ಕೆಲ ಸಮಯ ಆಗುವಷ್ಟರಲ್ಲೇ ಗ್ರೀಸ್ ಕೂಡ ಒಕ್ಕೂಟದಿಂದ ಹೊರನಡೆಯಲಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಕಾರಣ, ಗ್ರೀಸ್​ನ ಹಣಕಾಸು ಸ್ಥಿತಿ ತೀವ್ರ ತೆರನಾಗಿ ಹದಗೆಟ್ಟಿದ್ದು ಸಾಲದ ಹೊರೆ ಹೆಚ್ಚುತ್ತಲೇ ಸಾಗಿದೆ. ಇದರ ಪರಿಣಾಮವಾಗಿ ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳು ಗ್ರೀಸ್ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದು, ಒಕ್ಕೂಟದಿಂದ ಹೊರ ನಡೆದರೆ ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 2007-08ರಿಂದಲೂ ಗ್ರೀಸ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಹೀಗಾಗಿ ವಿತ್ತೀಯ ಸಮಸ್ಯೆ ನಿವಾರಿಸಲು ಐರೋಪ್ಯ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಒಪ್ಪಂದ ಮಾಡಿಕೊಂಡು ಸಾಲ ಪಡೆದುಕೊಂಡಿತ್ತು. 2015ರಲ್ಲಿ ಗ್ರೀಸ್​ಗೆ 86 ಬಿಲಿಯನ್ ಯುರೋ(6.11 ಲಕ್ಷ ಕೋಟಿ ರೂಪಾಯಿ) ಸಾಲ ನೀಡಲು ಒಕ್ಕೂಟ ನಿರ್ಣಯಿಸಿತ್ತು. ಆ ಪೈಕಿ ಮೊದಲ ಹಂತದಲ್ಲಿ ಸ್ವಲ್ಪ ಹಣವನ್ನು ಗ್ರೀಸ್​ಗೆ ನೀಡಲಾಗಿತ್ತು. ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲು ಕೆಲ ಕ್ರಮ ಕೈಗೊಳ್ಳುವಂತೆ ಒಕ್ಕೂಟ ಸೂಚಿಸಿತ್ತು. ಇದೀಗ ಮತ್ತೊಮ್ಮೆ ಗ್ರೀಸ್​ಗೆ ಐರೋಪ್ಯ ಒಕ್ಕೂಟದಿಂದ ಹಣ ಬಿಡುಗಡೆ ಮಾಡಬೇಕಾಗಿದ್ದು, ಒಕ್ಕೂಟದ ರಾಷ್ಟ್ರಗಳು ಇದಕ್ಕೆ ಹಿಂದೇಟು ಹಾಕುತ್ತಿವೆ. ಗ್ರೀಸ್​ಗೆ ಹಣ ಬಿಡುಗಡೆ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈ ರಾಷ್ಟ್ರಗಳಿಗೆ ಎದುರಾಗಿದ್ದು, ಆ ದೇಶಕ್ಕೆ ನೀಡುತ್ತಿರುವ ಸಾಲಕ್ಕೆ ಹೆಚ್ಚಿನ ಪ್ರಮಾಣದ ಬಡ್ಡಿ ವಿಧಿಸಬೇಕೆಂದು ಬೇಡಿಕೆ ಇಟ್ಟಿವೆ.

ಐಎಂಎಫ್ ಎಚ್ಚರಿಕೆ

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಗ್ರೀಸ್​ಗೆ ನೀಡುತ್ತಿರುವ ಹಣಕಾಸು ಸಹಾಯ ಸಮರ್ಥನೀಯವಲ್ಲ ಎಂದು ಎಚ್ಚರಿಕೆ ನೀಡಿದೆ. ಇದೀಗ ಗ್ರೀಸ್​ನ ಮುಂದಿನ ನಡೆಯೇನು ಎಂಬ ಪ್ರಶ್ನೆ ಹುಟ್ಟಿಸಿದೆ. ಜುಲೈ ಅಂತ್ಯದೊಳಗಾಗಿ ಗ್ರೀಸ್ ಐರೋಪ್ಯ ಒಕ್ಕೂಟಕ್ಕೆ 6 ಬಿಲಿಯನ್ ಯುರೋ (42,679 ಕೋಟಿ ರೂಪಾಯಿ) ಹಣವನ್ನು ಹಿಂದಿರುಗಿಸಬೇಕಿದೆ. ಇಲ್ಲದೇ ಹೋದಲ್ಲಿ 2015ರಲ್ಲಿ ನಡೆದ ಹಣಕಾಸು ಒಪ್ಪಂದದಂತೆ ಹೆಚ್ಚಿನ ಹಣ ಬಿಡುಗಡೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಗ್ರೀಸ್ ಐರೋಪ್ಯ ಒಕ್ಕೂಟದಿಂದ ಹೊರನಡೆಯಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಇದಕ್ಕೆ ಪೂರಕವೆಂಬಂತೆ ಜರ್ಮನಿಯ ಹಣಕಾಸು ಸಚಿವ ವೋಫ್​ಗ್ಯಾಂಗ್ ಸ್ಚಾಬೆಲ್ ಜುಲೈ ಅಂತ್ಯದೊಳಗಾಗಿ ಗ್ರೀಸ್ ಐರೋಪ್ಯ ಒಕ್ಕೂಟಕ್ಕೆ ಹಣ ಹಿಂತಿರುಗಿಸಬೇಕು. ಇಲ್ಲವಾದಲ್ಲಿ ಒಕ್ಕೂಟದಿಂದ ಹೊರನಡೆಯಬೇಕೆಂದು ಎಚ್ಚರಿಸಿದ್ದಾರೆ. ಐರೋಪ್ಯ ಒಕ್ಕೂಟಕ್ಕೆ ಇದು ಪೂರಕವಾಗಿರುವ ಕಾಲವೇನಲ್ಲ. ನೆದರ್ಲೆಂಡ್, ಫ್ರಾನ್ಸ್, ಜರ್ಮನಿ ಮುಂತಾದ ರಾಷ್ಟ್ರಗಳು ಕೆಲ ಸಮಯದಲ್ಲೇ ಚುನಾವಣೆ ಎದುರಿಸಲಿವೆ. ಜತೆಗೆ ಬ್ರೆಕ್ಸಿಟ್ ವಿಚಾರದ ಮಾತುಕತೆಗಳು ಕೂಡ ಕೆಲ ವಾರಗಳಲ್ಲೇ ಆರಂಭವಾಗಲಿದೆ. ಹೀಗಿರುವಾಗ ಗ್ರೀಸ್ ಒಕ್ಕೂಟದಿಂದ ಹೊರನಡೆದಲ್ಲಿ ಹಲವು ಸಮಸ್ಯೆಗಳು ಎದುರಾಗಲಿವೆ.

ಗ್ರೀಸ್ ಕರೆನ್ಸಿ ಯಾವುದಾಗಲಿದೆ?

ಫೆಬ್ರವರಿ 20ರಂದು ನಡೆಯಲಿರುವ ಹಣಕಾಸು ಸಚಿವರ ಸಭೆ ಒಕ್ಕೂಟದಲ್ಲಿ ಗ್ರೀಸ್​ನ ಭವಿಷ್ಯವನ್ನು ನಿರ್ಧರಿಸಲಿದೆ. ಒಂದು ವೇಳೆ ಗ್ರೀಸ್ ಐರೋಪ್ಯ ಒಕ್ಕೂಟದಿಂದ ಹೊರ ನಡೆಯಬೇಕಾದದ್ದು ಅನಿವಾರ್ಯವೇ ಆದಲ್ಲಿ ಮುಂದಿನ ದಿನಗಳಲ್ಲಿ ಅದು ಯುರೋವನ್ನು ಕರೆನ್ಸಿಯಾಗಿ ಬಳಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಹೀಗಾದಲ್ಲಿ ಮುಂದೆ ಯಾವ ಕರೆನ್ಸಿ ಬಳಸಿಕೊಳ್ಳಲಿದೆ? ಐರೋಪ್ಯ ಒಕ್ಕೂಟದಿಂದ ಹೊರ ಬೀಳುವ ಮೊದಲೇ ಮತ್ತೊಂದು ಕರೆನ್ಸಿ ಬಳಕೆಗೆ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಮೂಲಗಳ ಪ್ರಕಾರ, ಗ್ರೀಸ್​ನ ಹಳೇ ಕರೆನ್ಸಿ ಡ್ರಾಚ್ಮಾವನ್ನೇ ಮರುಬಳಕೆ ಮಾಡಿಕೊಳ್ಳಲಿದೆ. ಅಥವಾ ಗ್ರೀಸ್ ಯುರೋಜೋನ್ ಕ್ವಾರನ್​ಟೀನ್ ಆಗಿ ಉಳಿದುಕೊಳ್ಳಲಿದೆ. ಹಾಗಾದರೆ ಗ್ರೀಸ್ ಯುರೋವನ್ನು ಬಳಸಿಕೊಳ್ಳಬಹುದು. ಕೊಸೊವೊ ಮತ್ತು ಮಾಂಟೆನೆಗ್ರೋ ಐರೋಪ್ಯ ಒಕ್ಕೂಟದ ಭಾಗವಾಗಿರದೆಯೇ ಯುರೋವನ್ನು ಬಳಸಿಕೊಳ್ಳುತ್ತಿವೆ. ಇದೇ ನೀತಿಯನ್ನು ಗ್ರೀಸ್ ಕೂಡ ಅನುಸರಿಸಬಹುದಾಗಿದೆ. ಇನ್ನೊಂದು ಸಾಧ್ಯತೆಯೆಂದರೆ, ಎರಡು ತರಹದ ಯುರೋ ಕರೆನ್ಸಿಯನ್ನು ಬಳಸಿಕೊಳ್ಳುವುದು. ಹಣ ವರ್ಗಾವಣೆಗಾಗಿ ಈಗಿನ ಯುರೋವನ್ನೇ ಬಳಸಿಕೊಂಡು, ವೇತನ, ಪಿಂಚಣಿ ಮುಂತಾದವುಗಳಿಗೆ ಗ್ರೀಕ್​ನ ಪ್ರತ್ಯೇಕ ಮಾದರಿಯ ಯುರೋ ಬಳಸಿಕೊಳ್ಳಬಹುದು.

ಐಎಂಎಫ್ ಹೇಳುವುದೇನು?

ಗ್ರೀಸ್​ನೊಂದಿಗೆ ಒಪ್ಪಂದ ಮಾಡಿಕೊಂಡು ಸಾಲ ನೀಡಿರುವುದೇ ತನ್ನ ಮೊದಲ ತಪ್ಪೆಂದು ಐಎಂಎಫ್ ಮತ್ತು ಜರ್ಮನಿ ಹೇಳಿವೆ. ಗ್ರೀಸ್ ಬಗ್ಗೆ ಕಠಿಣ ನಿಲುವು ತಳೆಯುವುದೊಂದೆ ಈಗಿರುವ ಮಾರ್ಗ ಎಂದು ಅಭಿಪ್ರಾಯಪಟ್ಟಿದೆ. ಐಎಂಎಫ್​ನ ಅಂದಾಜಿನಂತೆ ಗ್ರೀಸ್ ಸಾಲದ ಹೊರೆ ಬೆಳೆಯುತ್ತಲೇ ಸಾಗಲಿದ್ದು, 2060ರ ವೇಳೆಗೆ ಇದು ಗ್ರೀಸ್ ಜಿಡಿಪಿಯ ಶೇ. 275ರಷ್ಟಾಗಲಿದೆ. ಹೀಗಾಗಿ ಗ್ರೀಸ್ ಐರೋಪ್ಯ ಒಕ್ಕೂಟದಿಂದ ಪಡೆದುಕೊಂಡಿರುವ ಸಾಲ ತೀರಿಸುವುದು ಅಸಾಧ್ಯವಾಗಲಿದೆ. ಇದು ಒಕ್ಕೂಟದ ಇತರ ರಾಷ್ಟ್ರಗಳ ಮೇಲೆ ಹೆಚ್ಚುವರಿ ಹೊರೆಯಾಗಲಿದೆ. ಹೀಗಾಗಿ ಈಗಾಗಲೇ ನೀಡಿರುವ ಸಾಲವನ್ನು ಗ್ರೀಸ್ ತೀರಿಸಲಿ. ನಂತರವಷ್ಟೇ ಮುಂದಿನ ಕಂತು ಬಿಡುಗಡೆ ಮಾಡುವುದರ ಬಗ್ಗೆ ಚಿಂತಿಸುವುದು ಒಳಿತು. ಹಾಗೊಂದು ವೇಳೆ ನಿರ್ಲಕ್ಷಿಸಿದಲ್ಲಿ ಐಎಂಎಫ್ ಈ ಒಪ್ಪಂದದಿಂದ ಹೊರಗುಳಿಯಲಿದೆ ಎಂದು ಎಚ್ಚರಿಸಿದೆ. ಹಣಕಾಸು ಸ್ಥಿತಿ ಸುಧಾರಿಸುವುದಕ್ಕಾಗಿ ಗ್ರೀಸ್ ತೆಗೆದುಕೊಂಡಿರುವ ಕ್ರಮಗಳು ಕೂಡ ಪೂರಕವಾದುದಲ್ಲ ಎಂದು ಅಭಿಪ್ರಾಯಪಟ್ಟಿದೆ.

ಚುನಾವಣಾ ಸಂಕಟ

ಹಲವು ರಾಷ್ಟ್ರಗಳಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳು ಕೂಡ ಗ್ರೀಸ್​ಗೆ ಕಂಟಕವಾಗಿಯೇ ಪರಿಣಮಿಸಿವೆ. ಜರ್ಮನಿಯಲ್ಲಿ ನಡೆಯಲಿರುವ ಚುನಾವಣೆಗಳಿಂದಾಗಿ ಅದಕ್ಕಾಗಿನ ಖರ್ಚು ವೆಚ್ಚಗಳಿಗೆ ನಗದು ವ್ಯಯ ಮಾಡಬೇಕಾಗಿರುತ್ತದೆ. ಹೀಗಿರುವಾಗ ಅದು ಗ್ರೀಸ್​ನತ್ತ ಮೃದು ಧೋರಣೆ ತಳೆಯುವ ಸಾಧ್ಯತೆ ಕಡಿಮೆ. ಫ್ರಾನ್ಸ್ ಹಾಲೆಂಡ್​ನ ಪರಿಸ್ಥಿತಿಯೂ ಇದೇ ಆಗಿದ್ದು, ಗ್ರೀಸ್ ಐರೋಪ್ಯ ಒಕ್ಕೂಟದಲ್ಲಿ ನೂತನ ಗೆಳೆಯರ ಸಹಾಯ ಕೇಳಬೇಕಾದ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಫೆ. 20ರಂದು ನಡೆಯಲಿರುವ ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಹಣಕಾಸು ಸಚಿವರ ಸಭೆ ಪ್ರಮುಖವಾದದ್ದಾಗಿದೆ. ಈ ವೇಳೆ ಒಕ್ಕೂಟದ ರಾಷ್ಟ್ರಗಳು ಗ್ರೀಸ್ ಬಗ್ಗೆ ಮೃದು ಧೋರಣೆ ತಳೆದು ಪೂರಕ ನಿರ್ಧಾರ ತೆಗೆದು ಕೊಂಡಲ್ಲಿ ಸಮಸ್ಯೆ ನಿವಾರಣೆಯಾಗಲಿದೆ. ಇಲ್ಲವಾದಲ್ಲಿ ಒಪ್ಪಂದದಂತೆ ಮೂರನೇ ಹಂತದ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಐಎಂಎಫ್ ಸ್ಪಷ್ಟವಾಗಿ ಹೇಳಿದೆ.

ಸಾಲಗಾರ ಗ್ರೀಸ್

2010ರ ಬಳಿಕ ಎರಡು ಬಾರಿ ಗ್ರೀಸ್ ಐರೋಪ್ಯ ಒಕ್ಕೂಟ ಮತ್ತು ಐಎಂಎಫ್​ನಿಂದ ಹಣಕಾಸು ನೆರವು ಪಡೆದುಕೊಂಡಿದೆ. ಇದರ ಒಟ್ಟು ಮೊತ್ತ 240 ಬಿಲಿಯನ್ ಯುರೋ(-ಠಿ;17.07 ಲಕ್ಷ ಕೋಟಿ). ಇಷ್ಟು ಪ್ರಮಾಣದಲ್ಲಿ ಸಾಲ ಪಡೆದು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡರೂ ಗ್ರೀಸ್ ಆರ್ಥಿಕ ಸ್ಥಿತಿ ಹೆಚ್ಚೇನು ಸುಧಾರಿಸಿಲ್ಲ. ಹೀಗಾಗಿ ಈಗಿರುವ ಬಡ್ಡಿ ಪಾವತಿ ಕೂಡ ಗ್ರೀಸ್​ಗೆ ಹೆಚ್ಚುವರಿ ಹೊರೆಯೇ ಆಗಿರಲಿದೆ. ಹೀಗಾಗಿ ಸದ್ಯ ಗ್ರೀಸ್​ನ ಸಾಲದ ಮೊತ್ತ 300 ಬಿಲಿಯನ್ ಯುರೋ (-ಠಿ;21.33 ಲಕ್ಷ ಕೋಟಿ)ವನ್ನೂ ದಾಟಿದೆ.(2015ರ ಅಂಕಿ ಅಂಶದಂತೆ) ಇದು ಗ್ರೀಸ್​ನ ಜಿಡಿಪಿಗಿಂತ ಶೇ.180 ಹೆಚ್ಚಾಗಿದೆ.

ಬ್ರೆಕ್ಸಿಟ್ ಬಗೆಗೊಂದಿಷ್ಟು: ಒಂದು ವರ್ಷದ ಹಿಂದೆ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ ವಿಚಾರ ಬ್ರೆಕ್ಸಿಟ್. ಐರೋಪ್ಯ ಒಕ್ಕೂಟದಿಂದ ಹೊರನಡೆಯಲು ಬ್ರಿಟನ್​ನ ಜನತೆಯೇ ಸಮ್ಮತಿ ಸೂಚಿಸಿದ್ದರು. ಇದಕ್ಕೆ ಪ್ರಧಾನಿ ಡೇವಿಡ್ ಕೆಮರೂನ್ ತಲೆದಂಡ ಕೊಡ ಬೇಕಾಗಿ ಬಂತು. ಇದು ಜಾಗತಿಕ ಮಾರುಕಟ್ಟೆ ಮೇಲೂ ಸಾಕಷ್ಟು ಪ್ರಭಾವ ಬೀರಿತು. ಬ್ರಿಟನ್ ಪೌಂಡ್ ಮೌಲ್ಯ ಗಣನೀಯವಾಗಿ ಇಳಿಕೆ ದಾಖಲಿಸಿತು.

ಆಂತರಿಕ ಸ್ಥಿತಿಯೂ ಅಯೋಮಯ

ಗ್ರೀಸ್ ಆಂತರಿಕ ಸ್ಥಿತಿಯೂ ಚೆನ್ನಾಗಿಲ್ಲ. ಆರ್ಥಿಕ ಸಂಕಷ್ಟದ ಪರಿಣಾಮ ನಿರುದ್ಯೋಗ ಹೆಚ್ಚಿದ್ದು, ಹೂಡಿಕೆ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಒಂದು ಅಂದಾಜಿನಂತೆ, ಈ ವರ್ಷಾಂತ್ಯದ ಹೊತ್ತಿಗೆ ಇಲ್ಲಿನ ನಿರುದ್ಯೋಗ ಪ್ರಮಾಣ ಶೇ.21 ಏರಿಕೆ ಕಾಣಲಿದೆ. ಹೂಡಿಕೆ ಪ್ರಮಾಣವೂ ಶೇ.60 ಇಳಿಕೆಯಾಗಲಿದೆ. ಜತೆಗೆ ದೇಶದ ಉತ್ಪಾದಕತೆಯೂ ಶೇ.25 ಇಳಿಕೆಯಾಗಿದೆ.

ಗ್ರೀಸ್ ಸಾಲ ತೀರಿಸುವುದೇ?

ಗ್ರೀಸ್ ಏಪ್ರಿಲ್ ಅಂತ್ಯದೊಳಗೆ 1.4 ಬಿಲಿಯನ್ ಯುರೋ (9,958 ಕೋಟಿ ರೂಪಾಯಿ)ಯನ್ನು ತೀರಿಸಬೇಕು. ನಂತರ ಜುಲೈನಲ್ಲಿ 4.1 ಬಿಲಿಯನ್ ಯುರೋ(29,164 ಕೋಟಿ ರೂಪಾಯಿ) ಸಾಲವನ್ನು ತೀರಿಸಬೇಕಿದೆ. ಕಳೆದೊಂದು ದಶಕದಿಂದ ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಗ್ರೀಸ್​ಗೆ ಇದನ್ನು ತೀರಿಸುವುದು ಸುಲಭವಲ್ಲ. ಸಾಲ ತೀರಿಸದೆ ಇರುವ ಸಾಧ್ಯತೆಗಳೇ ಹೆಚ್ಚು. ಇಂತಹ ಪರಿಸ್ಥಿತಿ ಎದುರಾದರೆ ಒಪ್ಪಂದದಂತೆ ಐರೋಪ್ಯ ಒಕ್ಕೂಟಗಳು ಹೆಚ್ಚಿನ ಹಣಕಾಸು ನೆರವನ್ನು ನೀಡಲಾರವು.

 

Leave a Reply

Your email address will not be published. Required fields are marked *