ಎಂ.ಎನ್.ರೆಡ್ಡಿ ಅರ್ಜಿ ತ್ವರಿತ ಇತ್ಯರ್ಥಕ್ಕೆ ಮನವಿ

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ನೀಲಮಣಿ ಎನ್.ರಾಜು ಅವರನ್ನು ನೇಮಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ವಾರದಲ್ಲಿ ಇತ್ಯರ್ಥ ಪಡಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗೆ (ಸಿಎಟಿ) ಹೈಕೋರ್ಟ್ ಮನವಿ ಮಾಡಿದೆ.

ನೀಲಮಣಿ ರಾಜು ನೇಮಕಾತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸಿಎಟಿಗೆ ನಿರ್ದೇಶಿಸಬೇಕು ಎಂದು ಕೋರಿ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಸೋಮವಾರ ಇತ್ಯರ್ಥಪಡಿಸಿದ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಎಂ.ಎನ್.ರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಿಎಟಿಗೆ ಮನವಿ ಮಾಡಿತು.

ಯುಪಿಎಸ್​ಸಿ ಸಮಿತಿ ಶಿಫಾರಸು ಮಾಡುವ ಹೆಸರನ್ನು ಡಿಜಿಪಿ ಹುದ್ದೆಗೆ ಪರಿಗಣಿಸಬೇಕು. ಈ ಕುರಿತಂತೆ ಸುಪ್ರೀಂ ಕೋರ್ಟ್​ನ ಸ್ಪಷ್ಟ ಆದೇಶವಿದ್ದರೂ ಉಲ್ಲಂಘಿಸಲಾಗಿದೆ. ಹೀಗಾಗಿ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಎಂ.ಎನ್ ರೆಡ್ಡಿ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *