ಎಂಬಿಪಿ ರಾಜೀನಾಮೆಗೆ ಬಿಜೆಪಿ ಪಟ್ಟು

ಹಾವೇರಿ: ಗೃಹ ಸಚಿವ ಎಂ.ಬಿ. ಪಾಟೀಲರು ಅಧಿಕಾರ ದುರ್ಬಳಕೆ ಮಾಡಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದು, ಕೂಡಲೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ರಾಜ್ಯ ಸಮ್ಮಿಶ್ರ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ಘೊಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಕಳೆದ ಕೆಲವು ತಿಂಗಳಿಂದಲೂ ಸಮ್ಮಿಶ್ರ ಸರ್ಕಾರ ಮಾಧ್ಯಮ ಸೇರಿ ರಾಜ್ಯದ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಮೂಲಕ ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅನೇಕ ಪ್ರಸಂಗಗಳಲ್ಲಿ ಬಿಜೆಪಿಯು ತನ್ನ ವಿರುದ್ಧ ನಡೆಯುತ್ತಿರುವ ಸೇಡಿನ ಕ್ರಮಗಳ ವಿರುದ್ಧ ದೂರುಗಳನ್ನು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ರಾಜ್ಯದಲ್ಲಿ ಮಾಧ್ಯಮ ಕ್ಷೇತ್ರಕ್ಕಂತೂ ಸಮ್ಮಿಶ್ರ ಸರ್ಕಾರ ಸಿಂಹ ಸ್ವಪ್ನದಂತಾಗಿದೆ. ಸರ್ಕಾರವನ್ನಾಗಲೀ ಮಂತ್ರಿಗಳನ್ನಾಗಲೀ ಟೀಕಿಸುವುದೇ ಅಪರಾಧ ಎನ್ನುವಂತಾಗಿದೆ. ಟೀಕಿಸಿದ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಭಯದ ವಾತಾವರಣ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಕರಾಳ ನೆನಪು ಮರುಕಳಿಸುವಂತಹ ಹಲವಾರು ಪ್ರಕರಣಗಳು ನಡೆಯುತ್ತಿವೆ ಎಂದರು.

ಹೇಮಂತ್​ಕುಮಾರ್ ಎಂಬುವವರು ಕೇವಲ ಗೃಹ ಸಚಿವ ಎಂ.ಬಿ. ಪಾಟೀಲರು ಬರೆದಿದ್ದಾರೆನ್ನಲಾದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕಾರಣಕ್ಕೆ ಬಂಧಿತರಾದರು. ಬಿಜೆಪಿ ಬಗ್ಗೆ ಒಲವು ಹೊಂದಿರುವುದೇ ಅಪರಾಧ ಎನ್ನುವಂತೆ ಈ ಪ್ರಕರಣದಲ್ಲಿ ಸ್ವತಃ ಗೃಹ ಸಚಿವರೇ ವಿಶೇಷ ಆಸಕ್ತಿ ತೋರಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿದರು. ಜಿ.ಪಂ. ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಡಾ. ಬಸರಾಜ ಕೇಲಗಾರ, ಮಂಜುನಾಥ ಓಲೇಕಾರ, ಶಿವರಾಜ ಹರಿಜನ, ನೀಲಪ್ಪ ಈಟೇರ, ತಾ.ಪಂ. ಸದಸ್ಯ ಸತೀಶ ಸಂದಿಮನಿ, ಮಾರುತಿ ಗೊರವರ, ಭಾರತಿ ಮಲ್ಲಿಕಾರ್ಜುನ, ಅಭಿದಾಬಿ ನಧಾಪ್, ಗದಿಗೆಮ್ಮ ದೇಸಾಯಿ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ನಿಂಗಪ್ಪ ಗೊಬ್ಬೆರ, ಚೋಳಪ್ಪ ಕಸವಾಳ, ಶಿವಾನಂದ ಮ್ಯಾಗೇರಿ, ನಂಜುಂಡೇಶ ಕಳ್ಳೇರ, ಎ.ಬಿ. ಪಾಟೀಲ, ಶಿವಯೋಗಿ ಹುಲಿಕಂತಿಮಠ, ಗಿರೀಶ ಶೆಟ್ಟರ, ಪರಮೇಶ್ವರ ಮೇಗಳಮನಿ, ಶಿವಲಿಂಗಪ್ಪ ತಲ್ಲೂರ, ಶಣ್ಮುಖ ಮಳ್ಳಿಮಠ, ಶಂಕರಣ್ಣ ಮಾತನವರ ಇತರರು ಪ್ರತಿಭಟನೆಯಲ್ಲಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವಂತೆ ಕರೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಬಿಜೆಪಿ ದೂರು ನೀಡಿದ್ದರೂ ಈವರೆಗೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಚಿತ್ರನಟರಾದ ಯಶ್, ದರ್ಶನ್ ಅವರಿಗೆ ನೇರವಾಗಿ ಬೆದರಿಕೆ ಹಾಕಿದ್ದರು. ಈ ಎರಡೂ ಪ್ರಕರಣಗಳಲ್ಲಿ ಜನರ ನಡುವೆ ದ್ವೇಷದ ವಾತಾವರಣ ಮೂಡಿಸಿ ಸಾಮಾಜಿಕ ಸಾಮರಸ್ಯ ಕೆಡಿಸುವಂತಹ ಗಂಭೀರ ಅಪಾಯವಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಪಕ್ಷಪಾತಿ ಧೋರಣೆ ತೋರುತ್ತಿದೆ.
| ಸಿ.ಎಂ. ಉದಾಸಿ, ಶಾಸಕ

Leave a Reply

Your email address will not be published. Required fields are marked *