ಎಂಪಿ ಎಲೆಕ್ಷನ್​ಗೆ ಸಜ್ಜಾಗಿ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಡೆಸಲು ಜಿಲ್ಲೆಯ ಅಧಿಕಾರಿಗಳು ಸಜ್ಜಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಅನಿರುದ್ಧ್ ಶ್ರವಣ್ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪೂರ್ವಭಾವಿ ಸಿದ್ಧತಾ ಮತ್ತು ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಘೊಷಣೆಯಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಜ್ಜಾಗಬೇಕು. ಒಂದು ವೇಳೆ ಇಲ್ಲದ ಸಬೂಬು ಹೇಳಿ ಚುನಾವಣಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೋಡಲ್ ಅಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸೇರಿ ಸಿಬ್ಬಂದಿ ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣಾ ಪೂರ್ವ ಸಿದ್ಧತೆಯ ಸಭೆ ಮತ್ತು ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೇ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದರು. ಫ್ಲೈಯಿಂಗ್ ಸ್ಕಾ್ವಡ್ ರಚನೆ, ಸ್ಟಾ್ಯಸ್ಟಿಕ್ ಸರ್ವೆಲೆನ್ಸ್ ತಂಡಗಳ ರಚನೆ, ಚೆಕ್ ಫೋಸ್ಟ್ ನಿರ್ವಣ, ಸಿಸಿ ಕ್ಯಾಮರಾ ಅಳವಡಿಕೆ, ಅಕ್ರಮ ಮದ್ಯ ಸಾಗಣೆಗೆ ಕಡಿವಾಣ ಸೇರಿ ಚುನಾವಣಾ ಕೆಲಸಗಳ ಬಗ್ಗೆ ರ್ಚಚಿಸಲಾಯಿತು. ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿರಿಸುವ ಹಾಗೂ ಮತ ಎಣಿಕೆ ನಿರ್ವಹಿಸುವ ಸ್ಟ್ರಾಂಗ್ ರೂಂ ಸ್ಥಳದ ಆಯ್ಕೆಯ ಪರಿಶೀಲನೆಗೆ ನಿರ್ಧಾರ ಕೈಗೊಳ್ಳಲಾಯಿತು.

ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ, ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಜಗದೀಶ್ ಮತ್ತಿತರರು ಇದ್ದರು.