ಎಂಎಲ್ಸಿ ವಿಜಯಸಿಂಗ್ ವಿರುದ್ಧ ಹಲ್ಲೆ ಯತ್ನ ಆರೋಪ, ಎಸ್ಪಿಗೆ ದೂರು

ಬೀದರ್: ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲಿ ಬೀದರ್ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಸಿಎಂ ದಿ.ಧರ್ಮಸಿಂಗ್ ಪುತ್ರ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ತಮ್ಮ ಮೇಲೆ ಹಲ್ಲೆ ಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಔರಾದ್ ಎಸ್ಸಿ ಮೀಸಲು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ್ ಶುಕ್ರವಾರ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದಾರೆ.
ವಿಜಯಕುಮಾರ ಕೌಡ್ಯಾಳ್ ಹಾಗೂ ವಿಜಯಸಿಂಗ್ ಔರಾದ್ ಕ್ಷೇತ್ರ ಕೇಂದ್ರೀಕರಿಸಿಕೊಂಡ ಕಾಂಗ್ರೆಸ್ ಸಕ್ರಿಯ ಮುಖಂಡರು. ವಿವಿಧ ಕಾರಣಕ್ಕೆ ಕೆಲವು ದಿನಗಳಿಂದ ಇಬ್ಬರ ನಡುವೆ ಉಂಟಾಗಿರುವ ರಾಜಕೀಯ ಮನಸ್ತಾಪ, ಶೀತಲ ಸಮರ ಇದೀಗ ಬಹಿರಂಗವಾಗಿ ಪೊಲೀಸರಿಗೆ ದೂರು ನೀಡುವ ಹಂತಕ್ಕೆ ತಲುಪಿದೆ. ಇದು ಜಿಲ್ಲೆ ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದೆ.
ಶುಕ್ರವಾರ ರಾತ್ರಿ ವಿಜಯಕುಮಾರ ಎಸ್ಪಿ ಕಚೇರಿಗೆ ಭೇಟಿ ನೀಡಿ ಎರಡು ಪುಟದ ಲಿಖಿತ ದೂರು ಸಲ್ಲಿಸಿದ್ದಾರೆ. ದಲಿತ ಹಾಗೂ ಅಂಗವಿಕಲನಾದ ನನ್ನ ಮೇಲೆ ವಿಜಯಸಿಂಗ್ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ನನಗೆ ಅವರಿಂದ ಪ್ರಾಣ ಭಯವಿದೆ ಎಂಬ ಗಂಭೀರ ಆರೋಪ ಹೊರಿಸಿದ್ದಾರೆ. ವಿಷಯ ಗಂಭೀರವಾಗಿ ಪರಿಗಣಿಸಿ ವಿಜಯಸಿಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನನಗೆ ಅಂಗರಕ್ಷಕರನ್ನು ಕಲ್ಪಿಸಬೇಕು. ಔರಾದ್ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ನನ್ನ ಜತೆ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ವಿಜಯಸಿಂಗ್ ಮತ್ತವರ ಬೆಂಬಲಿಗರೇ ಹೊಣೆ ಎಂದು ಹೇಳಿದ್ದಾರೆ.
ಮೇ 14ರಂದು ಬೀದರ್ನ ಸಪ್ನಾ ಕಾಂಟಿನೆಂಟಲ್ ಹೋಟೆಲ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶೈಲಜನಾಥ ಸಾಕೆ, ಕೆಪಿಸಿಸಿ ಕಾರ್ಯದರ್ಶಿ ಓಬೇದುಲ್ಲಾ ಷರೀಫ್, ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಸಮ್ಮುಖದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಸಭೆ ಕರೆಯಲಾಗಿತ್ತು. ಇಲ್ಲಿ ಔರಾದ್ ಪಟ್ಟಣ ಪಂಚಾಯಿತಿಗೆ ಸಮರ್ಥ, ಪಕ್ಷನಿಷ್ಠ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಬಿ ಫಾರ್ಮ್​ ವಿತರಿಸಲು ಕೋರಿರುವೆ. ಕ್ಷೇತ್ರದ ಕಾಂಗ್ರೆಸ್ ಪರಾಜಿತ (64532 ಮತ ಪಡೆದ ) ಅಭ್ಯರ್ಥಿ ಆಗಿರುವ ಕಾರಣ, ಪಕ್ಷದ ನಿಯಮದಂತೆ ಚುನಾವಣಾ ಜವಾಬ್ದಾರಿ ವಹಿಸುವ ಹಾಗೂ ನನ್ನ ಸಮ್ಮುಖದಲ್ಲೇ ಅಭ್ಯರ್ಥಿಗಳಿಗೆ ಬಿ ಫಾರ್ಮ್​ ಹಂಚಬೇಕೆಂದು ವಿನಂತಿ ಮಾಡಿದ್ದೆ. ಇದರಿಂದ ಕೆರಳಿದ ವಿಜಯಸಿಂಗ್ ವರಿಷ್ಠರ ಸಮ್ಮುಖವೇ ಹೊಡೆಯಲು ಬಂದು ಜೀವ ಭಯವೊಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು, ಎಲ್ಲ ಮಗ್ಗುಲಗಳಿಂದಲೂ ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ. ಪಕ್ಷದ ಕೆಲ ಮುಖಂಡರು ಈ ಸಮಸ್ಯೆಗೆ ಪೊಲೀಸ್ ಕಟ್ಟೆ ಬದಲು ಪಕ್ಷದೊಳಗೆಡೆಯೇ ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇನ್ನು ಪ್ರಕರಣದಲ್ಲಿ ಯಾವ ಹೆಜ್ಜೆ ಇರಿಸಬೇಕೆಂಬುದು ಪೊಲೀಸ್ ಅಧಿಕಾರಿಗಳ ತಲೆಬಿಸಿ ಮಾಡಿದೆ.

ಕೋಣೆಗೆ ಬಂದು ಬೆಂಬಲಿಗರಿಂದ ಧಮ್ಕಿ: ಔರಾದ್ ಪಟ್ಟಣ ಪಂಚಾಯಿತಿಯ 20 ಬಿ ಫಾರ್ಮ್​ ಕಳೆದ 15ರಂದು ಎಲ್ಲರ ಸಮಕ್ಷಮ ಹಂಚಬೇಕಿತ್ತು. ಕೆಪಿಸಿಸಿ ಕಾರ್ಯದರ್ಶಿ ಓಬೇದುಲ್ಲಾ ಅಂದು ರಾತ್ರಿ 11ರವರೆಗೆ ನನಗೆ ಕಾಯಿಸಿದ ಬಳಿಕ ಮರುದಿನ ಬೆಳಗ್ಗೆ 7.30ಕ್ಕೆ ಫಾರ್ಮ್​ ಕೊಡುವೆ ಎಂದು ಹೇಳಿ ಕಳಿಸಿದರು. ನಾನು ಹೋಟೆಲ್ ಮಯೂರಾ(ಕೋಣೆ 102)ಕ್ಕೆ ತೆರಳಿ ಮಲಗಿದ್ದೆ. ಬೆಳಗ್ಗಿನ ಜಾವ 1.30ರ ಹೊತ್ತಿಗೆ ವಿಜಯಸಿಂಗ್ ಬೆಂಬಲಿಗರು ಕೋಣೆಗೆ ಬಂದು ಬಿ ಫಾಮರ್್ ನಮಗೆ ಕೊಡಬೇಕೆಂದು ದಬಾಯಿಸಿದ್ದಾರೆ. ಬೆಳಗ್ಗೆ 7.30ಕ್ಕೆ ಪುನಃ ನಾನು ಬಿ ಫಾಮರ್್ ಕೇಳಲು ಓಬೇದುಲ್ಲಾ ಬಳಿ ಹೋದಾಗ, ರಾತ್ರಿಯೇ 15 ಬಿ ಫಾರ್ಮ್​ ವಿಜಯಸಿಂಗ್ ಬೆಂಬಲಿಗರು ಒಯ್ದಿದ್ದು ಗೊತ್ತಾಗಿದೆ ಎಂದು ವಿಜಯಕುಮಾರ ಕೌಡ್ಯಾಳ್ ಹೇಳಿದ್ದಾರೆ.

ದಲಿತರ ಹಕ್ಕು ಕಸಿಯೋ ಕೆಲಸ: ಎಂಎಲ್ಸಿ ವಿಜಯಸಿಂಗ್ ದಲಿತರ ಹಕ್ಕು ಕಸಿದು ಈ ಸಮುದಾಯದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ವಿಜಯಕುಮಾರ ದೂರಿದ್ದಾರೆ. ವಿಜಯಸಿಂಗ್ ಜಿಲ್ಲೆಗೆ ಎಂಎಲ್ಸಿ. ಆರು ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಇವರಿಗಿವೆ. ಆದರೆ ಬೇರ್ಯಾವ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡದೆ, ಕೇವಲ ಪರಿಶಿಷ್ಟ ಜಾತಿ ಮೀಸಲಿರುವ ಔರಾದ್ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಇದು ದಲಿತರ ಹಕ್ಕು ಕಸಿಯೋ ಕೆಲಸ ಮಾಡುತ್ತಿರುವುದು ಸ್ಪಷ್ಟ ಎಂದು ಹೇಳಿದ್ದಾರೆ. ವಿಜಯಸಿಂಗ್ ನನ್ನೊಂದಿಗೆ ಈ ಹಿಂದೆಯೂ ಕಿರಿಕಿರಿ ಮಾಡಿದ್ದಾರೆ. ಪದೇಪದೆ ಮಾಡುತ್ತಿರುವ ಈ ಪ್ರವೃತ್ತಿಯನ್ನು ದಲಿತ ಸಮಾಜ ಸಹಿಸಿಕೊಳ್ಳುವುದಿಲ್ಲ. ಇವರ ಈ ಧೋರಣೆಯಿಂದ ನಾನು ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ.

ಏಕೆ ಬಂತು ಮನಸ್ತಾಪ?: ವಿಜಯಸಿಂಗ್ ವಿರುದ್ಧ ಕೌಡ್ಯಾಳ್ ಎಸ್ಪಿಗೆ ದೂರು ನೀಡುವಷ್ಟು ಮನಸ್ತಾಪಕ್ಕೆ ಕಾರಣ ಏನಿರಬಹುದು ಎಂಬ ಚರ್ಚೆ ಜೋರಾಗಿದೆ. ಕಳೆದ ವಿಧಾನಸಭೆ ಚುನಾವಣೆ ಸಮಯದ ಬೆಳವಣಿಗೆಯೇ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಔರಾದ್ ಕ್ಷೇತ್ರದ ಕಾಂಗ್ರೆಸ್ ಮೇಲೆ ಸಿಂಗ್ ಹಿಡಿತವಿದೆ. ವಿಧಾನಸಭೆ ಚುನಾವಣೆಯಲ್ಲಿ ಭೀಮಸೇನರಾವ ಸಿಂಧೆ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ ಕೊನೇ ಘಳಿಗೆಯಲ್ಲಿ ವರಿಷ್ಠರು ಕೌಡ್ಯಾಳ್ ಅವರಿಗೆ ಟಿಕೆಟ್ ಕೊಟ್ಟರು. ಆಗಿನಿಂದಲೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಅದು ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲಿ ಬಯಲಿಗೆ ಬಂದಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *