ಋಕ್ಕುಗಳ ಕರ್ತೃ ಗಾರ್ಗಿ

ಕ್ರಿ. ಪೂ. 7ನೆಯ ಶತಮಾನದಲ್ಲಿ ಜೀವಿಸಿದ್ದಳೆನ್ನಲಾದ ಗಾರ್ಗಿ ವಾಚಕ್ನವಿ ಒಬ್ಬ ಪ್ರವಾದಿ, ಬ್ರಹ್ಮವಾದಿನಿ, ಪ್ರಕಾಂಡ ಪಂಡಿತೆ, ಜ್ಞಾನಮೇರು. ಇವಳು ವಚಕ್ನು ಎಂಬ ಋಷಿಯ ಮಗಳು. ಸೃಷ್ಟಿಗೆ ಸಂಬಂಧಿಸಿದಂತೆ ಅನೇಕ ಋಕ್ಕುಗಳನ್ನು ರಚಿಸಿದ್ದಾಳೆ. ಜ್ಞಾನದ ಉತ್ತುಂಗತೆಯಲ್ಲಿ ಮೆರೆಯುತ್ತಿದ್ದರೂ ಯಾವುದೇ ಹಮ್ಮು-ಬಿಮ್ಮುಗಳಿಲ್ಲದ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದವಳು ಗಾರ್ಗಿ. ಈಕೆ ಮಹಾ ಪಂಡಿತೋತ್ತಮರೂ ಬ್ರಹ್ಮಜ್ಞಾನಿಯೂ ಆದ ಯಾಜ್ಞವಲ್ಕ್ಯರನ್ನೇ ವಾದದಲ್ಲಿ ಸೋಲಿಸುವ ಪ್ರಸಂಗವೊಂದು ನಡೆಯುತ್ತದೆ. ಈ ವಿಚಾರ ಗಾರ್ಗಿಯ ಆತ್ಮವಿಶ್ವಾಸ ಮತ್ತು ಪಾಂಡಿತ್ಯಕ್ಕೆ ಕಿರೀಟಪ್ರಾಯವಾದ ಸನ್ನಿವೇಶ. ವಿದೇಹದ ರಾಜ ಜನಕ ಮಹಾರಾಜ ಅಪಾರ ಜ್ಞಾನಿ. ಪ್ರತಿವರ್ಷ ಅರಮನೆಯಲ್ಲಿ ಬ್ರಹ್ಮ ಯಜ್ಞ ನಡೆಸುತ್ತಿದ್ದ. ಆ ಸಂದರ್ಭದಲ್ಲಿ ಋಷಿಮುನಿಗಳನ್ನು ಆಹ್ವಾನಿಸಿ ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ ವಿಚಾರಸಂಕಿರಣವನ್ನೂ ಏರ್ಪಡಿಸುತ್ತಿದ್ದ. ಒಂದು ವರ್ಷ ಇಂಥ ಸಂವಾದ ಶಿಬಿರಕ್ಕೆ ಮಹಾ ಮಹಾ ಋಷಿಗಳೊಂದಿಗೆ ಗಾರ್ಗಿಗೂ ಆಮಂತ್ರಣ ಹೋಯ್ತು. ಆ ಪಂಡಿತ ಸಭೆಯಲ್ಲಿ ಅವಳೂ ಒಬ್ಬ ದ್ರಷ್ಟ್ರಾರಳಾಗಿ ಮಂಡಿತಳಾಗುತ್ತಾಳೆ. ಆ ಸಲದ ವೈಚಾರಿಕ ಸಭೆ ನಡೆಯುವ ಮುನ್ನ ರಾಜ ಒಂದು ಪಂಥಾಹ್ವಾನ ತಿಳಿಸುತ್ತಾನೆ. ‘ತತ್ವಜ್ಞಾನದಲ್ಲಿ ಅತ್ಯಂತ ಶ್ರೇಷ್ಠರದವರು ಸಾವಿರ ಹಸುಗಳು ಮತ್ತು ಸುವರ್ಣ ನಾಣ್ಯಗಳನ್ನು ತೆಗೆದುಕೊಂಡು ಹೋಗಬಹುದು. ಆದರೆ ಹಾಗೆ ತೆಗೆದುಕೊಂಡು ಹೋಗುವವರು ಸಭೆಯಲ್ಲಿ ಉಳಿದವರು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟು ಸಭಾಸದರನ್ನು ತೃಪ್ತಿಪಡಿಸಿ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಬೇಕು’ ಎಂದು. ಇದು ಕೇಳಲು ಸುಲಭವಾದರೂ ಆಚರಿಸಲು ಕಷ್ಟದ ವಿಚಾರ. ಯಾರು ಶ್ರೇಷ್ಠರೆಂಬುದನ್ನು ಅವರವರೇ ನಿರ್ಧರಿಸಿ ಉಳಿದವರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ನೀಡಬೇಕು. ಹೀಗಾಗಿ ಸಭೆಯಲ್ಲಿ ಯಾರಿಗೂ ತಾವು ಶ್ರೇಷ್ಠರೆಂದು ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ಯಾಜ್ಞವಲ್ಕ್ಯರು ತಮ್ಮ ಶಿಷ್ಯರನ್ನು ಕರೆದು ಹಸುಗಳನ್ನು ಸಾಗಿಸಿಕೊಂಡು ಹೋಗಲು ಹೇಳುತ್ತಾರೆ.

ಸವಾಲಿನಂತೆ ಯಾಜ್ಞವಲ್ಕ್ಯರು ಸಭಾಸದರ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ನೀಡಬೇಕು. ಸಭಾಸದರು ಅನೇಕ ಬಗೆಯ ಪ್ರಶ್ನೆಗಳನ್ನು ಕೇಳಿ ಅವರ ಉತ್ತರದಿಂದ ಸಂತುಷ್ಟರಾಗುತ್ತಾರೆ. ಆ ಸಭೆಯಲ್ಲಿ ಗಾರ್ಗಿಯೂ ಇದ್ದಳು. ಅವಳು ಎದ್ದುನಿಂತು ಹೇಳಿದಳು: ‘ಋಷಿವರ, ಶಾಸ್ತ್ರಾರ್ಥದಲ್ಲಿ ನೀವು ಎಲ್ಲರಿಗಿಂತ ಮಿಗಿಲೆಂದು ಭಾವಿಸಿದ್ದೀರಿ. ಮತ್ತು ಆ ಬಲದಿಂದಲೇ ಜನಕ ಮಹಾರಾಜ ನೀಡಿದ ಸಾವಿರ ಗೋವುಗಳನ್ನು ಕರೆದೊಯ್ಯಲು ಶಿಷ್ಯರಿಗೆ ಆದೇಶ ನೀಡಿದ್ದೀರಿ. ಆದರೆ ಅದು ನಿಮಗೆ ಗೋವುಗಳ ಬಗ್ಗೆ ಉಂಟಾದ ವ್ಯಾಮೋಹವೇ ಹೊರತು ನೀವು ಸರ್ವಶ್ರೇಷ್ಠರೆಂಬ ಕಾರಣದಿಂದಲ್ಲ. ಏಕೆಂದರೆ ಆ ಯೋಗ್ಯತೆ ನಿಮಗಿದೆಯೆಂದು ನನಗನ್ನಿಸುವುದಿಲ್ಲ. ಈ ಸಭೆಯಲ್ಲಿ ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಅವುಗಳಿಗೆ ಸಮರ್ಪಕ ಉತ್ತರ ನೀಡಿದರೆ ನೀವು ನಿಶ್ಚಿತವಾಗಿಯೂ ಈ ಬಹುಮಾನಕ್ಕೆ ಯೋಗ್ಯರೆಂದು ನಾನು ಒಪ್ಪುತ್ತೇನೆ’ ಇಡೀ ಸಭೆ ಬೆರಗಾಗುತ್ತದೆ. ಓರ್ವ ಮಹಿಳೆ ತುಂಬಿದ ಸಭೆಯಲ್ಲಿ ಯಾಜ್ಞವಲ್ಕ್ಯರಂಥ ಮಹಾ ಪಂಡಿತರಿಗೆ ಕೇಳುವ ಪ್ರಶ್ನೆಯೇ ಇದು?

| ಡಾ. ಪ್ರಮೀಳಾ ಮಾಧವ್​