ಉ.ಕ. ಅಭಿವೃದ್ಧಿಗೆ ಗಮನ ಹರಿಸಿ

ಹುಬ್ಬಳ್ಳಿ: ತಲಾ ಆದಾಯ, ಕೈಗಾರಿಕಾ ಬೆಳವಣಿಗೆ, ರಸ್ತೆ, ಬಂದರು ಅಭಿವೃದ್ಧಿ ಸೇರಿ ಮೂಲ ಸೌಲಭ್ಯಗಳ ವಿಷಯದಲ್ಲಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಬಹಳ ಹಿಂದೆ ಉಳಿದಿದೆ. ಇನ್ನಾದರೂ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ ಸಮತೋಲಿತ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಖ್ಯಾತ ಲೆಕ್ಕ ಪರಿಶೋಧಕ ಡಾ. ಎನ್.ಎ. ಚರಂತಿಮಠ ಹೇಳಿದರು.

ಹುಬ್ಬಳ್ಳಿ ಚಿಂತನ ಮಂಥನ ವೇದಿಕೆಯಿಂದ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ‘ಉತ್ತರ ಕರ್ನಾಟಕ ಅಭಿವೃದ್ಧಿಯ ಸತ್ಯ?’ ಕುರಿತ ವೈಚಾರಿಕ ವಿಶ್ಲೇಷಣೆ ಹಾಗೂ ಸಂವಾದ ಗೋಷ್ಠಿಯಲ್ಲಿ ಉ.ಕ. ಆರ್ಥಿಕ ಅಭಿವೃದ್ಧಿಯ ತುಲನಾತ್ಮಕ ನೋಟ ವಿಷಯವಾಗಿ ಅಂಕಿ ಅಂಶ ಸಮೇತ ವಿವರಣೆ ನೀಡಿದರು.

ಬಂಡವಾಳ ಹೂಡಿಕೆ, ವಾಸೋಪಯೋಗ್ಯ ಸೇರಿ ಎಲ್ಲದಕ್ಕೂ ಬೆಂಗಳೂರು ದೇಶದ ಹೆಮ್ಮೆಯ ನಗರವಾಗಿದೆ. ಆ ಸ್ಥಾನವನ್ನು ಹುಬ್ಬಳ್ಳಿ- ಧಾರವಾಡಕ್ಕೂ ನೀಡುವ ಬಗ್ಗೆ ಜನಪ್ರತಿನಿಧಿಗಳು ಚಿಂತಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಮನೋಜ ಪಾಟೀಲ ಮಾತನಾಡಿ, ಸಂವಾದದಲ್ಲಿ ಮೂಡಿ ಬರುವ ಎಲ್ಲ ತಜ್ಞರ ವಿಚಾರ, ಚಿಂತನೆಗಳ ಸಾರವನ್ನು ಸಂಗ್ರಹಿಸಿ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಈ ಭಾಗದ ಎಲ್ಲ ಜನಪ್ರತಿನಿಧಿಗಳಿಗೆ ತಲುಪಿಸಲಾಗುವುದು ಎಂದರು.

ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ಈ ಭಾಗದ ನಾಗರಿಕ ಸೌಲಭ್ಯಗಳ ಕುರಿತು, ಮೂಲ ಸೌಕರ್ಯಗಳ ಅಭಿವೃದ್ಧಿಯ ತುಲನಾತ್ಮಕ ನೋಟ ಕುರಿತು ಹಿರಿಯ ಉದ್ಯಮಿ ಮಹಾದೇವ ಕರಮರಿ ಮಾತನಾಡಿದರು. ಪ್ರೊ. ಸಿ.ಸಿ. ದೀಕ್ಷಿತ, ರವಿ ನಾಯಕ, ಇತರರು ಇದ್ದರು. ಮಧುರಾ ದೀಕ್ಷಿತ ಪ್ರಾರ್ಥನೆ ಹಾಡಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಸಿದ್ದು ಮೊಗಲಿಶೆಟ್ಟರ್ ಸ್ವಾಗತಿಸಿದರು.

ಮುಖ್ಯಮಂತ್ರಿಯಾದವರು ಸಮಸ್ತ ಕರ್ನಾಟಕಕ್ಕೆ ಸಂಬಂಧಿಸಿದವರು. ಆದರೆ, ಕುಮಾರಸ್ವಾಮಿ ಅವರು ಸಿಎಂ ಆದ ಕೆಲವೇ ದಿನದಲ್ಲಿ ಉತ್ತರ ಕರ್ನಾಟಕದವರು ತಮಗೆ ಮತ ಹಾಕಿಲ್ಲ ಎಂದು ಹೇಳುವ ಮೂಲಕ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ.

| ಮನೋಜ ಪಾಟೀಲ

ಎಸ್​ಎಪಿ ತಿದ್ದುಪಡಿಗೆ ಶೆಟ್ಟರ್ ಆಕ್ಷೇಪ: ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸಮಸ್ಯೆ ಉದ್ಭವಿಸುವ ಮೊದಲೇ ಕಬ್ಬು ಬೆಳೆಗಾರರನ್ನು ಕರೆದು ಮಾತನಾಡಿ ಪರಿಹಾರ ನೀಡಲಾಗಿತ್ತು. ಆದರೆ, ಈಗಿನ ಸರ್ಕಾರ ಬಿಜೆಪಿ ಜಾರಿಗೆ ತಂದ ಎಸ್​ಎಪಿ ಕಾನೂನನ್ನು ತಿದ್ದುಪಡಿ ಮಾಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸಿದ್ದಲ್ಲದೆ ಸಮಸ್ಯೆ ತನಗೆ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.

‘ಉತ್ತರ ಕರ್ನಾಟಕ ಅಭಿವೃದ್ಧಿ ಸತ್ಯ’? ಕುರಿತು ವೈಚಾರಿಕ ವಿಶ್ಲೇಷಣೆ ಹಾಗೂ ಸಂವಾದ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ತಂದಿದ್ದ ಎಸ್​ಎಪಿ ಕಾನೂನು ತಿದ್ದುಪಡಿ ಮಾಡಿದ್ದರಿಂದ ಈಗ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲದಂತಾಗಿದೆ. ಮಾಲೀಕರು ಹಾಗೂ ರೈತರ ಮಧ್ಯೆ ಸರ್ಕಾರ ಬರುವುದಿಲ್ಲ ಎಂದೂ ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲೇ ಸಕ್ಕರೆ ಕಾರ್ಖಾನೆಗಳು ಹೆಚ್ಚಿವೆ. ಹಾಗಾಗಿಯೇ ಕುಮಾರಸ್ವಾಮಿ ಅವರಿಂದ ಈ ನಿರ್ಲಕ್ಷ್ಯದ ಹೇಳಿಕೆ ಬರುತ್ತಿವೆ ಎಂದು ಆರೋಪಿಸಿದರು.

ಹುಬ್ಬಳ್ಳಿಗೆ ಮಂಜೂರಾಗಿದ್ದ ನೈಋತ್ಯ ರೈಲ್ವೆ ವಲಯವನ್ನು ದೇವೇಗೌಡರು ಬೆಂಗಳೂರಿಗೆ ಸ್ಥಳಾಂತರಿಸಿದ್ದರು. ಆಗ ಮತ್ತೆ ಹೋರಾಟ ಮಾಡಬೇಕಾಯಿತು. ಅಂದಿನ ಸಂಸದರಾದ ವಿಜಯ ಸಂಕೇಶ್ವರ, ಅನಂತಕುಮಾರ, ನಾವು ಸೇರಿ ಈ ಭಾಗದ ನಾಯಕರು ದೆಹಲಿ ಮಟ್ಟದಲ್ಲಿ ಹೋರಾಟ ಮಾಡಿ ವಾಜಪೇಯಿ ಅವರು ಪ್ರಧಾನಿ ಇದ್ದಾಗ ಮತ್ತೆ ಹುಬ್ಬಳ್ಳಿಗೆ ತರಲುವಲ್ಲಿ ಯಶಸ್ವಿಯಾದೆವು. ಹೀಗೆ ಪ್ರತಿಯೊಂದನ್ನು ಹೋರಾಟ ಮಾಡಿಯೇ ಪಡೆಯಬೇಕಾದ ಅನಿವಾರ್ಯತೆ ಉತ್ತರ ಕರ್ನಾಟಕ ಜನರಿಗೆ ಬಂದಿದೆ ಎಂದು ಶೆಟ್ಟರ್ ಹೇಳಿದರು.