ಉಷ್ಣತೆ ಕಾಪಾಡುವ ಈರುಳ್ಳಿ

ಚಳಿಗಾಲದಲ್ಲಿ ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಆಹಾರಪದಾರ್ಥಗಳನ್ನು ಸೇವಿಸುವುದರಿಂದ ತಾಪಮಾನವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಚಳಿಗಾಲದಲ್ಲಿ ಶುಷ್ಕ ತ್ವಚೆ, ಬಿರುಕು, ಸೆಳೆತ, ನೋವು, ತಂಡಿ, ಶೀತ, ಗಂಟಲಿಗೆ ಸಂಬಂಧಿತ ತೊಂದರೆಗಳು ಕಾಡುವುದು ಸಾಮಾನ್ಯ. ಈ ಎಲ್ಲ ತೊಂದರೆಗಳನ್ನು ನಿರ್ವಹಿಸುವ ಆಹಾರ ಪದಾರ್ಥಗಳು ನಮ್ಮ ಆಹಾರ ಪದ್ಧತಿಯಲ್ಲಿರುವುದು ಬಹಳ ಮುಖ್ಯ. ಇದು ಈ ಕಾಲದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ.

ದೇಹದ ಉಷ್ಣತೆಯನ್ನು ಹೆಚ್ಚಿಸುವ ಹಾಗೂ ಆರೋಗ್ಯವನ್ನು ನಿರ್ವಹಣೆ ಮಾಡುವ ಆಹಾರ ಪದಾರ್ಥಗಳಲ್ಲಿ ಈರುಳ್ಳಿಯೂ ಒಂದು. ಈರುಳ್ಳಿಯನ್ನು ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಬಳಸುವುದರಿಂದ ಚಳಿಗಾಲದಲ್ಲಿ ಕಾಡಬಹುದಾದ ತೊಂದರೆಗಳ ನಿರ್ವಹಣೆ ಮಾಡಬಹುದಾಗಿದೆ. ಚೈನೀಸ್ ಔಷಧಿಗಳ ತಯಾರಿಕೆಯಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆವರುವುದನ್ನು ಹೆಚ್ಚಿಸಿ ತನ್ಮೂಲಕ ದೇಹದಲ್ಲಿನ ಶೀತವನ್ನು, ಕಶ್ಮಲವನ್ನು ಹೊರಹಾಕಿ, ಶೀತದಿಂದ ಕಾಡಬಹುದಾದ ತೊಂದರೆಗಳನ್ನು ನಿಭಾಯಿಸಲು ಅನುಕೂಲ ಮಾಡಿಕೊಡುತ್ತದೆ. ದೇಹದ ಮೇಲ್ಪದರದಲ್ಲಿ ಶಕ್ತಿಯನ್ನು ಪ್ರಚುರ ಪಡಿಸಿ ದೇಹವನ್ನು ಬೆಚ್ಚಗಿರುವಂತೆ ಕಾಯುತ್ತದೆ.

ಈರುಳ್ಳಿಯು ಸಂದು ನೋವು ನಿವಾರಣಾ ಗುಣವನ್ನು ಹೊಂದಿದೆ. ಸಾಸಿವೆ ಎಣ್ಣೆಯ ಜೊತೆ ಈರುಳ್ಳಿಯ

ಪೇಸ್ಟ್​ನ್ನು ಸೇರಿಸಿ ನೋವಿರುವ ಭಾಗಗಳಲ್ಲಿ ಹಚ್ಚಿಕೊಳ್ಳುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಈರುಳ್ಳಿಯ ವಾಸನೆಯನ್ನು ಮೂಗಿನ ಮೂಲಕ ಒಳಕ್ಕೆಳೆದುಕೊಳ್ಳುವುದರಿಂದ ಸಾಮಾನ್ಯ ನೆಗಡಿಯು ಕಡಿಮೆಯಾಗಲು ಸಹಾಯವಾಗುತ್ತದೆ. ಹಸಿ ಈರುಳ್ಳಿಯನ್ನು ಅಗಿದು ತಿನ್ನುವುದು ಹಲ್ಲಿನ ಆರೋಗ್ಯ ಹಾಗೂ ವಸಡಿನ ಆರೋಗ್ಯಕ್ಕೆ ಉತ್ತಮ. ಊಟದ ಜೊತೆ ಸೇವಿಸಬಹುದು. ಅಲ್ಲದೇ ಅನೇಕ ಉತ್ತಮ ಪೋಷಕಾಂಶವನ್ನು ಈರುಳ್ಳಿಯು ಹೊಂದಿರುವುದರಿಂದ ಸಂಪೂರ್ಣ ಆರೋಗ್ಯ ನಿರ್ವಹಣೆಗೆ ಸಹಕಾರಿಯಾಗುತ್ತದೆ.

Leave a Reply

Your email address will not be published. Required fields are marked *