ಉಳ್ಳಾವಳ್ಳಿ ಗ್ರಾಮದಲ್ಲಿ ಕಂಬೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರಸ್ವಾಮಿ ಹಬ್ಬದ ಪ್ರಯುಕ್ತ ಕಂಬೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಬಾಳೆಕಂಬ ತರುವ ಮೂಲಕ ಹಬ್ಬ ಹಾಗೂ ರಂಗಕುಣಿತಕ್ಕೆ ಚಾಲನೆ ದೊರೆತಿದ್ದು, ಮಾ.31ರವರೆಗೆ ಪ್ರತಿನಿತ್ಯ ಶ್ರೀ ಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ನೆರವೇರಲಿದೆ. ಪ್ರತಿ ದಿನ ರಾತ್ರಿ ರಂಗದ ಬೀದಿಯಲ್ಲಿ ರಂಗಕುಣಿತ, ಹಾಸ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಸೋಮವಾರ ಮುಂಜಾನೆಯಿಂದಲೇ ಶ್ರೀ ಭೈರವೇಶ್ವರನಿಗೆ ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ ಹಾಗೂ ಪುಷ್ಪಾಲಂಕಾರ ನಡೆಯಿತು. ಭೈರವೇಶ್ವರಸ್ವಾಮಿ ಸನ್ನಿಧಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ರಂಗಕುಣಿತ: ಹಬ್ಬದ ಆಚರಣೆಯಲ್ಲಿ ರಂಗಕುಣಿತವೇ ವಿಶೇಷ. ಉತ್ಸವದಲ್ಲಿ ತರಲಾದ ಬಾಳೆಕಂಬವನ್ನು ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿದ ಬಳಿಕ ರಂಗಕುಣಿತಕ್ಕೆ ಚಾಲನೆ ನೀಡಲಾಯಿತು.