ಉಳ್ಳಾಗಡ್ಡಿ, ಮೆಣಸಿನಕಾಯಿಗೆ ರೋಗಬಾಧೆ

ನರೇಗಲ್ಲ: ಹೋಬಳಿ ವ್ಯಾಪ್ತಿಯಲ್ಲಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆ ಹೆಚ್ಚಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಉಳ್ಳಾಗಡ್ಡಿ ಬೆಳೆಗೆ ಥ್ರಿಪ್ಸ್ ನುಸಿ, ಸಸಿ ಕತ್ತರಿಸುವ ಹುಳು, ಮಜ್ಜಿಗೆ ರೋಗ ಹಾಗೂ ಕೀಟ ಬಾಧೆ ಕಾಣಿಸಿಕೊಂಡಿದ್ದು ರೈತ ಸಮುದಾಯದಲ್ಲಿ ಆತಂಕ ಮೂಡಿದೆ. ಕೀಟಗಳು ಉಳ್ಳಾಗಡ್ಡಿ ಬೆಳೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಎಲೆಗಳ ಸುಳಿಯಲ್ಲಿ ಮತ್ತು ಕೆಳಭಾಗದಲ್ಲಿ ರಸ ಹೀರುತ್ತಿವೆ. ಎಲೆಗಳ ಮೇಲೆ ಬಿಳಿ ಮಚ್ಚೆಗಳು ಕಾಣಿಸುತ್ತಿದ್ದು ತುದಿಯಿಂದ ಬೆಳೆ ಒಣಗುತ್ತಿವೆ.

ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ನೂರಾರು ರೈತರು ಅಲ್ಪಸ್ವಲ್ಪ ಮಳೆಯನ್ನು ನೆಚ್ಚಿಕೊಂಡು ಬಿತ್ತನೆ ಮಾಡಿದ್ದರು. ಆದರೆ, ಈಗ ಉಳ್ಳಾಗಡ್ಡಿಗೆ ಕೊಳವೆ ರೋಗ, ಮಜ್ಜಿಗೆ ರೋಗ, ಬೂದಿ ರೋಗ, ಮುಟ್ಟಿಗೆ ರೋಗ ತಗುಲಿದೆ. ಹೋಬಳಿ ವ್ಯಾಪ್ತಿಯ 4500 ಹೆಕ್ಟೇರ್​ನಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ.

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು 40 ರಿಂದ 50 ಸಾವಿರ ರೂ. ಖರ್ಚಾಗುತ್ತದೆ. ನಾನಾ ರೋಗಗಳು ಕಾಣಿಸಿಕೊಂಡಿದ್ದರಿಂದ ಹಾಕಿದ ಬಂಡವಾಳ ತೆಗೆಯುವುದು ಕಷ್ಟವಾಗಿದೆ.

ಬೆಲೆ ಇದ್ದರೂ ಇಳುವರಿ ಇಲ್ಲ
ಮುಂಗಾರು ವಿಫಲವಾದ ಕಾರಣ ಉಳ್ಳಾಗಡ್ಡಿ ಬೆಲೆ ದಿನೇ ದಿನೆ ಏರುತ್ತಿದೆ. ಮಾರುಕಟ್ಟೆಯಲ್ಲಿ ಈಗ ಒಂದು ಕ್ವಿಂಟಾಲ್ ಉಳ್ಳಾಗಡ್ಡಿಗೆ 3500-4000 ರೂ.ವರೆಗೆ ಬೆಲೆ ಇದೆ. ಇಂಥ ಸಂದರ್ಭದಲ್ಲಿ ಹೋಬಳಿ ವ್ಯಾಪ್ತಿಯ ರೈತರು ನಾಲ್ಕು ಕಾಸು ಕಾಣಲು ಅನುಕೂಲವಾಗಿತ್ತು. ವಿಪರ್ಯಾಸ ಎಂದರೆ ಬೆಲೆ ಏರಿಕೆಯಾಗಿದ್ದರೂ ಇಳುವರಿ ಇಲ್ಲದ ಕಾರಣ ರೈತರಿಗೆ ಉಪಯೋಗವಾಗುತ್ತಿಲ್ಲ.

ಹೊಲಕ್ಕೆ ಬಂದು ಪರಿಶೀಲಿಸಲಿ
ಬೆಳೆಗೆ ರೋಗ ಕಾಣಿಸಿಕೊಂಡಿದ್ದರ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರಿಂದ ಸಮರ್ಪಕವಾದ ಉತ್ತರವಾಗಲಿ, ಸಲಹೆಗಳಾಗಲಿ ಬಂದಿಲ್ಲ. ಅಂಗಡಿಯವರು ನೀಡಿದ್ದನ್ನು ತಂದು ಸಿಂಪರಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಒಮ್ಮೆ ಹೊಲಕ್ಕೆ ಬಂದು ಪರಿಶೀಲಿಸಬೇಕು ಎನ್ನುತ್ತಾರೆ ರೈತರು.

ರೋಗ ಹತೋಟಿಗೆ ಕ್ರಮ…
ಉಳ್ಳಾಗಡ್ಡಿಯಲ್ಲಿ ಮಜ್ಜಿಗೆ ರೋಗ ತಡೆಗಟ್ಟಲು ಮ್ಯಾಂಕೋಜೆಟ್ 2 ಗ್ರಾಂ. ಲೀಟರ್ ನೀರಿಗೆ ಅಥವಾ ಪ್ರೋಟಿಕೊನಾಜೋಲ್ 1 ಎಂಎಲ್ ಲೀಟರ್ ನೀರಿಗೆ, ಹೆಕ್ಸಾಕೊನೋಜೆಲ್ 1 ಎಂಎಲ್ 1 ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಕೀಟನಾಶಕ್ಕೆ ಲಾಮ್ಡಾ 2 ಗ್ರಾಂ. 1 ಲೀಟರ್ ನೀರಿಗೆ, ಇಮಾಮೇಕಟಿನ್ ಬೆಂಜಜೋಯಿಟ್ 2 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಕೃಷಿ ಚಟುವಟಿಕೆ ದುಸ್ಥರವಾಗುತ್ತಿದೆ. ಒಂದಿಲ್ಲೊಂದು ಸಮಸ್ಯೆಗಳು ಎದುರಾಗುವ ಮೂಲಕ ನಷ್ಟ ಅನುಭವಿಸುವಂತಾಗಿದೆ. ಒಂದು ವಾರದಿಂದ ದೊಡ್ಡ ಮಳೆಯಾಗದೆ ಮೋಡ ಕವಿದ ವಾತಾವರಣದ ಫಲವಾಗಿ ಉಳ್ಳಾಗಡ್ಡಿ ಹಾಗೂ ಮೆಣಸಿನ ಅಗಿಗಳಿಗೆ ವಿವಿಧ ರೋಗಗಳು ಅಂಟಿಕೊಂಡಿವೆ. ರಭಸವಾಗಿ ಮಳೆಯಾದಲ್ಲಿ ಎಲ್ಲ ರೋಗಗಳು ನಾಶವಾಗಲಿವೆ. ಈಗಾಗಲೇ ಎರಡು ಬಾರಿ ಔಷಧಿ ಸಿಂಪಡಿಸಲಾಗಿದೆ.
| ಶರಣಪ್ಪ ಮಡಿವಾಳರ, ನರೇಗಲ್ಲ ರೈತ

ಉಳ್ಳಾಗಡ್ಡಿ, ಮೆಣಸಿನ ಬೆಳೆಗೆ ರೋಗ ತಗುಲಿದ್ದರಿಂದ ಕೆಲ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಬಹುತೇಕ ರೈತರು ಬೆಳೆ ಪರಿವರ್ತನೆ ಮಾಡದೆ ಹೊಲದಲ್ಲಿ ಪದೇ ಪದೆ ಒಂದೇ ಬೆಳೆ ಬೆಳೆದರೆ ಇಂಥ ರೋಗಗಳು ಕಾಡುತ್ತವೆ. ಹಾಗಾಗಿ ಬೆಳೆ ಪರಿವರ್ತನೆ ಮಾಡಬೇಕು. ಹವಾಮಾನ ವೈಪರೀತ್ಯದಿಂದಲೂ ಇಂತಹ ಸಮಸ್ಯೆಗಳು ಬರುತ್ತವೆ.
| ಎಂ.ಎಂ. ತಾಂಬೂಟಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

Leave a Reply

Your email address will not be published. Required fields are marked *