ಉಳಿಕೆ ಅಕ್ಕಿ ಲೆಕ್ಕಾಚಾರ ಪಕ್ಕಾ

ವಿಜಯವಾಣಿ ವರದಿಗೆ ಎಚ್ಚೆತ್ತ ಆಹಾರ ಇಲಾಖಾಧಿಕಾರಿಗಳು

ಬೆಂಗಳೂರು: ರಾಜ್ಯದಲ್ಲಿರುವ ಗೋದಾಮು, ಸಗಟು ಮಳಿಗೆ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಉಳಿಕೆಯಾಗುವ ಅಕ್ಕಿಯನ್ನು ಸಮರ್ಪಕವಾಗಿ ಲೆಕ್ಕ ಹಾಕುವ ಮೂಲಕ ಗೋಲ್​ವಾಲ್​ಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಎಂ.ಸಿ. ಗಂಗಾಧರ್ ತಿಳಿಸಿದ್ದಾರೆ.

‘ಬಡವರ ಅಕ್ಕಿ ಗುಳುಂ’ ಶೀರ್ಷಿಕೆಯಡಿ ಶನಿವಾರ ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಜಂಟಿ ನಿರ್ದೇಶಕರು, ಪ್ರತಿ ತಿಂಗಳು ಫಲಾನುಭವಿಗಳಿಗೆ ವಿತರಿಸಿ ಉಳಿಯುವ ದಾಸ್ತಾನು ವಿವರ ಇಲಾಖೆಯ ವೈಬ್​ಸೈಟ್​ನಲ್ಲಿ ನಮೂದಿಸಲಾಗುತ್ತಿದೆ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ವಿತರಿಸಿ ಉಳಿಯುವ ಅಂದಾಜು 10 ಸಾವಿರ ಕ್ವಿಂಟಾಲ್ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ನಮೂದಿಸಲಾಗಿದೆ. ಅದರಂತೆ ಗೋದಾಮು ಮತ್ತು ಸಗಟು ಮಳಿಗೆಗಳಲ್ಲಿ ಆಯಾ ತಿಂಗಳ ಉಳಿಕೆಯ ದಾಸ್ತಾನು ಲೆಕ್ಕದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ತಿಂಗಳು 2.82 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಡಿಕೆ ಇದೆ. ಫಲಾನುಭವಿಗಳಿಗೆ ನೀಡಿ ಶೇ. 13 ಅಕ್ಕಿ ಉಳಿಯುತ್ತದೆ. ಅದನ್ನು ಮುಂದಿನ ತಿಂಗಳಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ರೇಷನ್ ಹಂಚಿಕೆ ವೇಳೆ ಸೇರಿಸಲಾಗುತ್ತದೆ. ಗೋದಾಮು-ಸಗಟು ಮಳಿಗೆಗಳಲ್ಲಿ ಆಧಾರ್ ಆಧಾರಿತ ಪಿಒಎಸ್ ಅಳವಡಿಸಲು ಹಿಂದಿನ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಇದನ್ನು ಕೈಬಿಡಲಾಗಿತ್ತು ಎಂದರು.

ಎಫ್​ಸಿಐ ಗೋದಾಮಿನಿಂದ ಸಗಟು ಮಳಿಗೆಗಳಿಗೆ ಮತ್ತು ಸಗಟು ಮಳಿಗೆಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ರೇಷನ್ ಸರಬರಾಜು ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸಿ ಪಡಿತರ ಸೋರಿಕೆ ತಡೆಯಲು ನಿರ್ಧರಿಸಲಾಗಿದೆ. ದೊಡ್ಡ ಉಗ್ರಾಣಗಳಲ್ಲಿ ಸಂಗ್ರಹಿಸಿರುವ ರೇಷನ್ ಕಳವು ಮಾಡಿ ಕಾಳಸಂತೆಯಲ್ಲಿ ಮಾರುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಎಫ್​ಸಿಐ ಗೋದಾಮುಗಳು ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ರಾಜ್ಯದಲ್ಲಿ 190ಕ್ಕೂ ಹೆಚ್ಚು ಸಗಟು ಮಳಿಗೆ ಮತ್ತು ಗೋದಾಮಿನಲ್ಲಿ ಶೀಘ್ರ ಪಿಒಎಸ್ ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.