ಉಲಿದ ಹೆಬ್ಬುಲಿ

ನಟ ‘ಕಿಚ್ಚ’ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರ ಗುರುವಾರ (ಫೆ.23) ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಈ ಚಿತ್ರದಲ್ಲಿ ಸುದೀಪ್ ಪ್ಯಾರಾ ಕಮಾಂಡೋ ಪಾತ್ರದಲ್ಲಿ ಕಾಣಿಸಿದ್ದಾರೆ. ‘ಮಾಣಿಕ್ಯ’ದಲ್ಲಿ ಅಪ್ಪನ ಪಾತ್ರ ಮಾಡಿದ್ದ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಈ ಬಾರಿ ಅಣ್ಣನ ಪೋಷಾಕು ತೊಟ್ಟಿದ್ದಾರೆ. ಬಹುನಿರೀಕ್ಷಿತ ಈ ಚಿತ್ರದ ಕುರಿತು ಸುದೀಪ್ ಈ ವಾರದ ‘ಸಿನಿವಾಣಿ’ಯಲ್ಲಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ವೃತ್ತಿಜೀವನದ ಕುರಿತು ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  • ಅವಿನಾಶ್ ಜಿ. ರಾಮ್ ಬೆಂಗಳೂರು

‘ಹೆಬ್ಬುಲಿ’ ಹೈಲೈಟ್ಸ್ ಏನು?

ಬಹಳ ಸಮಯದ ಹಿಂದೆ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಯುದ್ಧಭೂಮಿಯಲ್ಲಿ ದೇಶ ಕಾಯುವ ಯೋಧನ ಕುಟುಂಬವನ್ನು ಯಾರು ಕಾಯೋರು? ಇಲ್ಲಿ ಆತನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಯಾರು ಹೊಣೆ? ಆತನ ಕುಟುಂಬದ ಪರವಾಗಿ ಯಾರೂ ನಿಲ್ಲುವುದಿಲ್ಲ. ಆ ರೀತಿ ಯೋಧನ ಕುಟುಂಬಕ್ಕೆ ತೊಂದರೆ ಆದಾಗ ಆತನ ತಲೆಯಲ್ಲಿ ಏನು ಓಡಬಹುದು? ಚಿತ್ರದ ಹಾಡೊಂದರಲ್ಲಿ ಒಂದು ಲೈನ್ ಇದೆ; ‘ಕಾಯಲು ಹೋದೆನು ನಿನ್ನನು ನಂಬಿ ದೇಶವಾ.. ನೀ ಕಾಯದೇ ಸೋತೆಯ ನನಗೆ ಬೇಕಾದ ಒಂದು ಜೀವವಾ…’ ಈ ಸಾಲಿನಲ್ಲೇ ಎಲ್ಲ ಅಡಗಿದೆ. ಈ ಚಿತ್ರದಲ್ಲಿ ಒಂದು ಬ್ಯೂಟಿಫುಲ್ ಅಂಶವಿದೆ. ಇಲ್ಲಿಯವರೆಗೆ ಯಾರೂ ಅದನ್ನು ಮುಟ್ಟಿಲ್ಲ ಎಂಬುದು ನನ್ನ ಅಭಿಪ್ರಾಯ. ಅದನ್ನು ಇಲ್ಲಿ ಹೇಳಿದ್ದೇವೆ, ಹೇಳುವುದಕ್ಕೆ ಪ್ಯಾರಾ ಕಮಾಂಡೋ ಪಾತ್ರವನ್ನು ಬಳಸಿಕೊಂಡಿದ್ದೇವೆ. ಇಲ್ಲಿ ಯುದ್ಧದ ಸನ್ನಿವೇಶಗಳು ಕಡಿಮೆ ಇದ್ದರೂ, ಪ್ಯಾರಾ ಕಮಾಂಡೋ ಪಾತ್ರ ಇಡೀ ಸಿನಿಮಾ ಇರುತ್ತದೆ. ನಿರ್ದೇಶಕ ಕೃಷ್ಣ ತುಂಬ ನೀಟ್ ಆಗಿ ಅದನ್ನು ತೆರೆಮೇಲೆ ತಂದಿದ್ದಾರೆ.

ಪ್ಯಾರಾ ಕಮಾಂಡೋ ಪಾತ್ರಕ್ಕಾಗಿ ಏನಾದರೂ ತಯಾರಿ?

ಅದರಲ್ಲೆಲ್ಲ ನನಗೆ ನಂಬಿಕೆ ಇಲ್ಲ. ಇಡೀ ಚಿತ್ರ ಯುದ್ಧಕ್ಕೆ ಸಂಬಂಧಿಸಿದ್ದಾಗಿದ್ದು ಅಥವಾ ಯಾರದ್ದೋ ಜೀವನವನ್ನಾಧರಿಸಿದ್ದರೆ ಅದಕ್ಕಾಗಿ ಒಂದಷ್ಟು ತಯಾರಿ ಮಾಡಬೇಕಾಗುತ್ತಿತ್ತೇನೋ? ಒಂದುವೇಳೆ, ಯಾರೋ ಒಬ್ಬರ ಬಯೋಪಿಕ್ ಮಾಡಬೇಕಾದರೆ, ಪೂರ್ವತಯಾರಿಯ ಅನಿವಾರ್ಯತೆ ಎದುರಾಗುತ್ತದೆ. ಯಾವ ವ್ಯಕ್ತಿಯ ಬಯೋಪಿಕ್ ಮಾಡುತ್ತೇವೋ ಆ ವ್ಯಕ್ತಿಯ ಮ್ಯಾನರಿಸಂ ಸ್ಟಡಿ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಕಮಾಂಡೋಗಳ ದೇಹಭಾಷೆ ಗೊತ್ತಿದ್ದರೆ ಸಾಕೆನಿಸುತ್ತದೆ. ಇದುವರೆಗೂ ನಾನು ಯಾವುದಕ್ಕೂ ತುಂಬ ಸಿದ್ಧತೆಗಳನ್ನೇನೂ ಮಾಡಿಕೊಂಡು ಸೆಟ್​ಗೆ ಹೋಗಿಲ್ಲ. ನನಗೆ ಸ್ವಲ್ಪ ತಿಳಿದಿರುತ್ತದೆ, ಸೆಟ್​ಗೆ ಹೋದ ಮೇಲೆ ಇನ್ನೊಂದಿಷ್ಟು ತಿಳಿಯುತ್ತದೆ.

ಟೀಸರ್​ಗಳಲ್ಲಿ ಪಂಚಿಂಗ್ ಡೈಲಾಗ್ ಇರುವುದು ಸಾಮಾನ್ಯ. ಆದರೆ ‘ಹೆಬ್ಬುಲಿ’ ಟೀಸರ್​ನಲ್ಲಿ ಡೈಲಾಗ್ ಇಲ್ಲ. ಇದು ಬೇಕಂತಲೇ ಮಾಡಿರುವುದಾ?

ಈ ರೀತಿಯಲ್ಲಿ ನಾವೆಲ್ಲ ಯೋಚನೆಯನ್ನೇ ಮಾಡಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದೊಂದು ಶೈಲಿ ಇರುತ್ತದೆ. ನನಗೆ ನನ್ನದೇ ಆದ ಶೈಲಿ ಇದೆ. ನಾನು ಸಿನಿಮಾದಲ್ಲಿ ಮಾಡುವ ಪಾತ್ರ ನನ್ನ ನಿಜ ಜೀವನದ ಗುಣಗಳಿಗಿಂತ ಹೆಚ್ಚು ದೂರ ಇರುವುದಿಲ್ಲ. ‘ನಾನು ಆರ್ವಿು ಅಧಿಕಾರಿಯಾಗಿದ್ದರೆ ಹೇಗೆ ಯೋಚಿಸಬಹುದು, ಪೊಲೀಸ್ ಅಧಿಕಾರಿಯಾಗಿದ್ದರೆ ಹೇಗೆ ಯೋಚಿಸಬಹುದು, ರೌಡಿಯಾಗಿದ್ದರೆ ಯಾವ ರೀತಿ ನಡೆದುಕೊಳ್ಳಬಹುದು..’ ಎಂದು ಆಲೋಚಿಸುತ್ತೇನೆ. ಕಥೆಗೆ ಯಾವುದು ಅವಶ್ಯಕ ಎನಿಸುತ್ತದೋ ಅದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ನಾಲಿಗೆಗಿಂತ ನಾನು ಮಾಡುವ ಕೆಲಸ ಮಾತನಾಡಿದರೆ ನನಗೆ ಇಷ್ಟ.

‘ಮಾಣಿಕ್ಯ’ದ ನಂತರ ನಿಮ್ಮ ಜತೆ ರವಿಚಂದ್ರನ್ ಮತ್ತೊಮ್ಮೆ ಇಲ್ಲಿ ಅಣ್ಣನಾಗಿ ನಟಿಸಿದ್ದಾರೆ…

ಅವರೊಬ್ಬ ಕನಸುಗಾರ. ನಾವೆಲ್ಲ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ನಾನು ಮೊಟ್ಟಮೊದಲ ಬಾರಿಗೆ ಅವರನ್ನು ನೋಡಿದ್ದು ನಮ್ಮಕ್ಕನ ಮದುವೆಯಲ್ಲಿ. ಒಂದು ಕೈಯಲ್ಲಿ ಬೊಕ್ಕೆ ಹಿಡಿದುಕೊಂಡು ಹೀಗೆ ಬಂದು, ಹಾಗೆ ಕೊಟ್ಟು ಹೋಗಿಬಿಟ್ಟರು. ನಾನು ಮೊದಲ ಬಾರಿಗೆ ಅವರ ಮನೆಗೆ ಹೋಗಿ ಕಾಫಿ ಕುಡಿದದ್ದು, ಆ ದಿನ ಆವತ್ತಿನ ಮಟ್ಟಿಗೆ ನನ್ನ ಬದುಕಿನ ದೊಡ್ಡ ಸಾಧನೆ ಎನಿಸಿತ್ತು. ಒಂದಲ್ಲ ಒಂದು ದಿನ ನಾವು ಅವರೊಟ್ಟಿಗೆ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ, ಹೀಗೆ ಪದೇಪದೆ ಜತೆಯಾಗಿ ಸಿನಿಮಾ ಮಾಡುತ್ತೇವೆ ಎಂದುಕೊಂಡಿರಲಿಲ್ಲ. ನನ್ನನ್ನು ಯಾವತ್ತೂ ಬೇರೆಯವನ ರೀತಿ ಅವರು ನೋಡಿಲ್ಲ. ಬೇರೆಯವರನ್ನು ಮೆಚ್ಚಿಸá-ವುದಕ್ಕೆ ಮುಖವಾಡ ಹಾಕಿಕೊಂಡು ಬದುಕುವುದು ಅವರಿಗೆ ತಿಳಿದಿಲ್ಲ.

‘ಹೆಬ್ಬುಲಿ’ ತಂಡದ ಬಗ್ಗೆ ಹೇಳಿ.

ನಮ್ಮ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವತ್ತು ಎಲ್ಲಿರಬೇಕೋ ಅಲ್ಲಿದ್ದಾರೆ, ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ. ನಮ್ಮ ನಿರ್ವಪಕರು ತುಂಬ ಪ್ರೀತಿಯಿಂದ ಈ ಚಿತ್ರ ಮಾಡಿದ್ದಾರೆ. ದುಡ್ಡಿದೆ ಅಂತ ಸುಮ್ಮನೆ ಸುರಿದು ಸಿನಿಮಾ ಮಾಡೋದಲ್ಲ. ಪ್ರೀತಿಯಿಂದ ಕಲಿತು ಬಂಡವಾಳ ಹೂಡಬೇಕು. ಇವತ್ತು ಉಮಾಪತಿ ಅವರನ್ನು ಕರೆದು ಸಿನಿಮಾ ಮಾಡಿ ಎಂದು ಹೇಳುತ್ತಿದ್ದಾರೆಂದರೆ, ಅದು ಅವರು ಸಂಪಾದಿಸಿರೋದು. ಈ ಸಿನಿಮಾದಿಂದ ಅವರು ತುಂಬ ಕಲಿತಿದ್ದಾರೆ. ಮತ್ತೋರ್ವ ನಿರ್ವಪಕ ರಘುನಾಥ್ ಮಗುವಿನಂತಹ ಮನಸ್ಸಿನವರು. ನೋವುಗಳನ್ನು ಎಕ್ಸ್ ಪ್ರೆಸ್ ಮಾಡುವುದಕ್ಕೆ ಬರುವುದಿಲ್ಲ. ಸಂತೋಷವನ್ನು ತುಂಬ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ನಿರ್ದೇಶಕ ಕೃಷ್ಣ ಅವರ ಕೆಲಸದಲ್ಲಿನ ಶ್ರದ್ಧೆ ಮತ್ತು ಮುಗ್ಧತೆ ನನಗೆ ಬಹಳ ಇಷ್ಟವಾಯಿತು.

‘ಹೆಬ್ಬುಲಿ’ ನಿಮಗೆಷ್ಟು ವಿಶೇಷ?

ನಾವೇನೋ ಕೊಹಿನೂರ್ ಡೈಮಂಡ್ ತಂದಿದ್ದೇವೆ, ಯಾರೂ ಮಾಡದ್ದನ್ನು ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಕಥೆಯನ್ನು ಒಪ್ಪಿದ್ದೇವೆ, ಅದನ್ನು ಎಷ್ಟು ಚೆನ್ನಾಗಿ ಸಿನಿಮಾ ಮಾಡುವುದಕ್ಕೆ ಸಾಧ್ಯವೋ ಅಷ್ಟು ಮಾಡಬೇಕು. ನಮ್ಮಿಂದ ಯಾವುದೇ ಕೊರತೆ ಎನಿಸಬಾರದು ಎಂದುಕೊಂಡು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಕೆಲವು ಸಂದರ್ಭದಲ್ಲಿ ಈ ಸಿನಿಮಾದಿಂದ ದುಡ್ಡು ಮಾತ್ರ ಹೋಗುತ್ತದೆ ಎನ್ನುವುದು ಕನ್​ಫಮ್ರ್ ಆಗುತ್ತಿತ್ತು. ಹಾಗಾಗಿ ಬಿಟ್ಟುಬಿಡುತ್ತಿದ್ದೆ. ಆದರೆ ಇಲ್ಲಿ ನಿರ್ವಪಕರಾದ ರಘುನಾಥ್ ಮತ್ತು ಉಮಾಪತಿ ಹಾಕಿರುವ ಹಣ, ಸಿನಿಮಾ ಮೇಲೆ ಅವರಿಟ್ಟಿರುವ ಪ್ರೀತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಹಿಂದಿನ ಕೆಲವು ಸಿನಿಮಾಗಳಲ್ಲಿ ಅವರವರ ಹಣೆಬರಹ ಏನು ಮಾಡೋದು ಎಂದು ಮೂರು ಗಂಟೆ ಜಾಸ್ತಿ ಮಲಗುತ್ತಿದ್ದೆ. ಆದರೆ ಈ ಚಿತ್ರದಿಂದಾಗಿ ನಿದ್ದೆ ಕಮ್ಮಿಯಾಗಿದೆ. ಇಬ್ಬರಿಗೂ ಚಿತ್ರರಂಗದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಬೇಗನೆ ತಿಳಿದುಕೊಂಡರು.

ಈ ಚಿತ್ರದ ಕಥೆಯನ್ನೇ ಕೇಳದೆ ಕಾಲ್​ಶೀಟ್ ನೀಡಿದ್ದೀರಂತೆ?

ನಿರ್ದೇಶಕ ಕೃಷ್ಣ, ಹೀಗೊಂದು ಸಿನಿಮಾ ಮಾಡಬೇಕು ಎಂದಾಗ ಡೇಟ್ಸ್ ಕೊಟ್ಟೆ. ಹಾಗಂತ ಕಥೆ ಕೇಳಿಲ್ಲ ಎಂದಲ್ಲ. ಸಿನಿಮಾ ಇನ್ನೇನು ಶುರುವಾಗಲಿದೆ ಎಂದಾಗ ಒಂದು ತಿಂಗಳು ಚರ್ಚೆ ನಡೆಸಿದೆವು. ಈ ಕಥೆಯನ್ನು ಯಾವ ರೀತಿ ಮಾಡಿದರೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ, ಯಾವ ಮಾರ್ಗದ ಮೂಲಕ ಕಥೆ ಹೇಳಬೇಕು ಎಂದೆಲ್ಲ ಮೊದಲೇ ಪ್ಲಾನ್ ಮಾಡಿಕೊಂಡೆವು. ತುಂಬ ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿ ಕೃಷ್ಣ. ನೀವು ನಂಬುವುದಿಲ್ಲ, ನಿರ್ದೇಶಕ ರಾಜಮೌಳಿ ‘ಈಗ’ ಸಿನಿಮಾದ ಕಥೆಯನ್ನು ಕೇವಲ 30 ಸೆಕೆಂಡ್​ನಲ್ಲಿ ಹೇಳಿದ್ದರು. ‘ಇಬ್ಬರು ಪ್ರೇಮಿಗಳಿರುತ್ತಾರೆ. ಆದರೆ ಹುಡುಗಿ ನಿಮಗೆ ಇಷ್ಟವಾಗಿರುತ್ತಾಳೆ. ಅದಕ್ಕಾಗಿ ನೀವು ಆ ಹುಡುಗನನ್ನು ಸಾಯಿಸುತ್ತೀರಿ. ಆತ ನೊಣವಾಗಿ ಬಂದು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ..’ ಎಂದಷ್ಟೇ ಹೇಳಿದ್ದರು.

ಮುಖ್ಯವಾಗಿ ಈ ಚಿತ್ರದಲ್ಲಿ ನಿಮ್ಮ ಹೇರ್ ಸ್ಟೈಲ್ ಸಖತ್ ಟ್ರೆಂಡಿಯಾಗಿದೆ?

ಹೌದು, ಇದು ನಿಜಕ್ಕೂ ನನಗೆ ಬಹಳ ಖುಷಿ ನೀಡಿದೆ. ಹೇರ್ ಸ್ಟೈಲ್​ನ ಫಾಲೋ ಮಾಡಿ ಅಂತ ಅಭಿಮಾನಿಗಳಿಗೆ ನಾವೇ ಹೇಳಿದ್ದೇವೆ ಎಂದು ಯಾರಾದರೂ ಹೇಳಬಹುದು. ಆದರೆ ಪುಟ್ಟ ಮಕ್ಕಳು ಕೂಡ ಈ ಹೇರ್ ಸ್ಟೈಲ್ ಫಾಲೋ ಮಾಡುತ್ತಿದ್ದಾರೆ. ಅವರಿಗೆಲ್ಲ ನಾವು ಹೇಳಿ ಮಾಡಿಸುವುದಕ್ಕೆ ಆಗುವುದಿಲ್ಲ. ಈ ರೀತಿಯ ಪ್ರೀತಿ-ಕ್ರೇಜ್ ಲಂಚ ಕೊಟ್ಟು ಪಡೆಯುವಂಥದ್ದಲ್ಲ. ಒಬ್ಬರಿಗೆ ಹೇಳಬಹುದು, 10 ಜನಕ್ಕೆ ಹೇಳಬಹುದು, ಎಲ್ಲರಿಗೂ ಹೇಳಿ ಮಾಡಿಸುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ಸಿನಿಮಾಗಳಿಗೆ ಎಷ್ಟೇ ಪ್ರಚಾರ ಮಾಡಿದರೂ ಹೈಪ್ ಕ್ರಿಯೇಟ್ ಆಗುವುದೇ ಇಲ್ಲ. ಆ ಸಿನಿಮಾ ಯಶಸ್ಸಾದರೂ ಜನ ಆ ಬಗ್ಗೆ ಮಾತನಾಡುವುದಿಲ್ಲ. ಆದರೆ ‘ಹೆಬ್ಬುಲಿ’ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಿದೆ.

ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಬೇರೆ ರೀತಿಯ ಸಿನಿಮಾ ಮಾಡುವ ಯೋಜನೆ ಏನಾದರೂ ಇದೆಯಾ?

ನೀವಿಲ್ಲದಿದ್ದರೆ (ಮಾಧ್ಯಮ) ನಾನಿಲ್ಲಿಯವರೆಗೂ ಬರುತ್ತಿರಲಿಲ್ಲ. ಈಗ ನಾನು ಕಮರ್ಷಿಯಲ್ ಸಿನಿಮಾಗಳನ್ನು ಮಾಡುತ್ತಿರುವುದಕ್ಕೂ ನೀವುಗಳೇ ಕಾರಣ. ಸೆನ್ಸಿಬಲ್ ಸಿನಿಮಾ ಮಾಡಿದಾಗ ನನ್ನ ಬೆನ್ನುತಟ್ಟಿದ್ದರೆ, ನನ್ನ ಮಾರ್ಗವೇ ಬದಲಾಗುತ್ತಿತ್ತೇನೋ? ರಾಷ್ಟ್ರ ಪ್ರಶಸ್ತಿ, ರಾಜ್ಯಪ್ರಶಸ್ತಿಗಳ ಹಿಂದೆ ಹೋಗಿಬಿಡುತ್ತಿ್ತ್ದೆ. ಆವಾಗ ನನ್ನ ಮನೆ ಮುಂದೆ ಇಷ್ಟೊಂದು ಕಾರುಗಳು ನಿಲ್ಲುತ್ತಿರಲಿಲ್ಲ! ನಾನು ‘ಶಾಂತಿ ನಿವಾಸ’ ಮಾಡಿದ್ದೇನೆ, ‘ಮಾಣಿಕ್ಯ’ವನ್ನೂ ಮಾಡಿದ್ದೇನೆ. ಎರಡೂ ಚಿತ್ರಗಳ ಕಂಟೆಂಟ್ ಒಂದೇ. ಆದರೆ ಹೇಳುವ ಮಾರ್ಗ ಬೇರೆಬೇರೆ. ‘ಜಸ್ಟ್ ಮಾತ್​ವಾತಲ್ಲಿ’ ಚಿತ್ರಕ್ಕೆ ಈಗಲೂ ಮೆಚ್ಚುಗೆ ಸಿಗುತ್ತಿದೆ. ಆದರೆ ಆವಾಗ ಅದು ಮುಖ್ಯವಾಗಲಿಲ್ಲ. ಬಹುಶಃ ನಾನೇ ಐದು ವರ್ಷ ಮುಂದೆ ಹೋಗಿ ಯೋಚನೆ ಮಾಡಿದೆ ಎಂದು ಕಾಣುತ್ತದೆ. ಇವತ್ತು ನಾನು ಮಾಡುವ ಸಿನಿಮಾಗಳಲ್ಲಿ ಒಳ್ಳೆಯ ವಿಷಯ ಇದೆ. ಆದರೆ ಹೇಳುವ ಶೈಲಿ ಬದಲಾಗಿದೆಯಷ್ಟೇ. ನನಗೆ ತುಂಬ ದೂರಾಲೋಚನೆ ಮಾಡುವುದಕ್ಕೆ ಬರುವುದಿಲ್ಲ. ಇವತ್ತಿನ ಈ ದಿನವನ್ನು ತುಂಬ ಚೆನ್ನಾಗಿ ಕಳೆಯುವುದಕ್ಕೆ ಬಯಸುತ್ತೇನೆ. ‘ಉಳಿದವರು ಕಂಡಂತೆ’ ಬರುವುದಕ್ಕೂ ಮೊದಲೇ ರಕ್ಷಿತ್ ಶೆಟ್ಟಿ ಜತೆ ಸಿನಿಮಾ ಮಾಡುತ್ತೇನೆಂದು ಹೇಳಿದ್ದೆ. ಅಂತೆಯೇ ‘ರಿಕ್ಕಿ’ ರಿಲೀಸ್​ಗೂ ಮೊದಲೇ ರಿಷಬ್ ಶೆಟ್ಟಿ ಜತೆ ಸಿನಿಮಾ ಮಾಡುವ ಮಾತುಕತೆ ನಡೆದಿತ್ತು. ಅವರು ಯಾವ ರೀತಿ ಸಿನಿಮಾ ಮಾಡುತ್ತಾರೆ, ಅವರ ಸಿನಿಮಾ ಜಾನರ್ ಏನು ಎಂಬುದು ನಿಮಗೂ ತಿಳಿದಿದೆ.

ಕಳೆದ 2-3 ವರ್ಷಗಳಿಂದ ಬೇರೆ ಬೇರೆ ರೀತಿಯ ಚಿತ್ರಗಳನ್ನು ಪ್ರೇಕ್ಷಕ ಇಷ್ಟಪಡುತ್ತಿದ್ದಾನೆ. ಚಿತ್ರರಂಗದ ಟ್ರೆಂಡ್ ಬದಲಾಗಿದೆ ಎಂದು ಅನಿಸುತ್ತಿದೆಯೇ?

ನಾನು ವೃತ್ತಿಜೀವನ ಆರಂಭಿಸಿದಾಗಲೂ ಪ್ರೇಕ್ಷಕ ಏನು ನಿರೀಕ್ಷೆ ಮಾಡುತ್ತಾನೆಂದು ನನಗೆ ತಿಳಿದಿರಲಿಲ್ಲ, ಈಗಲೂ ಗೊತ್ತಿಲ್ಲ. ಒಂದá- ಸಿನಿಮಾಗಳು ಯಶಸ್ಸು ಕಂಡ ಮೇಲಷ್ಟೇ ಅದು ಹಿಟ್ ಆಯಿತು ಎಂದು ತಿಳಿಯುವುದು. ಸೋತಾಗಲೇ, ‘ಓಹ್! ನಮ್ ಸಿನಿಮಾಗಳೂ ಸೋಲುತ್ತವೆ..’ ಎಂದು ಗೊತ್ತಾಗುವುದು. ಯಾವುದನ್ನೂ ಖಚಿತವಾಗಿ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲಿ ಪರಿಗಣನೆಗೆ ಬರೋದು ಕನಿಷ್ಠ ವ್ಯವಹಾರ ಎಷ್ಟಾಗುತ್ತದೆ? ಎಷ್ಟು ಲಾಸ್ ಆಗಬಹುದು? ಸಿನಿಮಾ ಒಂದು ಹಂತಕ್ಕೆ ಓಡಿದರೆ ಎಷ್ಟು ಬಂಡವಾಳ ವಾಪಸ್ ಬರುತ್ತದೆ? ಎಲ್ಲವೂ ಇಂತಹ ಲೆಕ್ಕಾಚಾರಗಳ ಮೇಲೆ ನಿಂತಿದೆ. ಅದರ ಮೇಲೆ ಸಿನಿಮಾ ನಿಂತಿದೆಯೇ ಹೊರತು ನಮ್ಮಂಥವರ ಚಿತ್ರ ಫ್ಲಾಪ್ ಆಗುವುದಿಲ್ಲ ಅಂತಲ್ಲ. ಒಂದು ಸಿನಿಮಾ ಹಿಟ್ ಎನಿಸಿಕೊಂಡ ಕೂಡಲೇ, ‘ಇದು ಸಿನಿಮಾ ಮಾಡೋ ರೀತಿ..’ ಎಂದು ಹೇಳುವ ದೃಷ್ಟಿಕೋನ ಮೊದಲು ಬದಲಿಸಿಕೊಳ್ಳಬೇಕು. ಈಗ ಒಬ್ಬರ ಸಿನಿಮಾ ಹಿಟ್ ಆಗಿದೆ ಎಂದರೆ, ಅದರ ಹಿಂದೆ 2-3 ಫ್ಲಾಪ್​ಗಳನ್ನು ಅವರೂ ಕೊಟ್ಟಿರುತ್ತಾರೆ. ತುಂಬ ಒಳ್ಳೊಳ್ಳೆಯ ಸಿನಿಮಾಗಳು ಬಂದಿವೆ, ಆದರೆ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಒಂದು ಸಿನಿಮಾ ಹಿಟ್ ಆದಮೇಲೆ ಮುಂದಿನ ಸಿನಿಮಾವನ್ನು ಪುನಃ ಎಬಿಸಿಡಿಯಿಂದಲೇ ಶುರು ಮಾಡಬೇಕು. ಎಷ್ಟೋ ಸಲ ನಾವು ಒಳ್ಳೆಯ ಕಥೆಗಳನ್ನೂ ತಿರಸ್ಕರಿಸಿದ್ದಿದೆ, ಅದನ್ನೇ ಬೇರೆಯವರು ಮಾಡಿ ಯಶಸ್ಸು ಆಗಿದ್ದೂ ಇದೆ. ಹಾಗಂತ, ಒಳ್ಳೆಯ ಸಿನಿಮಾ ಮಿಸ್ ಆಯ್ತು ಅಂತಲ್ಲ. ಅದು ನಮಗೆ ಸ್ಯೂಟ್ ಆಗುತ್ತಿರಲಿಲ್ಲ ಅಷ್ಟೇ.

(ಪ್ರತಿಕ್ರಿಯಿಸಿ: [email protected] [email protected])

Leave a Reply

Your email address will not be published. Required fields are marked *