ಉಮೇಶ್, ಇಶಾಂತ್ ಶಿಸ್ತಿನ ದಾಳಿ

ಚೆಮ್ಸ್​ಫೋರ್ಡ್: ಮೊದಲ ಇನಿಂಗ್ಸ್​ನಲ್ಲಿ ಗೌರವಯುತ ಮೊತ್ತ ದಾಖಲಿಸಿದ್ದ ಟೀಮ್ ಇಂಡಿಯಾ ಬೌಲಿಂಗ್​ನಲ್ಲಿ ಎಸ್ಸೆಕ್ಸ್ ತಂಡವನ್ನು ಕಟ್ಟಿಹಾಕಲು ಯಶಸ್ವಿಯಾಗಿದೆ. ವೇಗಿಗಳಾದ ಉಮೇಶ್ ಯಾದವ್(23ಕ್ಕೆ 2), ಇಶಾಂತ್ ಶರ್ಮ(38ಕ್ಕೆ 2) ತಲಾ 2 ವಿಕೆಟ್ ಕಬಳಿಸಿ ಎಸೆಕ್ಸ್ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹೇರಿದರು.6 ವಿಕೆಟ್​ಗೆ 322 ರನ್​ಗಳೊಂದಿಗೆ ಗುರುವಾರ 2ನೇ ದಿನದಾಟ ಮುಂದುವರಿಸಿದ ಭಾರತ 395 ರನ್​ಗೆ ಮೊದಲ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ಇನಿಂಗ್ಸ್ ಆರಂಭಿಸಿರುವ ಎಸೆಕ್ಸ್ ದಿನದಂತ್ಯದ ವೇಳೆಗೆ 237 ರನ್​ಗೆ 5 ವಿಕೆಟ್ ಕಳೆದುಕೊಂಡಿದ್ದು, 158 ರನ್​ಗಳ ಹಿನ್ನಡೆಯಲ್ಲಿದೆ.

ಹಾರ್ದಿಕ್ ಪಾಂಡ್ಯ ಅರ್ಧಶತಕ: ಶತಕದ ನಿರೀಕ್ಷೆಯಲ್ಲಿದ್ದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಮೊದಲ ದಿನದ ಮೊತ್ತ 82 ರನ್​ಗೆ ಔಟಾಗಿ ನಿರಾಸೆ ಕಂಡರು. 33 ರನ್​ಗಳೊಂದಿಗೆ ಆಟ ಮುಂದುವರಿಸಿದ ಆಲ್ರೌಂಡರ್ ಹಾರ್ದಿಕ್​ಪಾಂಡ್ಯ (51) ಅರ್ಧಶತಕ ಬಾರಿಸಿ ಔಟಾದರು. ಕನ್ನಡಿಗ ಕರುಣ್ ನಾಯರ್ 4ರನ್​ಗೆ ವೈಫಲ್ಯ ಕಂಡರೆ, ಅಂತಿಮವಾಗಿ ರಿಷಭ್ ಪಂತ್(34) ಹಾಗೂ ರವೀಂದ್ರ ಜಡೇಜಾ(15) ಉಪಯುಕ್ತ ಕಾಣಿಕೆ ನೀಡಿ ಮೊತ್ತವನ್ನು 400ರ ಸನಿಹ ತಂದರು.

ವೇಗಿಗಳ ಆರಂಭಿಕ ದಾಳಿ: ಇನಿಂಗ್ಸ್ ಆರಂಭಿಸಿದ ಎಸೆಕ್ಸ್ ತಂಡಕ್ಕೆ ಭಾರತೀಯ ವೇಗಿಗಳು ಆರಂಭದಲ್ಲೆ ಆಘಾತ ನೀಡಿದರು. ಆರಂಭಿಕ ನಿಕ್ ಬ್ರೌನ್​ರನ್ನು 11 ರನ್​ಗೆ ಉಮೇಶ್ ಯಾದವ್ ಎಲ್​ಬಿ ಬಲೆಗೆ ಬೀಳಿಸಿದರು. ಇತ್ತೀಚೆಗೆ ಕೌಂಟಿಯಲ್ಲಿ ಆಡಿದ ಅನುಭವದೊಂದಿಗೆ ಕಣಕ್ಕಿಳಿದ ಇಶಾಂತ್ ಶರ್ಮ, ಆರಂಭಿಕ ವರುಣ್ ಚೋಪ್ರಾರನ್ನು (16) ಎಲ್​ಬಿಡಬ್ಲ್ಯು ಮೂಲಕ ಪೆವಿಲಿಯನ್ ಸೇರಿಸಿದರು. ನಂತರ ಅರ್ಧಶತಕ ಬಾರಿಸಿ ಚೇತರಿಕೆ ನೀಡಿದ ನಾಯಕ ಟಾಮ್ ವೆಸ್ಲಿ(57) ಶಾರ್ದೂಲ್ ಓವರ್​ನಲ್ಲಿ ಔಟಾದರು. ಅರ್ಧಶತಕ ಬಾರಿಸಿದ ಕೈಲ್ ಪೆಪ್ಪರ್​ರನ್ನು(68) ವೇಗಿ ಇಶಾಂತ್ ಬೌಲ್ಡ್ ಮಾಡಿದರೆ, ರಿಷಿ ಪಟೇಲ್(19), ಉಮೇಶ್ ದಾಳಿಗೆ ನಿರ್ಗಮಿಸಿದರು. ಇದರಿಂದ 186ರನ್​ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಸೆಕ್ಸ್​ಗೆ ಜೇಮ್್ಸ ಫೋಸ್ಟರ್(23*) ಮತ್ತು ಪೌಲ್ ವಾಲ್ಟರ್(22*) ಮುರಿಯದ 6ನೇ ವಿಕೆಟ್​ಗೆ 51 ರನ್ ಜತೆಯಾಟವಾಡಿ ಆಸರೆಯಾಗಿದ್ದಾರೆ. ಭಾರತ: 100.2 ಓವರ್​ಗಳಲ್ಲಿ 395 (ದಿನೇಶ್ ಕಾರ್ತಿಕ್ 82,ಹಾರ್ದಿಕ್ ಪಾಂಡ್ಯ 51, ಕರುಣ್ ನಾಯರ್ 4, ಜಡೇಜಾ 15, ಪಂತ್ 34*, ಮ್ಯಾಟ್ ಕೋಲ್ಸ್ 31ಕ್ಕೆ 2, ವಾಲ್ಟರ್ 113ಕ್ಕೆ 4, ). ಎಸೆಕ್ಸ್: 58 ಓವರ್​ಗಳಲ್ಲಿ 5 ವಿಕೆಟ್​ಗೆ 237 (ಪೆಪ್ಪರ್ 68, ವೆಸ್ಲಿ 57, ಕೈಲ್ ಪೆಪ್ಪರ್ 41, ಫೋಸ್ಟರ್ 23*, ವಾಲ್ಟರ್ 22*, ಉಮೇಶ್ ಯಾದವ್ 23ಕ್ಕೆ 2, ಇಶಾಂತ್ 38ಕ್ಕೆ 2, ಶಾರ್ದೂಲ್ 41ಕ್ಕೆ 1). -ಏಜೆನ್ಸೀಸ್