ಧಾರವಾಡ: ಶಿವಮೊಗ್ಗಕ್ಕೆ ಕೆಲಸ ಅರಸಿ ಉತ್ತರ ಪ್ರದೇಶದಿಂದ ಬಂದಿದ್ದ 12 ಕಾರ್ವಿುಕರ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿದ್ದವರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅನ್ನ, ಆಶ್ರಯದ ವ್ಯವಸ್ಥೆ ಮಾಡಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಉತ್ತರಪ್ರದೇಶದ ಮನೋಜ ಎಂಬ ಗುತ್ತಿಗೆದಾರನ ಮೂಲಕ 12 ಕಾರ್ವಿುಕರು ಶಿವಮೊಗ್ಗಕ್ಕೆ ಕೆಲಸಕ್ಕಾಗಿ ತೆರಳಿದ್ದರು. ಅಲ್ಲಿ ಪ್ರವೀಣ ಮತ್ತು ಪ್ರಶಾಂತ ಎಂಬುವರ ಬಳಿ ಸಿಮೆಂಟ್ ಪೈಪ್ ಸಿದ್ಧಪಡಿಸುವ ಕೆಲಸ ಕೊಡಿಸುವುದಾಗಿ ಹೇಳಿ ಕಳುಹಿಸಿದ್ದ. ತಿಂಗಳಿಗೆ 15,000 ರೂ. ಸಂಬಳ ನೀಡುವುದಾಗಿ ಭರವಸೆ ನೀಡಿದ್ದ. ಡಿ. 21ರಿಂದ ಕೆಲಸ ಮಾಡಿರುವ ಕಾರ್ವಿುಕರಿಗೆ ಈವರೆಗೆ ಬಿಡಿಗಾಸು ನೀಡಿಲ್ಲ. ಇದರಿಂದ ಬೇಸತ್ತ ಕಾರ್ವಿುಕರು ಗುರುವಾರ ನಡೆದುಕೊಂಡೇ ತಮ್ಮ ಊರುಗಳಿಗೆ ತೆರಳುತ್ತಿದ್ದರು.
ಹು-ಧಾ ಬೈಪಾಸ್ನಲ್ಲಿ ಹೊರಟಿದ್ದವರನ್ನು ಸಹನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಭಿಲಾಷ ಶೇಗುಣಸಿ ಮತ್ತು ಚನ್ನಪ್ಪ ಹಣಸಿ ಎಂಬುವರು ಗಮನಿಸಿದ್ದಾರೆ. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಕರೆತಂದು ಉತ್ತರಪ್ರದೇಶಕ್ಕೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಕೋರಿದರು. ಕಾರ್ವಿುಕರ ಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಕಾರ್ವಿುಕ ಇಲಾಖೆ ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಮತ್ತು ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ ಅವರನ್ನು ಕರೆಸಿ ಊಟ, ವಸತಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಕಾರ್ವಿುಕರಿಗೆ ಅನ್ಯಾಯ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ವೇತನ ಕಲ್ಪಿಸುವ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಕಾರ್ವಿುಕರನ್ನು ನಗರದ ಗೌರಿಶಂಕರ ವಸತಿ ನಿಲಯದಲ್ಲಿ ಇರಿಸಲಾಗಿದ್ದು, ಶುಕ್ರವಾರ ವಾಹನ ವ್ಯವಸ್ಥೆ ಮಾಡಿ ಕಳುಹಿಸುವುದಾಗಿ ಕಾರ್ವಿುಕ ಇಲಾಖೆ ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ.