ಉಪೇಂದ್ರ ಪುತ್ರಿಯ ಫಸ್ಟ್​ಲುಕ್

ಬೆಂಗಳೂರು: ‘ರಿಯಲ್ ಸ್ಟಾರ್’ ಉಪೇಂದ್ರ-ಪ್ರಿಯಾಂಕಾ ದಂಪತಿಯ ಪುತ್ರಿ ಐಶ್ವರ್ಯಾ ‘ದೇವಕಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ವಿಷಯ ಬಹುದಿನಗಳ ಹಿಂದೆಯೇ ಸುದ್ದಿಯಾಗಿತ್ತು. ಆದರೆ, ಅದರಲ್ಲಿ ಅವರ ಪಾತ್ರ ಹೇಗಿರಲಿದೆ? ಲುಕ್ ಯಾವ ರೀತಿ ಇರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಐಶ್ವರ್ಯಾ ಫಸ್ಟ್​ಲುಕ್ ಸಿಕ್ಕಿದ್ದು, ಜತೆಗೆ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದಕ್ಕೂ ಉತ್ತರ ಸಿಕ್ಕಿದೆ. ‘ಚಿತ್ರದಲ್ಲೂ ಪ್ರಿಯಾಂಕಾ ಮತ್ತು ಐಶ್ವರ್ಯಾ ತಾಯಿ-ಮಗಳಾಗಿಯೇ ಕಾಣಿಸಿಕೊಂಡಿದ್ದಾರೆ. ಇಡೀ ಕಥೆ ಕೊಲ್ಕತ್ತದಲ್ಲಿ ನಡೆಯುತ್ತದೆ. ಎಫ್​ಎಂನಲ್ಲಿ ಜೂನಿಯರ್ ಆರ್​ಜೆ ಆಗುವುದಕ್ಕಾಗಿ ಐಶ್ವರ್ಯಾ ಆಡಿಷನ್ ನೀಡುವುದಕ್ಕೆ ಹೋಗಿರುತ್ತಾರೆ. ಅಲ್ಲಿಂದ ಅವರು ಕಾಣೆಯಾಗಿಬಿಡುತ್ತಾರೆ. ಆನಂತರ ತಾಯಿ ಹೇಗೆ ತನ್ನ ಮಗಳನ್ನು ಹುಡುಕುತ್ತಾಳೆ ಎಂಬುದೇ ‘ದೇವಕಿ’ಯ ತಿರುಳು. ತುಂಬ ಕುತೂಹಲಕಾರಿಯಾಗಿ ಸಿನಿಮಾ ಮೂಡಿಬಂದಿದೆ. ನೈಜವಾಗಿ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಲೋಹಿತ್. ಮೊದಲ ಬಾರಿಗೆ ಐಶ್ವರ್ಯಾ ನಟಿಸಿದ್ದರೂ, ಎಲ್ಲಿಯೂ ಆ ರೀತಿ ಅನಿಸುವುದಿಲ್ಲವಂತೆ. ಆ ಮಟ್ಟಿಗೆ ಅವರು ತೆರೆಮೇಲೆ ಅಚ್ಚುಕಟ್ಟಾಗಿ ಪಾತ್ರವನ್ನು ಜೀವಿಸಿದ್ದಾರೆ ಎಂಬುದು ನಿರ್ದೇಶಕರ ಅಭಿಪ್ರಾಯ. ‘ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳನ್ನು ಬಹಳ ಮುದ್ದಿನಿಂದ, ಸುಖವಾಗಿ ಬೆಳೆಸಿರುತ್ತಾರೆ ಎಂಬ ಮಾತಿದೆ. ಆದರೆ, ಐಶ್ವರ್ಯಾ ನಿರ್ದೇಶಕರ ನಟಿ. ನಮ್ಮ ಸಿನಿಮಾದ ಬಹುತೇಕ ಚಿತ್ರೀಕರಣ ರಾತ್ರಿ ಹೊತ್ತು ಇರುತ್ತಿತ್ತು. ಬೆಳಗಿನಜಾವದವರೆಗೂ ಐಶ್ವರ್ಯಾ ಶೂಟಿಂಗ್​ನಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ, ಯಾವುದೇ ಸೀನ್ ಶೂಟಿಂಗ್ ಇದ್ದರೂ, ಆ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳುತ್ತಿದ್ದರು. ಸಿನಿಮಾ ಕುರಿತು ಆ ಪ್ರಮಾಣದ ಆಸಕ್ತಿ ಅವರಲ್ಲಿದೆ’ ಎಂದು ಮೆಚ್ಚುಗೆ ಸೂಚಿಸುತ್ತಾರೆ ಲೋಹಿತ್. ಉಪೇಂದ್ರ ಬುಧವಾರವಷ್ಟೇ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡ, ತಮಿಳು ಸೇರಿ ಬಹುಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಚಿತ್ರವನ್ನು ರವೀಶ್ ಆರ್.ಸಿ ಮತ್ತು ಅಕ್ಷಯ್ ಸಿ.ಎಸ್. ನಿರ್ಮಾಣ ಮಾಡಿದ್ದಾರೆ. ಎಚ್.ಸಿ. ವೇಣು ಛಾಯಾಗ್ರಹಣ ಮಾಡಿದ್ದು, ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದಾರೆ.