ಉಪಾಧ್ಯಾಯ ವೃತ್ತಿಗೆ ಉಪೇಕ್ಷೆ ಸಲ್ಲದು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅತ್ಯಂತ ಕಡಿಮೆ ಸಂಪನ್ಮೂಲ ಇರುವ ನಾಡಿನವರಾದ ನಾವು ವಿಶ್ವದರ್ಜೆ ಗುಣಮಟ್ಟದ ವಿಶ್ವವಿದ್ಯಾಲಯ ರೂಪಿಸಲು ಬೇಕಾದ ಉತ್ತಮ ಉಪಾಧ್ಯಾಯರನ್ನು ರೂಪಿಸುವ ಅಗತ್ಯವಿದ್ದು, ಈ ವೃತ್ತಿ ಕುರಿತು ಉಪೇಕ್ಷೆ ಸಲ್ಲದು ಎಂದು ಅಂತಾರಾಷ್ಟ್ರೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷ ಪದ್ಮಶ್ರೀ ಡಾ.ವಿ. ಪ್ರಕಾಶ್ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 37ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಜನಸಾಮಾನ್ಯರ ಶ್ರಮದ ಪ್ರತಿಫಲವಾಗಿ ವಿಶ್ವವಿದ್ಯಾಲಯಗಳು ರೂಪುಗೊಳ್ಳುತ್ತವೆ. ವಿವಿಗಳಲ್ಲಿ ನಡೆಯುವ ಸಂಶೋಧನೆಗಳ ಪ್ರತಿಫಲ ಜನಸಾಮಾನ್ಯರಿಗೆ ಸಿಗುವಂತೆ ಮಾಡಿದಾಗಲೇ ವಿಶ್ವದಜರ್ೆ ವಿವಿಗಳಲ್ಲಿ ಸ್ಥಾನ ಪಡೆಯಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಭಾರತ ಶೈಕ್ಷಣಿಕವಾಗಿ ಅಮೆರಿಕ, ಚೀನಾ ಮೀರಿಸುವ ಮಟ್ಟದಲ್ಲಿದೆ. ಅದರಲ್ಲೂ ಕರ್ನಾಟಕ ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಅನ್ಯ ರಾಜ್ಯದವರು ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾತೊರೆಯುತ್ತಿದ್ದಾರೆ. ಶಿಕ್ಷಣದಲ್ಲಿ ಭಾರತಕ್ಕೆ ಯಾವುದೇ ಮಾದರಿಗಳಿಲ್ಲ. 1.3 ಬಿಲಿಯನ್ ಜನರು ನಮಗೆ ನಾವೇ ಮಾದರಿ ಆಗಿದ್ದೇವೆ. ವಿಶ್ವವಿದ್ಯಾಲಯಗಳು ಉನ್ನತ ಮಟ್ಟಕ್ಕೇರಿ ಈ ವಿವಿ ಪದವೀಧರರು ಜಗತ್ತಿನೆಲ್ಲೆಡೆ ಗುರುತಿಸಿ ಗೌರವಿಸುವಂತಾಗಲಿ ಎಂದು ಹಾರೈಸಿದರು.

ವಿದ್ಯುತ್ ಉತ್ಪಾದನೆಯನ್ನು ನ್ಯಾಷನಲ್ ಗ್ರಿಡ್ನಂತೆ ಮಾಡುವ ಮೂಲಕ ಎಲ್ಲೆಡೆ ವಿದ್ಯುತ್ ಲಭಿಸುವಂತೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಎಜುಕೇಷನ್ ನ್ಯಾಷನಲ್ ಗ್ರಿಡ್ ರೂಪಿಸಬೇಕಾಗಿದೆ. ಉನ್ನತ ಶಿಕ್ಷಣ ಪಡೆದವರು ರೈತರ ನೆರವಿಗೆ ಬರಬೇಕು. ಉನ್ನತ ಸಂಶೋಧನೆ ಲಾಭ ಸಮಾಜಕ್ಕೆ ಸಿಗುವಂತಾಗಬೇಕು. ಕೊರತೆಗಳ ನಡುವೆ ಕೊರಗದೆ, ಇರುವ ಅನುಕೂಲತೆಗಳನ್ನು ಬಳಸಿ ಮುಂದೆ ಬರಬೇಕು. ಅಂತರ್ ವಿಭಾಗದ ಸಮನ್ವಯದಿಂದ ಜ್ಞಾನ ವಿಸ್ತಾರವಾಗುತ್ತದೆ. ಉನ್ನತ ಶಿಕ್ಷಣ ಪಡೆದವರು ನೂರು ಹಳ್ಳಿಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಹನ ನಡೆಸಬೇಕು ಎಂದು ಸಲಹೆ ನೀಡಿದರು.

ಕುಲಪತಿ ಡಾ.ಎಸ್.ಆರ್.ನಿರಂಜನ್ ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಪ್ರೊ.ಸಿ. ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎಂ. ಮದರಿ, ವಿತ್ತಾಧಿಕಾರಿ ಪ್ರೊ.ಲಕ್ಷ್ಮಣ ರಾಜನಾಳಕರ, ಸಿಂಡಿಕೇಟ್ ಸದಸ್ಯ ವಿಜಯ ಭಾಸ್ಕರ್, ವಿವಿಧ ನಿಕಾಯಗಳ ಡೀನ್, ಸಿಂಡಿಕೇಟ್ ಮತ್ತು ವಿದ್ಯಾ ವಿಷಯಕ್ ಪರಿಷತ್ ಸದಸ್ಯರು ಭಾಗವಹಿಸಿದ್ದರು. ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ನಿರೂಪಣೆ ಮಾಡಿದರು. ಗುವಿವಿ ಸಂಗೀತ ವಿಭಾಗದ ಡಾ.ಲಕ್ಷ್ಮೀಶಂಕರ ಜೋಶಿ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಅಧಿಕೃತ ಗೀತೆ ಪ್ರಸ್ತುತಪಡಿಸಲಾಯಿತು.

ಈ ಹದಿನಾಲ್ಕು ಶಬ್ದ ನೆನಪಿಡಿ

ಯಾವುದೇ ಕ್ಷೇತ್ರ ವಿಫಲವಾದರೆ ಸುಧಾರಿಸಿಕೊಳ್ಳಬಹುದು. ಆದರೆ ಕೃಷಿ ಕ್ಷೇತ್ರ ವಿಫಲವಾದರೆ ಎಲ್ಲವೂ ವಿಫಲವಾದಂತೆ. ಜ್ಞಾನದ ಫಲ ಪಡೆಯಬೇಕಾದರೆ ಸ್ವಚ್ಛ, ಸಂಶುದ್ಧ, ಸುರಕ್ಷೆ, ಸ್ವಾದಿಷ್ಟ, ಸಾತ್ವಿಕ, ಸಮಾರಸ, ಸಂಸ್ಕಲಿತ, ಸುಪೇಕ್ಷಿತ, ಸ್ವಾರಸ್ಯ, ಸಾಸ್ಥೃ, ಸೌಖ್ಯ, ಶ್ರೇಷ್ಠ, ಸುಮೌಲ್ಯ, ಸಂಪೂರ್ಣ ಎಂಬ ಈ ಹದಿನಾಲ್ಕು ಶಬ್ದಗಳತ್ತ ಪದವೀಧರರು ಗಮನಿಸಬೇಕು. ಇದು ಆಹಾರಕ್ಕೂ, ಜ್ಞಾನಾರ್ಜನೆಗೂ ಅನ್ವಯವಾಗುತ್ತದೆ ಎಂದು ಆಹಾರ ತಜ್ಞರೂ ಆದ ಡಾ.ಪ್ರಕಾಶ್ ಹೇಳಿದರು.

ಪದವಿ ಮುಗಿದ ಕೂಡಲೇ ಉದ್ಯೋಗ


ಭಾರತದ ಜನಸಂಖ್ಯೆಯಲ್ಲಿ ಶೇ.25 ಯುವಕರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಳಗೊಂಡಿದ್ದಾರೆ. ಗುಲ್ಬರ್ಗ ವಿವಿ ಜಾಗತಿಕ ಮಟ್ಟದ ಅತ್ತುತ್ತಮ ವಿಶ್ವವಿದ್ಯಾಲಯವಾಗಲು ಎಲ್ಲ ಅವಕಾಶಗಳು ಮುಕ್ತವಾಗಿವೆ. ನಮ್ಮ ಮೊದಲ ಆದ್ಯತೆ ಮತ್ತು ತಂತ್ರಗಾರಿಕೆ ಎಂದರೆ, ವಿವಿಧ ವಿಷಯಗಳತ್ತ ಗಮನ ವಹಿಸಬೇಕು. ಆಥರ್ಿಕ ಪರಿಣಾಮದ ಜತೆಗೆ ರಾಷ್ಟ್ರೀಯ ಪಂಥಾಹ್ವಾನಗಳನ್ನು ಎದುರಿಸಬೇಕು. ಜ್ಞಾನ ಕೇಂದ್ರಗಳನ್ನು ಪೋಷಿಸಲು ಉತ್ತಮ ಮಾನವ ಹೂಡಿಕೆ ಮಾಡಬೇಕು. ಪದವಿ ಮುಗಿದ ತಕ್ಷಣ ಉದ್ಯೋಗ ದೊರಕಿಸುವ ವ್ಯವಸ್ಥೆ ಮಾಡಲೇಬೇಕು. ಉದ್ಯೋಗಕ್ಕೆ ಸನ್ನದ್ಧರಾದವರನ್ನು ಉದ್ದಿಮೆದಾರರೊಂದಿಗೆ ಸಂಪರ್ಕ ಏರ್ಪಡಿಸುವ ವ್ಯವಸ್ಥೆ ವಿವಿ ಮಾಡಬೇಕು. ಉದ್ಯೋಗಸ್ಥರಾದ ಕೂಡಲೇ ಕಲಿಕೆ ನಿಲ್ಲಿಸದೆ ನಿರಂತರ ಕಲಿಕಾ ಪ್ರಯತ್ನದಲ್ಲಿರಬೇಕು ಎಂದು ಡಾ.ಪ್ರಕಾಶ್ ಸಲಹೆ ನೀಡಿದರು.

ಮೂವರಿಗೆ ಗೌರವ ಡಾಕ್ಟರೇಟ್

ಗುಲ್ಬರ್ಗ ವಿವಿ 37ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಪಡೆದಿದ್ದು ವಿಶೇಷವೆನಿಸಿತು. 28,861 ವಿದ್ಯಾರ್ಥಿಗಳಿಗೆ ಸ್ನಾತಕ, ಸ್ನಾತಕೋತ್ತರ, ಸ್ನಾತಕೋತ್ತರ ಡಿಪ್ಲೊಮಾ ಹಾಗೂ 237 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್ಡಿ ಹಾಗೂ ಚಿನ್ನದ ಪದಕ ಸೇರಿ 29,183 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬೀದರ್ ಚಿದಂಬರಾಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಶ್ರೀ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮತ್ತು ಬೀದರ್ನ ಸಂಗೀತ ಕಲಾವಿದ ಪಂ.ವೀರಭದ್ರಪ್ಪ ಗಾದಗೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.