ಬೆಂಗಳೂರು: ಕೆ.ಶ್ರೀಕಾಂತ್ ಸಾರಥ್ಯದ ಬೆಂಗಳೂರು ರ್ಯಾಪ್ಟರ್ಸ್ ತಂಡ 4ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ (ಪಿಬಿಎಲ್) ಸೆಮಿಫೈನಲ್ಗೇರಿತು. ಆರಂಭಿಕ ಹಿನ್ನಡೆ ನಡುವೆಯೂ ಬೆಂಗಳೂರು ತಂಡ ಎರಡು ಮುಖಾಮುಖಿ ಬಾಕಿ ಇರುವಾಗಲೇ 3-0 ಯಿಂದ ಮಾಜಿ ಚಾಂಪಿಯನ್ ಚೆನ್ನೈ ಸ್ಮ್ಯಾಷರ್ಸ್ ತಂಡವನ್ನು ಮಣಿಸಿತು.
ಪಂದ್ಯದ ಮೊದಲ ಕಾದಾಟ ಪುರುಷರ ಡಬಲ್ಸ್ ವಿಭಾಗದಲ್ಲಿ ಹೆನೆಂದ್ರಾ ಸೆಟಿಯಾವನ್-ಮೊಹಮದ್ ಅಶನ್ ಜೋಡಿ 15-14, 9-15, 11-15 ರಿಂದ ಕ್ರಿಸ್ ಅಡಾಕ್-ಓರ್ ಚಿನ್ಚಂಗ್ ಜೋಡಿ ಎದುರು ಸೋಲನುಭವಿಸಿತು. ಬಳಿಕ ಪುರುಷರ ಸಿಂಗಲ್ಸ್ ವಿಭಾಗದ ಕಾದಾಟದಲ್ಲಿ ಬೆಂಗಳೂರು ತಂಡದ ಸ್ಟಾರ್ ಆಟಗಾರ ಸಾಯಿಪ್ರಣೀತ್, ಟ್ರಂಪ್ ಘೋಷಣೆಯೊಂದಿಗೆ ಕಣಕ್ಕಿಳಿದ ಅನುಭವಿ ಆಟಗಾರ ಚೆನ್ನೈ ತಂಡದ ಪಿ.ಕಶ್ಯಪ್ ಅವರನ್ನು 15-11, 15-12 ನೇರ ಗೇಮ್ಳಿಂದ ಮಣಿಸಿದರು. ಇದರೊಂದಿಗೆ ಚೆನ್ನೈ ತಂಡ ಇದ್ದ ಒಂದು ಅಂಕ ಮೈನಸ್ ಮಾಡಿಕೊಂಡಿತು. ನಂತರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಕಾದಾಟದಲ್ಲಿ ಟ್ರಂಪ್ ಪಂದ್ಯವಾಡಿದ ಬೆಂಗಳೂರು ತಂಡದ ನಾಯಕ ಕೆ.ಶ್ರೀಕಾಂತ್ 15-10, 15-10 ನೇರ ಗೇಮ್ಳಿಂದ ವೀ ಫೆಂಗ್ ಚಾಂಗ್ ಅವರನ್ನು ಮಣಿಸಿದರು. ಎರಡೂ ಗೇಮ್ಳಲ್ಲೂ ಭರ್ಜರಿ ನಿರ್ವಹಣೆ ತೋರಿದ ಶ್ರೀಕಾಂತ್ ಎದುರು ಎದುರಾಳಿ ಆಟಗಾರ ಪ್ರತಿರೋಧ ನೀಡಲು ವಿಫಲರಾದರು. ಇದರೊಂದಿಗೆ ಬೆಂಗಳೂರು ತಂಡ ಇನ್ನು ಎರಡೂ ಪಂದ್ಯಗಳು ಬಾಕಿ ಇರುವಂತೆಯೇ ಗೆಲುವು ಖಚಿತಪಡಿಸಿಕೊಂಡಿತು. ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಬೆಂಗಳೂರು ತಂಡದ ತಿರಾಂಗ್ ವು 10-15, 15-14, 15-10 ಗೇಮ್ಳಿಂದ ಸಂಗ್ ಜೀ ಹ್ಯೂನ್ ಎದುರು ಶರಣಾದರು.